ಮುಂಬೈ: ಬಡ ಕುಟುಂಬದ ಹೆಣ್ಣುಮಕ್ಕಳು, ಮಹಿಳೆಯರಿಗಾಗಿ ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ‘ಲಡ್ಕಿ ಬಹಿನ್’ ಯೋಜನೆಯ ಆಡಿಟ್ ವೇಳೆ ಭಾರೀ ಅಕ್ರಮಗಳು ಬೆಳಕಿಗೆ ಬಂದಿವೆ. ಮಹಿಳೆಯರಿಗಾಗಿಯೇ ಮೀಸಲಾದ ಈ ಯೋಜನೆಯಡಿ 14,000ಕ್ಕೂ ಹೆಚ್ಚು ಗಂಡಸರೂ ಹಣಕಾಸು ನೆರವು ಪಡೆಯುತ್ತಿರುವ ವಿಚಾರ ಪತ್ತೆಯಾಗಿದೆ.
ಕಳೆದ ವರ್ಷ ಘೋಷಣೆಯಾಗಿರುವ ಈ ಯೋಜನೆಯಡಿ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ 21ರಿಂದ 65 ವರ್ಷದ ನಡುವಿನ ಮಹಿಳೆಯರು, ಹೆಣ್ಣುಮಕ್ಕಳಿಗೆ ಮಾಸಿಕ 1,500 ರು. ನೀಡಲಾಗುತ್ತದೆ. ಯೋಜನೆ ಜಾರಿಯಾಗಿ 10 ತಿಂಗಳ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಡಿಟ್ ನಡೆಸಿದ್ದು, ಈ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.
ಆನ್‌ಲೈನ್ ನೋಂದಣಿ ವ್ಯವಸ್ಥೆಯಲ್ಲಿ ವಂಚನೆ ಮಾಡಿ ತಮ್ಮನ್ನು ತಾವು ಮಹಿಳೆಯರು ಎಂಬಂತೆ ಬಿಂಬಿಸಿಕೊಂಡು 14,298 ಪುರುಷರೂ ಯೋಜನೆಯಡಿ ಸುಮಾರು 21.44 ಕೋಟಿ ರು. ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಯೋಜನೆಯಡಿ ದೊಡ್ಡಪ್ರಮಾಣದಲ್ಲಿ ಅನರ್ಹರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 1,640 ಕೋಟಿ ರು. ನಷ್ಟವಾಗಿದೆ. ಯೋಜನೆಯಡಿ ಒಂದು ಕುಟುಂಬದ ಇಬ್ಬರು ಮಹಿಳೆಯರಷ್ಟೇ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಆದರೆ, ಅದೇ ಕುಟುಂಬದ ಸುಮಾರು 7.97 ಲಕ್ಷಕ್ಕೂ ಹೆಚ್ಚು ಮೂರನೇ ಮಹಿಳೆಯರೂ ಹೆಸರು ದಾಖಲಿಸಿ ಸರ್ಕಾರಕ್ಕೆ ಬೊಕ್ಕಸಕ್ಕೆ 1,196 ಕೋಟಿ ನಷ್ಟ ಉಂಟು ಮಾಡಿದ್ದಾರೆ.
ಇನ್ನು ಈ ಯೋಜನೆ 65 ವರ್ಷದವರೆಗಿನ ಮಹಿಳೆಯರಿಗಷ್ಟೇ ಸೀಮಿತ. ಆದರೆ 2.87 ಲಕ್ಷದಷ್ಟು 65 ವರ್ಷ ದಾಟಿದ ಮಹಿಳೆಯರೂ ಹೆಸರು ನೋಂದಾಯಿಸಿಕೊಂಡಿದ್ದು, ಇದರಿಂದ ಸರ್ಕಾರಕ್ಕೆ 431 ಕೋಟಿ ರು. ನಷ್ಟವುಂಟು ಮಾಡಿದ್ದಾರೆ, ಸ್ವಂತ ಕಾರು ಹೊಂದಿರುವ 1.62 ಲಕ್ಷ ಮಹಿಳೆಯರೂ ಫಲಾನುಭವಿಗಳಾಗಿರುವುದು ಪತ್ತೆಹಚ್ಚಲಾಗಿದೆ.