ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿದ್ದು ದೆಹಲಿ ಆಸ್ಪತ್ರೆಗೆ ದಾಖಲು

KannadaprabhaNewsNetwork | Updated : Apr 03 2025, 06:57 AM IST

ಸಾರಾಂಶ

ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಟನಾ: ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಯಮಿತ ಆರೋಗ್ಯ ತಪಾಸಣೆ ವೇಳೆ ಅವರ ರಕ್ತದ ಸಕ್ಕರೆ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ 2 ದಿನಗಳಿಂದಲೂ ಅನಾರೋಗ್ಯದಲ್ಲಿದ್ದು, ಬುಧವಾರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಭೂಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಾಲು ವಿರುದ್ಧ ತನಿಖೆ ನಡೆಸುತ್ತಿರುವ ನಡುವೆಯೇ ಈ ಬೆಳವಣಿಗೆಯಾಗಿದೆ. 2004-2009ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ, ಡಿ ಗ್ರೂಪ್ ನೌಕರರ ನೇಮಕಾತಿಗೆ ಭೂಮಿಯನ್ನು ಲಂಚವಾಗಿ ಪಡೆದ ಆರೋಪ ಅವರ ಮೇಲಿದೆ.

ಹಡಗಿನಲ್ಲಿ ಸಾಗಿಸುತ್ತಿದ್ದ 2500 ಕೇಜಿ ಡ್ರಗ್ಸ್‌ ಜಫ್ತಿ ಮಾಡಿದ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯ ಮಂಚೂಣಿ ಯುದ್ಧನೌಕೆ ಐಎನ್‌ಎಸ್‌ ತರ್ಕಶ್‌ ಮಹತ್ವದ ಕಾರ್ಯಾಚರಣೆ ನಡೆಸಿದ್ದು. ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಹಡಗೊಂದರಲ್ಲಿ ಸಂಗ್ರಹವಾಗಿದ್ದ ಬರೋಬ್ಬರಿ 2,500 ಕೇಜಿ ಮಾದಕ ವಸ್ತು ವಶಪಡಿಸಿಕೊಂಡಿದೆ. ಮಾ.31ರಂದು ಹಲವು ಹಡಗುಗಳ ಅನುಮಾನಸ್ಪದ ಚಲನವಲನದ ಬಗ್ಗೆ ಭಾರತೀಯ ನೌಕಾಪಡೆಗೆ ಖಚಿತ ಸಿಕ್ಕಿತ್ತು. ಈ ಬೆನ್ನಲ್ಲೇ ಐಎನ್‌ಎಸ್‌ ತರ್ಕಶ್‌ ಯುದ್ಧನೌಕೆಯು ಪಿ8ಐ ಸಾಗರ ಕಣ್ಗಾವಲು ವಿಮಾನ ಮತ್ತು ಮುಂಬೈನ ಸಾಗರ ಕಾರ್ಯಾಚರಣೆ ಕೇಂದ್ರದ ಸಂಘಟಿತ ಪ್ರಯತ್ನದಿಂದಾಗಿ ಶಂಕಿತ ದೋಣಿಯೊಂದನ್ನು ತಡೆದು ನಿಲ್ಲಿಸಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಮಾದಕ ವಸ್ತು ಪ್ಯಾಕೇಟ್‌ಗಳು ಪತ್ತೆಯಾಗಿವೆ. ಹೆಚ್ಚಿನ ತಪಾಸಣೆ ಮತ್ತು ವಿಚಾರಣೆ ನಡೆಸಿದಾಗ ಹಡಗಿನಲ್ಲಿರುವ ವಿವಿಧ ಸರಕು ವಿವಿಧ ವಿಭಾಗಗಳಲ್ಲಿ ಸಂಗ್ರಹಿಸಲಾದ 2386 ಕೇಜಿ ಹಶಿಶ್‌ ಮತ್ತು 121 ಕೇಜಿ ಹೆರಾಯಿನ್‌ ಸೇರಿದಂತೆ 2500 ಕೇಜಿಗೂ ಹೆಚ್ಚು ಮಾದಕ ವಸ್ತು ಪತ್ತೆಯಾಗಿದೆ.

