ಭಗವಾನ್ ಮಹಾವೀರರ ನಿರ್ವಾಣ ಮಹೋತ್ಸವ; ಲಾಡು ಸಮರ್ಪಣೆ

KannadaprabhaNewsNetwork |  
Published : Nov 10, 2026, 12:15 AM IST
 | Kannada Prabha

ಸಾರಾಂಶ

ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರ ಸ್ವಾಮಿ ಮೋಕ್ಷಕ್ಕೆ ಹೋದಂತಹ ಈ ದಿನವನ್ನು ದಿಗಂಬರ ಜೈನಮುನಿ ಶ್ರೀ ಪ್ರಮುಖ್ ಸಾಗರ್ ಮುನಿಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಭಾನುವಾರ ನಗರದ ಜೈನ ಭವನದಲ್ಲಿ ನಿರ್ವಾಣ ಕಲ್ಯಾಣ ಮಹೋತ್ಸವಾಗಿ ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರ ಸ್ವಾಮಿ ಮೋಕ್ಷಕ್ಕೆ ಹೋದಂತಹ ಈ ದಿನವನ್ನು ದಿಗಂಬರ ಜೈನಮುನಿ ಶ್ರೀ ಪ್ರಮುಖ್ ಸಾಗರ್ ಮುನಿಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಭಾನುವಾರ ನಗರದ ಜೈನ ಭವನದಲ್ಲಿ ನಿರ್ವಾಣ ಕಲ್ಯಾಣ ಮಹೋತ್ಸವಾಗಿ ಆಚರಣೆ ಮಾಡಲಾಯಿತು.

ಆಚಾರ್ಯ ಶ್ರೀ 108 ಪ್ರಮುಖ್ ಸಾಗರ್ ಮುನಿ ಮಹಾರಾಜರವರು ತುಮಕೂರಿನಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅವರ ನೇತೃತ್ವದಲ್ಲಿ ಭಗವಾನ್ ಮಹಾವೀರರು ಮೋಕ್ಷಕ್ಕೆ ಹೋದ ದಿನವನ್ನು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಯಿತು.

ಮಹಾವೀರರು ಬಿಹಾರದ ಪಾವಾಪುರಿ ಎಂಬ ಸ್ಥಳದಲ್ಲಿ ಸರೋವರದ ಮಧ್ಯದಲ್ಲಿ ನಿರ್ವಾಣ ಹೊಂದಿದರು. ಈ ದಿನವನ್ನು ಜೈನ ಧರ್ಮೀಯರು ಜೈನ ದೀಪಾವಳಿ ಹಬ್ಬವಾಗಿ ಆಚರಿಸುವರು. ನಿರ್ವಾಣ ಹೊಂದಿದ ಸರೋವರದ ಪ್ರತಿಕೃತಿಯನ್ನು ಜೈನ ಭವನದಲ್ಲಿ ನಿರ್ಮಾಣ ಮಾಡಲಾಗಿತ್ತು. ಸರೋವರದ ನಡುವೆ ಕಮಲಾಸನದಲ್ಲಿ ಕುಳಿತ ಆಚಾರ್ಯಶ್ರೀ ಪ್ರಮುಖ್ ಸಾಗರ್ ಮುನಿ ಮಹಾರಾಜರು, ಈ ವಿಶೇಷ ದಿನದ ಸಂದೇಶ ನೀಡಿದರು.

ಭಗವಾನ್ ಮಹಾವೀರರು ತಮ್ಮ ಓಂಕಾರ ದಿವ್ಯ ಧ್ವನಿಯ ಮೂಲಕ ಜಗತ್ತಿನ ಎಲ್ಲಾ ಜೀವಿಗಳ ಆತ್ಮ ಕಲ್ಯಾಣದ ಉಪದೇಶ ನೀಡಿದ್ದಾರೆ. ಗೌತಮ, ಗಣಧರರು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದಾರೆ. ಅಂದಿನಿಂದಲೇ ಜೈನ ಧರ್ಮದ ವರ್ತಮಾನ ಕಾಲದ ಶಾಸನ ಜಾರಿಗೆ ಬಂದಿದೆ. ನಾವು ಹಣತೆಗಳನ್ನು ಹೊರಗಡೆ ಬೆಳಗಿಸಿದರೂ, ನಿಜವಾದ ಉದ್ದೇಶ ನಮ್ಮ ಅಂತರಂಗದ ಜ್ಯೋತಿಯನ್ನು ಬೆಳಗಿಸಿಕೊಳ್ಳುವುದೇ ಆಗಿದೆ. ನಮ್ಮ ಒಳಗಿನ ಕರ್ಮಗಳ ಪಟಾಕಿಯನ್ನು ಸಿಡಿಸುವುದರ ಮೂಲಕ ನಮ್ಮ ಅಂತರಂಗದ ಜ್ಯೋತಿ, ಜ್ಞಾನವನ್ನು ಜಾಗೃತಗೊಳಿಸಿಕೊಳ್ಳಬೇಕು. ಅದೇ ಜೈನ ಧರ್ಮದ ದೀಪಾವಳಿಯ ಸಂದೇಶ ಎಂದು ಆಚಾರ್ಯ ಶ್ರೀಗಳು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 2554 ದೀಪಗಳನ್ನು ಬೆಳಗಿಸುವುದರ ಮೂಲಕ ಎಲ್ಲರಲ್ಲೂ ಸೌಮ್ಯ ಜ್ಞಾನದ ಅಂತರಂಗ ಜ್ಯೋತಿ ಬೆಳಗಲಿ ಎಂಬುದು ಆಚಾರ್ಯ ಶ್ರೀಗಳ ಪ್ರವಚನದ ಸಾರಾಂಶವಾಗಿತ್ತು.

