ವಿಶ್ವದಲ್ಲೇ ಅತಿದೊಡ್ಡ ಸೈಬರ್‌ ವಂಚನೆ : 1600 ಕೋಟಿ ದತ್ತಾಂಶ ಲೀಕ್‌?

KannadaprabhaNewsNetwork |  
Published : Jun 21, 2025, 12:48 AM ISTUpdated : Jun 21, 2025, 05:20 AM IST
ಸೈಬರ್  | Kannada Prabha

ಸಾರಾಂಶ

ಆನ್‌ಲೈನ್‌ ಇತಿಹಾಸದಲ್ಲೇ ಅತಿದೊಡ್ಡ ಡೇಟಾ ಕಳ್ಳತನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ವಿಶ್ವಾದ್ಯಂತ 1600 ಕೋಟಿ ಆ್ಯಪಲ್‌, ಫೇಸ್‌ಬುಕ್‌, ಗೂಗಲ್‌, ಟೆಲಿಗ್ರಾಂ ಸೇರಿ ವಿವಿಧ ಸಂಸ್ಥೆಗಳು, ಸರ್ಕಾರಿಸೇವೆ ಬಳಕೆದಾರರ ಲಾಗಿನ್‌ ಸಹಿತ ಪಾಸ್‌ವರ್ಡ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿರುವ ಆತಂಕ ಎದುರಾಗಿದೆ.

 ವಾಷಿಂಗ್ಟನ್‌: ಆನ್‌ಲೈನ್‌ ಇತಿಹಾಸದಲ್ಲೇ ಅತಿದೊಡ್ಡ ಡೇಟಾ ಕಳ್ಳತನ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ವಿಶ್ವಾದ್ಯಂತ 1600 ಕೋಟಿ ಆ್ಯಪಲ್‌, ಫೇಸ್‌ಬುಕ್‌, ಗೂಗಲ್‌, ಟೆಲಿಗ್ರಾಂ ಸೇರಿ ವಿವಿಧ ಸಂಸ್ಥೆಗಳು, ಸರ್ಕಾರಿಸೇವೆ ಬಳಕೆದಾರರ ಲಾಗಿನ್‌ ಸಹಿತ ಪಾಸ್‌ವರ್ಡ್‌ಗಳು ಆನ್‌ಲೈನ್‌ನಲ್ಲಿ ಲೀಕ್‌ ಆಗಿರುವ ಆತಂಕ ಎದುರಾಗಿದೆ.

ಮೇ ತಿಂಗಳಲ್ಲಿ 18 ಕೋಟಿ ಆನ್‌ಲೈನ್ ದಾಖಲೆಗಳು ಕಳವಾಗಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಸೈಬರ್‌ ತಜ್ಞರ ಪ್ರಕಾರ ಇದು ಆನ್‌ಲೈನ್‌ ಡೇಟಾ ಕಳ್ಳತನದ ಕುರಿತು ಸಿಕ್ಕ ಸಣ್ಣ ಸುಳಿವಷ್ಟೇ. ಅಸಲಿಗೆ ಭಾರೀ ಪ್ರಮಾಣದಲ್ಲಿ ಕಾರ್ಪೊರೇಟ್‌ ಕಂಪನಿಗಳು ಸೇರಿ ಬಳಕೆದಾರರ ಡೇಟಾ ಕಳವಾಗಿರುವ ಸಾಧ್ಯತೆ ಇದೆ. ಇದು ವಿಶ್ವದಲ್ಲೇ ಅತಿದೊಡ್ಡ ಸೈಬರ್‌ ಲೀಕ್‌ ಆಗಲಿರುವ ಸಾಧ್ಯತೆ ಇದೆ ಎಂದು ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ.

ಸೈಬರ್‌ ಸೆಕ್ಯುರಿಟಿ ತಜ್ಞರ ಪ್ರಕಾರ 30 ಡೇಟಾ ಸೆಟ್‌ಗಳು ಲೀಕ್‌ ಆಗಿದ್ದು, ಪ್ರತಿಯೊಂದು ಸೆಟ್‌ಗಳೂ 300 ಕೋಟಿಗೂ ಹೆಚ್ಚು ದಾಖಲೆಗಳನ್ನು ಹೊಂದಿವೆ. ಸಾಮಾಜಿಕ ಜಾಲತಾಣದ ಲಾಗಿನ್‌, ಪಾಸ್‌ವರ್ಡ್‌ಗಳು, ವಿಪಿಎನ್‌ ಲಾಗಿನ್‌ಗಳು, ಕಾರ್ಪೊರೆಟ್‌ ಕಂಪನಿಗಳ ಮಾಹಿತಿಗಳು ಮತ್ತು ಡೆವಲಪರ್‌ ಪ್ಲಾಟ್‌ಫಾರ್ಮ್‌ಗಳು ಈ ಡೇಟಾ ಸೆಟ್‌ನಲ್ಲಿವೆ. ಈ ಡೇಟಾಗಳು ಈ ವರ್ಷದ ಆರಂಭದಲ್ಲೇ ಬಹಿರಂಗವಾಗಿವೆ ಎನ್ನಲಾಗಿದೆ.

