ಅಸಮರ್ಪಕ ಆಡಳಿತ, ಕಳಪೆ ನೀತಿ, ಸರ್ವಾಧಿಕಾರಿ ಧೋರಣೆ : ಜನರ ದಂಗೆ ಅಥವಾ ಯುದ್ಧದಿಂದ ಅಧಿಕಾರ ಕಳಕೊಂಡವರು

KannadaprabhaNewsNetwork |  
Published : Dec 09, 2024, 12:46 AM ISTUpdated : Dec 09, 2024, 06:09 AM IST
ಅಧಿಕಾರ ಕಳೆದುಕೊಂಡ ನಾಯಕರು | Kannada Prabha

ಸಾರಾಂಶ

ಅಸಮರ್ಪಕ ಆಡಳಿತ, ಕಳಪೆ ನೀತಿ, ಸರ್ವಾಧಿಕಾರಿ ಧೋರಣೆ ಇತ್ಯಾದಿಗಳಿಂದಾಗಿ ಜನರು ದಂಗೆಯೆದ್ದು ದೇಶದ ನಾಯಕರ ಅಧಿಕಾರ ಕಸಿದ ಉದಾಹರಣೆಗಳು ಜಗತ್ತಿನಲ್ಲಿ ಹಲವಾರಿವೆ.  

ಅಸಮರ್ಪಕ ಆಡಳಿತ, ಕಳಪೆ ನೀತಿ, ಸರ್ವಾಧಿಕಾರಿ ಧೋರಣೆ ಇತ್ಯಾದಿಗಳಿಂದಾಗಿ ಜನರು ದಂಗೆಯೆದ್ದು ದೇಶದ ನಾಯಕರ ಅಧಿಕಾರ ಕಸಿದ ಉದಾಹರಣೆಗಳು ಜಗತ್ತಿನಲ್ಲಿ ಹಲವಾರಿವೆ. ಕೆಲ ರಾಷ್ಟ್ರವನ್ನಾಳುತ್ತಿದ್ದ ನಾಯಕರು, ಸರ್ವಾಧಿಕಾರಿಗಳು ಯುದ್ಧದಿಂದಾಗಿಯೂ ಅಧಿಕಾರ ಕಳೆದುಕೊಂಡ ಅಥವಾ ದೇಶವನ್ನೇ ತೊರೆದ ನಿದರ್ಶನಗಳೂ ಇವೆ. ಅದರಲ್ಲಿ ಕೆಲವು ಇಂತಿವೆ.

 ಶೇಖ್‌ ಹಸೀನಾ, ಬಾಂಗ್ಲಾದೇಶ ಮಾಜಿ ಪ್ರಧಾನಿ

ಬಾಂಗ್ಲಾದೇಶದಲ್ಲಿ ಮೀಸಲು ವಿರೋಧಿಸಿ ಶುರುವಾದ ವಿದ್ಯಾರ್ಥಿ ಪ್ರತಿಭಟನೆ ದಿನ ಕಳೆದಂತೆ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಅನೇಕ ಪ್ರತಿಭಟನಾಕಾರರು ಸಾವನ್ನಪ್ಪಿದ ಘಟನೆಯೂ ನಡೆಯಿತು. ಇದರಿಂದಾಗಿ, ಸತತ 15 ವರ್ಷದಿಂದ ಬಾಂಗ್ಲಾದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದ, ಅವಾಮಿ ಲೀಗ್‌ ಪಕ್ಷದ ನಾಯಕಿ, ಬಾಂಗ್ಲಾದೇಶದ ಸ್ಥಾಪಕ ಎಂದು ಗುರುತಿಸಲಾಗುವ ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಪುತ್ರಿ ಶೇಖ್‌ ಹಸೀನಾ ಆ.5ರಂದು ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆಯುವಂತಾಯಿತು. 

ಗೋಟಬಯ ರಾಜಪಕ್ಸೆ, ಶ್ರೀಲಂಕಾ ಮಾಜಿ ಅಧ್ಯಕ್ಷ

ಕಳಪೆ ನೀತಿಗಳಿಂದಾಗಿ 2022ರಲ್ಲಿ ಶ್ರೀಲಂಕಾದ ಆರ್ಥಿಕತೆ ಕುಸಿದಿದ್ದು, ಹಣದುಬ್ಬರ ಶೇ.50ರಷ್ಟಾಗಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದೇಶಿ ವಿನಿಮಯದ ಕೊರತೆಯಿಂದಾಗಿ ವಿದೇಶಗಳಿಂದಲೂ ಅವುಗಳನ್ನು ಆಮದು ಮಾಡಿಕೊಳ್ಳಲು ದೇಶ ಶಕ್ತವಾಗಿರಲಿಲ್ಲ. ಪರಿಣಾಮವಾಗಿ ಆಹಾರ ಹಾಗೂ ಇಂಧನದ ಬೆಲೆ ಗಗನಕ್ಕೇರಿದ್ದು, ಜನ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಇದರಿಂದಾಗಿ ಲಂಕಾ ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಸೆ ಅನಿವಾರ್ಯವಾಗಿ ದೇಶತೊರೆದು ಸಿಂಗಾಪುರಕ್ಕೆ ತೆರಳಿ, ರಾಜೀನಾಮೆ ಘೋಷಿಸಿದರು.

ಸದ್ದಾಂ ಹುಸೇನ್‌, ಇರಾಕ್‌ ಸರ್ವಾಧಿಕಾರಿ

ಈತ 1979ರಲ್ಲಿ ಇರಾಕ್‌ನ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು ಸತತ 24 ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ದೇಶವನ್ನು ಆಳಿದವನು. ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11 ದಾಳಿಯಲ್ಲಿ ಸದ್ದಾಂ ಉಗ್ರರಿಗೆ ನೆರವಾಗಿದ್ದ ಎಂಬ ಆರೋಪವೂ ಇದ್ದು, ಅಮೆರಿಕ ಈತನ ಮೇಲೆ ದಾಳಿ ನಡೆಸಿ ಸೆರೆಹಿಡಿಯಿತ್ತು. 1982ರಲ್ಲಿ ತನ್ನ ಮೇಲೆ ನಡೆದ ಹತ್ಯೆಯತ್ನಕ್ಕೆ ಪ್ರತೀಕಾರವಾಗಿ ಈತ ದುಜೈಲ್‌ನಲ್ಲಿ 148 ಶಿಯಾ ಮುಸ್ಲಿಮರ ಮಾರಣ ಹೋಮ ನಡೆಸಿದ್ದ. ಆದ್ದರಿಂದ ಆತನಿಗೆ 2006ರ ಡಿ.30ರಂದು ಗಲ್ಲುಶಿಕ್ಷೆ ವಿಧಿಸಲಾಯಿತು. 

ಮು ಅಮ್ಮರ್‌ ಗಡಾಫಿ, ಲಿಬಿಯಾ ಸರ್ವಾಧಿಕಾರಿ

ಗಡಾಫಿ ಸತತ 4 ದಶಕಗಳ ಕಾಲ ಲಿಬಿಯಾವನ್ನು ಆಳಿದ ಸೇನಾ ಸರ್ವಾಧಿಕಾರಿ. 1969 ಸೆ.1ರಂದು ಅಧಿಕಾರಕ್ಕೇರಿದ ಇವನ ಆಡಳಿತದಿಂದ ಅಸಾಮಾಧಾನಗೊಂಡಿದ್ದ ಜನ, ರಾಜಕೀಯ ಕೈದಿಗಳನ್ನು ಬಂಧ ಮುಕ್ತಗೊಳಿಸಿ ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಿ ಪ್ರತಿಭಟನೆ ಪ್ರಾರಂಭಿಸಿದರು. ಇದು ತೀವ್ರ ರೋಪ ಪಡೆದಿದ್ದು, ಗಡಾಫಿಯ ಕೇಂದ್ರ ಕಚೇರಿ ಇದ್ದ ಟ್ರಿಪೋಲಿ ನಗರವನ್ನು ದಂಗೆಕೋರರು ವಶಕ್ಕೆ ಪಡೆದರು. ಅಂತಿಮವಾಗಿ 2011ರ ಅ.20ರಂದು ಗಡಾಫಿಯನ್ನು ಹತ್ಯೆಗೈಯ್ಯಲಾಯಿತು.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