ಹೆಚ್ಚು ಮಾರಾಟವಾದ ಕಾರು: ವ್ಯಾಗನ್‌ಆರ್‌ ನಂ.1, ಪಂಚ್‌ ನಂ.2

ನವದೆಹಲಿ: 2025ರ ಹಣಕಾಸು ವರ್ಷದಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನ್‌ಆರ್‌ ಕಾರು ಅತಿ ಹೆಚ್ಚು ಮಾರಾಟವಾಗಿದ್ದು, ದೇಶದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. 1.98 ಲಕ್ಷ ಕಾರುಗಳೊಂದಿಗೆ ವ್ಯಾಗನ್‌ ಆರ್‌ ಮೊದಲ ಸ್ಥಾನ ಪಡೆದುಕೊಂಡರೆ, ಇದರ ನಂತರದಲ್ಲಿ ಟಾಟಾ ಪಂಚ್‌ 1.96 ಲಕ್ಷ ಮಾರಾಟವಾಗಿ 2ನೇ ಸ್ಥಾನದಲ್ಲಿದೆ. ಹ್ಯುಂಡೈನ ಕ್ರೆಟಾ 3ನೇ ಸ್ಥಾನದಲ್ಲಿದ್ದು, 1.94 ಲಕ್ಷ ಕಾರುಗಳು ಮಾರಾಟವಾಗಿವೆ. ಉಳಿದಂತೆ ಎಸ್‌ಯುವಿ ಕಾರುಗಳು ಜನರಿಗೆ ಅತಿ ಹೆಚ್ಚು ಪ್ರಿಯವಾಗಿದ್ದು, ಎಲ್ಲಾ ಕಂಪನಿಗಳ ಒಟ್ಟು ಲೆಕ್ಕದಲ್ಲಿ ಇವುಗಳು ಹೆಚ್ಚು ಪಾಲು ಹೊಂದಿವೆ.

ಕಾಶ್ಮೀರದಲ್ಲಿ ಪಾಕ್‌ ಗುಂಡಿನ ದಾಳಿ, ಒಳನುಸುಳುವ ಯತ್ನ: ಭಾರತದಿಂದ ತಿರುಗೇಟು

ನವದೆಹಲಿ: ಜಮ್ಮು ಕಾಶ್ಮೀರದ ಪೂಂಛ್‌ ವಲಯದಲ್ಲಿ ಪಾಕಿಸ್ತಾನ ಸೇನೆ ಕದನ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳುವ ಯತ್ನ ಮಾಡಿದ್ದಲ್ಲದೇ ಅಪ್ರಚೋದಿತ ಗುಂಡಿನ ದಾಳಿ ಕೂಡಾ ನಡೆಸಿದೆ. ಈ ಸಂದರ್ಭದಲ್ಲಿ ಭಾರತವು ಪ್ರತಿದಾಳಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಸೇನಾ ವಕ್ತಾರರು, ‘ಏ.1ರಂದು ಕೃಷ್ಣ ಘಾಟಿ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ಗಡಿನಿಯಂತ್ರಣ ರೇಖೆ ದಾಟಲು ಪ್ರಯತ್ನಿಸಿದೆ. ಜೊತೆಗೆ ಭಾರತದ ಗಡಿಯೊಳಗೆ ಗುಂಡಿನ ದಾಳಿ ಕೂಡಾ ನಡೆಸಿದೆ. ಆದರೆ ನಮ್ಮ ಸೇನೆಯು ನಿರ್ಣಾಯಕ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಉತ್ತರಿಸಿದ್ದು, ಪರಿಸ್ಥಿತಿ ನಮ್ಮ ಹಿಡಿತದಲ್ಲಿದೆ’ ಎಂದಿದ್ದಾರೆ.

ಹಸೀನಾ ಪಕ್ಷದ 1 ಲಕ್ಷ ಕಾರ್‍ಯಕರ್ತರು ಭಾರತಕ್ಕೆ ವಲಸೆ: ಬಾಂಗ್ಲಾ ಕ್ಯಾತೆ

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಮುಹಮ್ಮದ್‌ ಯೂನುಸ್‌ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಕ್ಯಾತೆ ತೆಗೆಯುತ್ತಿದ್ದು, ಇದೀಗ ಹಸೀನಾ ಪಕ್ಷದ ಕಾರ್ಯಕರ್ತರು ಭಾರತದಲ್ಲಿ ನೆಲೆಸಿದ್ದಾರೆ ಎಂದು ಅಲ್ಲಿನ ಮಾಧ್ಯಮ ಸಲಹೆಗಾರ ಹೇಳಿಕೆ ನೀಡಿದ್ದಾರೆ. ಢಾಕಾದಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಧ್ಯಮ ಸಲಹೆಗಾರ ಮಹಫುಜ್‌ ಆಲಂ,‘ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವಧಿಯಲ್ಲಿ ಜನರ ನಾಪತ್ತೆ ಹೆಚ್ಚಾಗಿದೆ. ಹಸೀನಾ 100ಕ್ಕೂ ಹೆಚ್ಚು ಪ್ರಕರಣದಲ್ಲಿ ಸಿಲುಕಿದ್ದಾರೆ. ಇಂಥ ಭಯೋತ್ಪಾದನಾ ಮನೋಭಾವ ಉಳ್ಳವರಿಗೆ ಭಾರತ ಆಶ್ರಯ ನೀಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಇವರಷ್ಟೇ ಅಲ್ಲದೇ ಹಸೀನಾ ಅವರ ಆವಾಮಿ ಲೀಗ್‌ ಪಕ್ಷದ 1 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಭಾರತಕ್ಕೆ ವಲಸೆ ಹೋಗಿದ್ದಾರೆ’ ಎಂದು ಅವರು ಹೇಳಿದರು.

Share this article