ಕೇರಳದ ವಯನಾಡ್‌ನ ಚೂರಲ್‌ಮಲೆ, ಮುಂಡಕ್ಕೈ ಸೇರಿ 4 ಗ್ರಾಮಗಳ ಭೀಕರ ಭೂ ಕುಸಿತ ದುರಂತ ಸಾವು 270ಕ್ಕೇರಿಕೆ!

KannadaprabhaNewsNetwork |  
Published : Aug 01, 2024, 12:15 AM ISTUpdated : Aug 01, 2024, 10:18 AM IST
ವಯನಾಡು ಭೂಕುಸಿತ | Kannada Prabha

ಸಾರಾಂಶ

ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲೆ, ಮುಂಡಕ್ಕೈ ಸೇರಿ 4 ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದ ಮತ್ತಷ್ಟು ಭೀಕರತೆ ಬುಧವಾರದ ವೇಳೆಗೆ ಅನಾವರಣಗೊಂಡಿದೆ.

ವಯನಾಡು: ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲೆ, ಮುಂಡಕ್ಕೈ ಸೇರಿ 4 ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದ ಮತ್ತಷ್ಟು ಭೀಕರತೆ ಬುಧವಾರದ ವೇಳೆಗೆ ಅನಾವರಣಗೊಂಡಿದೆ.

\ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದರೆ, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಭಾರೀ ಹುಡುಕಾಟ ಮುಂದುವರೆಸಲಾಗಿದೆ. ಆದರೆ ಘಟನಾ ಸ್ಥಳದಲ್ಲಿ ಮುಂದುವರೆದಿರುವ ಮಳೆ, ಪ್ರತಿಕೂಲ ಪರಿಸ್ಥಿತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ. 4 ಗ್ರಾಮಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿರುವ ಕಾರಣ, ಸಾವಿನ ಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವ ದೊಡ್ಡ ಆತಂಕ ಕಾಡಿದೆ. ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ವಯನಾಡಿಗೆ ಭೇಟಿ ನೀಡಲಿದ್ದಾರೆ.

ನಾಲ್ಕೂ ಗ್ರಾಮಗಳನ್ನೂ ತಲುಪಲು ರಕ್ಷಣಾ ತಂಡಗಳು ಬುಧವಾರದ ವೇಳೆಗೆ ಯಶಸ್ವಿಯಾಗಿದ್ದು, ಎಲ್ಲೆಂದರಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳು, ಮನೆ, ಕಟ್ಟಡ, ಅರಣ್ಯ, ಕೆಸರಿನಲ್ಲಿ ಶವಗಳು ಸಿಕ್ಕಿಬಿದ್ದಿರುವ ದೃಶ್ಯಗಳು ಕಾಣಸಿಕ್ಕಿವೆ. ಈವರೆಗೂ 250ಕ್ಕೂ ಹೆಚ್ಚು ಜನರು ದುರ್ಘಟನೆಗೆ ಬಲಿಯಾಗಿದ್ದು ಖಚಿತಪಟ್ಟಿದ್ದು, ಈ ಪೈಕಿ 130 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 75 ಶವಗಳ ಗುರುತು ಪತ್ತೆಯಾಗಿದ್ದು, ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್‌ನ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮುರಿದು ಬಿದ್ದ ಮನೆ, ಕಟ್ಟಡಗಳ ಅಡಿಯಲ್ಲಿ ಜನರ ಪತ್ತೆಗೆ ಹುಡುಕಾಟ ಮುಂದುವರೆಸಿವೆ. ಮನೆ, ಕೆಸರೊಳಗೆ ಸಿಕ್ಕಿಬಿದ್ದಿರಬಹುದಾದ ವ್ಯಕ್ತಿಗಳ ಪತ್ತೆಗೆ ‘ಇಂಟೆಲಿಜೆಂಟ್‌ ಬರೀಡ್‌ ಆಬ್ಜೆಕ್ಟ್‌ ಡಿಟೆಕ್ಷನ್‌ ಸಿಸ್ಟಮ್‌’ ಅನ್ನು ಬಳಸಲಾಗುತ್ತಿದೆ. ಅಲ್ಲದೆ ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಅಗತ್ಯವಾದ ಬೃಹತ್‌ ಯಂತ್ರಗಳನ್ನು ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ. ಜೊತೆಗೆ ಸಂಪರ್ಕ ಕಡಿತಗೊಂಡ ಗ್ರಾಮಗಳ ನಡುವೆ ತುರ್ತು ಸಂಪರ್ಕ ಕಲ್ಪಿಸಲು ಅಗತ್ಯವಾದ ತಾತ್ಕಾಲಿಕ ಸೇತುವೆಯನ್ನು ಸೇನೆ ಬೆಂಗಳೂರಿನಿಂದ ವಯನಾಡಿಗೆ ರಸ್ತೆ ಮೂಲಕ ಸಾಗಿಸುತ್ತಿದೆ.