ಮಹಾವೀರ ಸ್ವಾಮಿಗಳು ತಮ್ಮ ಜೀವನವನ್ನು ಪರಿಪೂರ್ಣಗೊಳಿಸಿ ನಿರ್ವಾಣವಾದರು. ಈ ಪರಿಪೂರ್ಣತೆಯ ಸಂಕೇತವಾಗಿ ಭಕ್ತರು ಮಹಾವೀರ ಸ್ವಾಮಿಗೆ ಲಾಡು ಸಮರ್ಪಣೆ ಮಾಡುವ ಮೂಲಕ ಭಕ್ತಿ ಸಲ್ಲಿಸಿದರು. ಕೊನೆ ಇಲ್ಲದ ಗುಂಡಾಗಿರುವ ಲಾಡು ಪರಿಪೂರ್ಣತೆಯ ಸಂಕೇತ. ಹಾಗಾಗಿ ಪರಿಪೂರ್ಣತೆ ಜೀವನ ನಡೆಸಿ ಪರಿನಿರ್ವಾಣರಾದ ಮಹಾವೀರ ಸ್ವಾಮಿಗೆ ಭಕ್ತರು ಲಾಡು ಸಮರ್ಪಣೆ ಮಾಡಿದರು.

ಭಕ್ತರು ಬಿಳಿ ವಸ್ತ್ರ ಧರಿಸಿ ಸರತಿ ಸಾಲಿನಲ್ಲಿ ಬಂದು ಆಚಾರ್ಯಶ್ರೀ ಪ್ರಮುಖ್ ಸಾಗರ್ ಮುನಿ ಮಹಾರಾಜರಿಗೆ ಶ್ರೀಫಲ, ಪುಷ್ಪ ಸಮರ್ಪಿಸಿ ಪಾದ ವಂದನೆ ಸಲ್ಲಿಸಿದರು. ಪದಮ್ ಸಾಗರ್ ಮುನಿ ಮಹಾರಾಜ್ ಉಪಸ್ಥಿತರಿದ್ದರು. ದಿಗಂಬರ ಜೈನಶ್ರೀ ಪಾರ್ಶ್ವನಾಥಸ್ವಾಮಿ ಜಿನಮಂದಿರ ಅಧ್ಯಕ್ಷ ಟಿ.ಡಿ. ಬಾಹುಬಲಿಬಾಬು, ಮುಖಂಡರಾದ ಆರ್.ಎ. ಸುರೇಶ್‌ಕುಮಾರ್, ಎನ್.ಡಿ. ವಿನಯ್ ಜೈನ್, ಶುಭೋದ್‌ಕುಮಾರ್ ಜೈನ್, ಬಿ.ಎಲ್. ಚಂದ್ರಕೀರ್ತಿ, ಎನ್.ಡಿ. ವಿನಯ್ ಜೈನ್, ಬಿ.ಎಸ್. ಪಾರ್ಶ್ವನಾಥ್, ಟಿ.ಎನ್. ಜಿನೇಶ್, ಬ್ರಹ್ಮಪ್ರಕಾಶ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜ್ಯ ಮಟ್ಟದ ಯುವಜನೋತ್ಸವ: ಸಕಲ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
ಸಾಂಸ್ಕೃತಿಕ ಪ್ರಜ್ಞೆ ಇಲ್ಲದೆ ಕನ್ನಡ ಪ್ರಜ್ಞೆ ಬೆಳೆಯುವುದಿಲ್ಲ