- ದರ್ಭಾಂಗ ಮನೆತನದ ಕೊನೆ ರಾಣಿ ಕಾಮಸುಂದರಿ
ದರ್ಭಾಂಗ (ಬಿಹಾರ): 1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬರೋಬ್ಬರಿ 600 ಕೆ.ಜಿ.ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ.
ಮಹಾರಾಜ ದಿ. ಕಾಮೇಶ್ವರ ಸಿಂಗ್ ಅವರ ಮೂರನೇ ರಾಣಿಯಾಗಿದ್ದ ಕಾಮಸುಂದರಿ ಅವರಿಗೆ ಮಕ್ಕಳಿರಲಿಲ್ಲ. 1932ರಲ್ಲಿ ಜನಿಸಿದ್ದ ರಾಣಿ ತಮ್ಮ 8ನೇಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಆ ಬಳಿಕ 1962ರಲ್ಲಿ ಪತಿ ತೀರಿಕೊಂಡ ನಂತರ 64 ವರ್ಷಗಳ ಕಾಲ ಒಂಟಿಯಾಗಿ ಜೀವನ ನಡೆಸಿದ್ದರು. ಅವರು ಕಳೆದ 6 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ದಾನಕ್ಕೆ ಹೆಸರುವಾಸಿ:
ಕಾಮಸುಂದರಿ ದೇವಿ ಅವರು ಕೊಡುಗೈ ದಾನಿ ಅಂತಲೇ ಜನಪ್ರಿಯತೆ ಗಳಿಸಿದ್ದರು. ಅದರಲ್ಲಿಯೂ 1962ರಲ್ಲಿ ಭಾರತ- ಚೀನಾ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ದೇಶಕ್ಕಾಗಿ ಅಪಾರ ಸಂಪತ್ತನ್ನು ದಾನ ಮಾಡಿದ್ದರು. ಅಂದು ಸರ್ಕಾರ ಯುದ್ಧ ಸಂದರ್ಭದಲ್ಲಿ ನೆರವು ಕೇಳಿದಾಗ ಮುಂದೆ ಬಂದಿದ್ದ ರಾಣಿ ಸುಮಾರು 600 ಕೇಜಿ ಚಿನ್ನವನ್ನು ದಾನವಾಗಿ ನೀಡಿದ್ದರು. ಮಾತ್ರವಲ್ಲದೇ ತಮ್ಮ ಮೂರು ಖಾಸಗಿ ವಿಮಾನಗಳನ್ನು ಹಾಗೂ 90 ಎಕರೆ ಎಕರೆ ಭೂಮಿಯನ್ನೂ ಕೊಟ್ಟಿದ್ದರು.ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲದೇ ಶಿಕ್ಷಣ ಮತ್ತು ಕೈಗಾರಿಕೆಗಳಿಗೂ ಅಪಾರ ಕೊಡುಗೆ ನೀಡಿದ್ದಾರೆ. ಪ್ರಸಿದ್ಧ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾನಿಲಯವು ಇದೇ ರಾಜಮನೆತನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಕಲ್ಕತಾ ವಿವಿ, ಆಲಿಗಢ ಮುಸ್ಲಿಂ ವಿವಿ, ಪಟನಾ ವಿಶ್ವವಿದ್ಯಾನಿಲಯಗಳಿಗೂ ಈ ಕುಟುಂಬ ದೊಡ್ಡ ಮಟ್ಟಿಗಿನ ಆರ್ಥಿಕ ನೆರವು ನೀಡಿದೆ.