ಕುಳಿತ, ಮಲಗಿದ ಸ್ಥಿತಿಯಲ್ಲೇ ಸಾವು:

ಮಂಗಳವಾರ ಭೂಕುಸಿದ ವೇಳೆ ಹರಿದುಬಂದ ಭಾರೀ ಕೆಸರಿನ ಪರಿಣಾಮ ಜನರು ತಾವು ಕುರ್ಚಿಯಲ್ಲಿ ಕುಳಿತ, ಮಂಚದಲ್ಲಿ ಮಲಗಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಕ್ಷಣಾ ಕಾರ್ಯಚರಣೆಗೆ ತೆರಳಿದ್ದ ಸ್ಥಳೀಯರು ಇಂಥ ದೃಶ್ಯಗಳನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ತಾತ್ಕಾಲಿಕ ಸೇತುವೆ:

ಈ ನಡುವೆ ಚೂರಲ್‌ಮಲೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಒಮ್ಮೆಗೆ ಒಬ್ಬ ವ್ಯಕ್ತಿ ಸಂಚರಿಸಬಹುದಾದ ತಾತ್ಕಾಲಿಕ ಸೇತುವೆಯೊಂದನ್ನು ಸೇನೆ ಬುಧವಾರ ನಿರ್ಮಿಸಿದೆ. ಹೀಗಾಗಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಬಲ ಬಂದಿದೆ.

ಕಾಪ್ಟರ್‌, ಶ್ವಾನ:

ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸೇನೆ ಎರಡು ಹೆಲಿಕಾಪ್ಟರ್‌ ಮತ್ತು ಶ್ವಾನದಳಗಳನ್ನು ಬಳಕೆ ಮಾಡುತ್ತಿದೆ. ಸೇನೆಯ 300ಕ್ಕೂ ಹೆಚ್ಚು ಯೋಧರು ಈಗಾಗಲೇ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಕೇಂದ್ರ ಸಚಿವ ಜಾರ್ಜ್‌ ಭೇಟಿ, ಮೋದಿ ನಿಗಾ:ಕೇರಳ ಮೂಲದ ಕೇಂದ್ರ ಸಚಿವ ಜಾರ್ಜ್‌ ಕುರಿಯನ್‌ ಬುಧವಾರ ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಇಡೀ ಬೆಳವಣಿಗೆ ಮೇಲೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ನಿಗಾ ಇಟ್ಟಿದ್ದು, ಕೇರಳಕ್ಕೆ ಸಾಧ್ಯವಿರುವ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ಕಾರ್ಯಾಚರಣೆ ಮೇಲೆ ನಿಗಾಕ್ಕೆ ತಮ್ಮನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂಡೋಮ್‌ನ ಜಿಎಸ್‌ಟಿ ಕಡಿತ ಮಾಡಲಾಗದ ದುಸ್ಥಿತಿಗೆ ಪಾಕ್‌!
ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