ಇದು ಕೇವಲ ಲೀಕ್‌ ಅಷ್ಟೇ ಅಲ್ಲ, ಬದಲಾಗಿ ಸಾಮೂಹಿಕ ಶೋಷಣೆಯ ನೀಲನಕ್ಷೆ. ಈ ಹಿಂದೆ ಕಳವಾದ ಡೇಟಾಗಳು ಮತ್ತೆ ಪ್ರಕಟವಾಗಿದ್ದೂ ಅಲ್ಲ, ಬದಲಾಗಿ ಹೊಸದಾಗಿ ಆದ ಮಾಹಿತಿ ಕಳ್ಳತನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೈಬರ್‌ ಸೆಕ್ಯುರಿಟಿ ದಾಳಿ, ಹಣಕಾಸು ವಂಚನೆ, ವ್ಯಾವಹಾರಿಕ ಇ-ಮೇಲ್‌ಗಳ ಕದ್ದು ಓದುವಿಕೆ ಮತ್ತಿತರ ಕುಕೃತ್ಯಗಳಿಗೆ ಈ ಡೇಟಾಗಳನ್ನು ಬಳಸುವ ಆತಂಕವಿದೆ ಎಂದು ಹೇಳಲಾಗಿದೆ.

ಸುರಕ್ಷತೆ ಹೆಚ್ಚಿಸಿಕೊಳ್ಳಿ: ಗೂಗಲ್‌

ಈ ರೀತಿಯ ಡೇಟಾ ಕಳ್ಳತನದ ಕಾರಣಕ್ಕಾಗಿಯೇ ಗೂಗಲ್‌ ತನ್ನ ಬಳಕೆದಾರರಿಗೆ ಗೂಗಲ್‌ ಖಾತೆಯ ಭದ್ರತೆ ಮೇಲ್ದರ್ಜೆಗೇರಿಸುವಂತೆ ಸಲಹೆ ನೀಡುತ್ತಾ ಬಂದಿದೆ. ಹಲವರು ಕೇವಲ ಪಾಸ್‌ವರ್ಡ್‌ ಅನ್ನೇ ನಂಬಿಕೊಂಡು ಗೂಗಲ್‌ಗೆ ಸೈನ್‌ ಇನ್‌ ಆಗುತ್ತಿದ್ದಾರೆ. ಇದೀಗ ಪಾಸ್‌ವರ್ಡ್‌ ಜತೆಗೆ ಎರಡು ಹಂತದ ಪ್ರಮಾಣೀಕರಣ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಗೂಗಲ್‌ ಹೇಳಿದೆ. ಪಾಸ್‌ಕೀಯನ್ನೂ ಬಳಸುವ ಮೂಲಕ ಸೈಬರ್‌ ಕಳ್ಳರಿಂದ ದೂರವಿರಬಹುದು ಎಂದೂ ಹೇಳಿದೆ.ಕಳವಾಗಿದ್ದು ಹೇಗೆ?

ಸೈಬರ್‌ ಸೆಕ್ಯುರಿಟಿ ಸಂಸ್ಥೆ ಪೆಟ್‌ಕಾಸ್ಕಸ್‌ ಪ್ರಕಾರ, ಇನ್ಫೋಸ್ಟೀಲಿಂಗ್‌ ಮಾಲ್‌ವೇರ್‌ ಮೂಲಕ ಈ ಕಳ್ಳತನ ನಡೆದಿದೆ. ಸೈಬರ್‌ ಖದೀಮರು ಈ ಸಾಫ್ಟ್‌ವೇರ್‌ ಬಳಸಿಕೊಂಡು ಜನರ ಪಾಸ್‌ವರ್ಡ್‌ ಮತ್ತು ಇತರೆ ಮಾಹಿತಿಗಳನ್ನು ಸಾಮಾನ್ಯವಾಗಿ ಕದಿಯುತ್ತಾರೆ. ಬಳಿಕ ಅದನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುತ್ತಾರೆ. ಈ ಸಂಬಂಧ ಕೋಟ್ಯಂತರ ಪಾಸ್‌ವರ್ಡ್‌ಗಳನ್ನು ಸಂಗ್ರಹಿಟ್ಟ ವ್ಯಕ್ತಿಗಳನ್ನೂ ತಜ್ಞರು ಸಂಪರ್ಕಿಸಿ ಈ ವಿಚಾರ ಖಚಿತಪಡಿಸಿಕೊಂಡಿದ್ದಾರೆ. 

ತಜ್ಞರ ಪ್ರಕಾರ ಪ್ರತಿ ವಾರ ಇಂಥ ಹೊಸ ಡೇಟಾ ಸೆಟ್‌ಗಳು ಬಹಿರಂಗವಾಗುತ್ತಲೇ ಇವೆ. ಹೀಗಾಗಿ ಇನ್ಫೋಸ್ಟೀಲರ್‌ ಮಾಲ್‌ವೇರ್‌ ಅಪಾಯಕಾರಿಯಾಗಿರುವುದು ಸ್ಪಷ್ಟ. ವಿಶ್ವಾದ್ಯಂತ ಸುಮಾರು 500 ಕೋಟಿಗೂ ಹೆಚ್ಚು ಮಂದಿ ಅಂತರ್ಜಾಲ ಬಳಸುತ್ತಿದ್ದಾರೆ. ಇದರಲ್ಲಿ ಸುಮಾರು ಅರ್ಧದಷ್ಟು ಜನರ ಮಾಹಿತಿ ಲೀಕ್‌ ಆಗಿದೆ ಎಂದು ಹೇಳಲಾಗುತ್ತಿದೆ.

PREV
Read more Articles on

Recommended Stories

ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?