ಕಂತೆ ಕಂತೆ ನೋಟು ಪತ್ತೆ : ನ್ಯಾ.ವರ್ಮಾ ಮೇಲಿನ ಆರೋಪ ಸಾಬೀತು

KannadaprabhaNewsNetwork |  
Published : Aug 13, 2026, 03:00 AM ISTUpdated : Aug 13, 2026, 04:40 AM IST
Yashwanth Verma

ಸಾರಾಂಶ

ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ, ದೆಹಲಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆಕಂತೆ ನೋಟುಗಳು ಸಿಕ್ಕ ಪ್ರಕರಣದ ತನಿಖಾ ವರದಿ ಸಂಸತ್ತಿನಲ್ಲಿ ಮಂಡನೆ ಆಗಿ ಬಹಿರಂಗವಾಗಿದೆ ಹಾಗೂ ಅವರ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿವೆ.

ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ, ದೆಹಲಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆಕಂತೆ ನೋಟುಗಳು ಸಿಕ್ಕ ಪ್ರಕರಣದ ತನಿಖಾ ವರದಿ ಸಂಸತ್ತಿನಲ್ಲಿ ಮಂಡನೆ ಆಗಿ ಬಹಿರಂಗವಾಗಿದೆ ಹಾಗೂ ಅವರ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿವೆ.

ನ್ಯಾ। ವರ್ಮಾ ಈಗಾಗಲೇ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದು ಇನ್ನೂ ಅಂಗೀಕಾರಗೊಂಡಿಲ್ಲ. ಆದಾಗ್ಯೂ ನಿಯಮಾನುಸಾರ ಒಮ್ಮೆ ಜಡ್ಜ್‌ ರಾಜೀನಾಮೆ ನೀಡಿದರೆ, ಅದು ಅಂಗೀಕಾರವಾಗದೇ ಹೋದರೂ ಅವರಿಗೆ ವಾಗ್ದಂಡನೆ ಪ್ರಕ್ರಿಯೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು ವಾಗ್ದಂಡನೆಯಿಂದ ಪಾರಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. .ವರದಿಯಲ್ಲೇನಿದೆ?:ಈ ತನಿಖಾ ವರದಿಯಲ್ಲಿ ನ್ಯಾ. ವರ್ಮಾ ಅವರ ವಿರುದ್ಧ ಹೊರಿಸಲಾಗಿದ್ದ ಮೂರೂ ಮುಖ್ಯ ಆರೋಪಗಳು (ಆರ್ಟಿಕಲ್ ಆಫ್ ಚಾರ್ಜಸ್ I, II ಮತ್ತು III) ಸಾಬೀತಾಗಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಸ್ಟೋರ್ ರೂಂನಲ್ಲಿ ಪತ್ತೆಯಾದ ನೋಟುಗಳು

ತಮ್ಮ ನಿವಾಸದ ಸ್ಟೋರ್ ರೂಂನಲ್ಲಿ ಪತ್ತೆಯಾದ ನಗದಿನ ಮೂಲ, ಉಪಸ್ಥಿತಿ ಮತ್ತು ಮಾಲೀಕತ್ವದ ಬಗ್ಗೆ ನ್ಯಾ.ವರ್ಮಾ ನೀಡಿದ ವಿವರಣೆಗಳು ಸಂಪೂರ್ಣವಾಗಿ ಅತೃಪ್ತಿಕರ, ಅಸ್ಪಷ್ಟ ಹಾಗೂ ಕಪಟತನದಿಂದ ಕೂಡಿದ್ದವು. ಸ್ವತಂತ್ರ ಸರ್ಕಾರಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಿದಾಗ ಅವರ ವಾದಗಳು ಸುಳ್ಳೆಂದು ಸಾಬೀತಾಗಿವೆ ಎಂದು ವರದಿ ಉಲ್ಲೇಖಿಸಿದೆ.

ತನಿಖಾಧಿಕಾರಿಗಳು ಹಾಗೂ ಪೊಲೀಸರು ಸ್ಥಳವನ್ನು ಕಾನೂನುಬದ್ಧವಾಗಿ ಸೀಲ್ ಮಾಡಿ ತಪಾಸಣೆ ನಡೆಸುವ ಮುನ್ನವೇ, ಸ್ಟೋರ್ ರೂಂನಲ್ಲಿದ್ದ ಸಾಕ್ಷ್ಯಾಧಾರಗಳನ್ನು ಮರೆಮಾಚುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಯತ್ನಗಳು ನಡೆದಿವೆ ಎಂದು ಸಮಿತಿ ತೀರ್ಮಾನಿಸಿದೆ.ಜತೆಗೆ, ಉನ್ನತ ನ್ಯಾಯಾಂಗ ಹುದ್ದೆಯಲ್ಲಿದ್ದುಕೊಂಡು ತೋರಬೇಕಿದ್ದ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸಾಂಸ್ಥಿಕ ಜವಾಬ್ದಾರಿಯನ್ನು ಪ್ರದರ್ಶಿಸಲು ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದೆ.

ಪ್ರಕರಣದ ಹಿನ್ನೆಲೆ:

2025ರ ಮಾ.14ರ ರಾತ್ರಿ ನ್ಯಾ. ಯಶವಂತ್ ವರ್ಮಾ ಅವರ ದೆಹಲಿಯ ಅಧಿಕೃತ ಬಂಗಲೆಯಲ್ಲಿ ಹಠಾತ್ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅಲ್ಲಿನ ಸ್ಟೋರ್ ರೂಂನಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ 500 ರು. ಮುಖಬೆಲೆಯ ಕೋಟ್ಯಂತರ ರು. ನೋಟುಗಳ ಕಟ್ಟುಗಳು ಪತ್ತೆಯಾಗಿದ್ದವು. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು ಹಾಗೂ ತನಿಖೆಗೆ ಆಂತರಿಕ ಸಮಿತಿ ರಚನೆ ಆಗಿತ್ತು. ಸಮಿತಿಯಲ್ಲಿ ಕನ್ನಡಿಗ ಬಿ.ವಿ. ಆಚಾರ್ಯ ಕೂಡ ಇದ್ದರು. ಇದರ ನಡುವೆ, 2025ರ ಜುಲೈನಲ್ಲಿ 200ಕ್ಕೂ ಹೆಚ್ಚು ಸಂಸದರು ನ್ಯಾ.ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸಂಸತ್ತಿನಲ್ಲಿ ವಾಗ್ದಂಡನೆ ಪ್ರಸ್ತಾವನೆಗೆ ಸಹಿ ಹಾಕಿದ್ದರು.

ನಂತರ ನ್ಯಾ। ವರ್ಮಾರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಇನ್ನೂ ರಾಷ್ಟ್ರಪತಿಗಳಿಂದ ಅಂಗೀಕಾರವಾಗಿಲ್ಲ. ಆದಾಗ್ಯೂ ಒಮ್ಮೆ ರಾಜೀನಾಮೆ ನೀಡಿದರೆ, ಸ್ವೀಕಾರವಾಗಲಿ, ಬಿಡಲಿ ವಾಗ್ದಂಡನೆ ಪ್ರಕ್ರಿಯೆ ಅನ್ವಯಿಸಲ್ಲ ಎಂದು ಎಂದು ಗೊತ್ತಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!
ಜೈಲಲ್ಲೇ ಇಮ್ರಾನ್‌ ಸಾವು ಎಂದ ಪತ್ರಕರ್ತ: ಪಾಕ್‌ನಲ್ಲಿ ಸಂಚಲನ