ಹಳಿ ಮೇಲೆ ಸಿಲಿಂಡರ್‌ ಇಟ್ಟು ದುಷ್ಕೃತ್ಯಕ್ಕೆ ಯತ್ನ

KannadaprabhaNewsNetwork |  
Published : Sep 10, 2024, 01:30 AM IST
ಗ್ಯಾಸ್‌ ಸಿಲೆಂಡರ್‌ | Kannada Prabha

ಸಾರಾಂಶ

ರೈಲು ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌ ಬಾಂಬ್‌ ಹಾಗೂ ಬೆಂಕಿಪೊಟ್ಟಣ ಇರಿಸಿ ರೈಲನ್ನು ಹಳಿ ತಪ್ಪಿಸಲು ದುಷ್ಕರ್ಮಿಗಳು ಸೋಮವಾರ ಯತ್ನಿಸಿದ್ದಾರೆ.

ಕಾನ್ಪುರ: ರೈಲು ಹಳಿ ಮೇಲೆ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌ ಬಾಂಬ್‌ ಹಾಗೂ ಬೆಂಕಿಪೊಟ್ಟಣ ಇರಿಸಿ ರೈಲನ್ನು ಹಳಿ ತಪ್ಪಿಸಲು ದುಷ್ಕರ್ಮಿಗಳು ಸೋಮವಾರ ಯತ್ನಿಸಿದ್ದಾರೆ. ಸುದೈವವಶಾತ್‌, ಕಾಳಿಂದಿ ಎಕ್ಸ್‌ಪ್ರೆಸ್‌ ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದರೂ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಘಟನೆ ಭಿವಾನಿ ಮತ್ತು ಪ್ರಯಾಗ್ ರಾಜ್ ಮಾರ್ಗದಲ್ಲಿ ಘಟಿಸಿದೆ.

6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ ಕೆಫೆ ಬಾಂಬ್‌ ಸ್ಫೋಟದ ಸೂತ್ರಧಾರ ಎನ್ನಲಾದ ಹಾಗೂ ಪಾಕ್‌ನಲ್ಲಿ ನೆಲೆಸಿರುವ ಫರ್ಹತ್ತುಲ್ಲಾ ಘೋರಿ, ‘ಭಾರತದ ರೈಲ್ವೆ ಸಂಪರ್ಕ ಜಾಲಗಳು ಮತ್ತು ಹಿಂದೂ ನಾಯಕರ ಮೇಲೆ ಬಾಂಬ್‌ ದಾಳಿ ನಡೆಸುವಂತೆ ತನ್ನ ಸ್ಲೀಪರ್‌ ಸೆಲ್‌ಗಳಿಗೆ ಸೂಚನೆ ನೀಡಿದ್ದ’ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ರೈಲು ಹಳಿ ಮೇಲೆ ಸಿಲಿಂಡರ್‌ ಇಟ್ಟು ದುಷ್ಕೃತ್ಯ ಎಸಗಿದ ಘಟನೆ ನಡೆದಿದೆ. ಹೀಗಾಗಿ ಇದು ಘೋರಿ ಕೃತ್ಯವೇ ಎಂಬ ಅನುಮಾನ ಮೂಡಿದೆ.

ಘಟನೆಯ ಸಂಬಂಧ 12 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಆಗಿದ್ದೇನು?:

ಭಾನುವಾರ ರಾತ್ರಿ 8.20ಕ್ಕೆ ಕಾಳಿಂದಿ ರೈಲು ಅತಿವೇಗದಲ್ಲಿ ಚಲಿಸುತ್ತಿದ್ದು, ಈ ವೇಳೆ ಹಳಿ ಮೇಲಿದ್ದ ಸಿಲಿಂಡರ್‌ ಅನ್ನು ಚಾಲಕ ಗಮನಿಸಿ ಎಮರ್ಜೆನ್ಸಿ ಬ್ರೇಕ್‌ ಹಾಕಿದ್ದಾನೆ. ಆದರೆ ರೈಲು ವೇಗದಲ್ಲಿದ್ದ ಕಾರಣ ತಕ್ಷಣಕ್ಕೆ ನಿಲ್ಲದೇ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಸುದೈವವಶಾತ್‌, ರೈಲಯ ಹಳಿ ತಪ್ಪದೇ ಸ್ವಲ್ಪ ದೂರ ಚಲಿಸಿ ರೈಲು ನಿಂತಿದೆ. ಘಟನೆ ಬಳಿಕ ಸುಮಾರು 20 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿತ್ತು. ನಂತರ ಪ್ರಯಾಣ ಮುಂದುವರಿಸಿತು.

ರೈಲಿಗೆ ಡಿಕ್ಕಿ ಆದ ಹೊಡೆತಕ್ಕೆ ಸಿಲಿಂಡರ್‌ ನಜ್ಜುಗುಜ್ಜಾಗಿದೆ. ಸ್ಥಳದಲ್ಲಿ ಪೆಟ್ರೋಲ್ ಬಾಟಲಿ (ಪೆಟ್ರೋಲ್‌ ಬಾಂಬ್), ಗನ್‌ಪೌಡರ್‌, ಬೆಂಕಿಪೊಟ್ಟಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ರೈಲು ಅಪಘಾತ ನಡೆಸುವ ದುಷ್ಕೃತ್ಯಕ್ಕಾಗಿಯೇ ಕಿಡಿಗೇಡಿಗಳು, ಈ ರೀತಿ ವಸ್ತುಗಳನ್ನು ಇರಿಸಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಆ.17ರಂದು ಕಾನ್ಪುರ ಸನಿಹ ಸಾಬರಮತಿ ಎಕ್ಸ್‌ಪ್ರೆಸ್‌ ರೈಲನ್ನೂ ಇದೇ ರೀತಿ ಹಳಿಗಳ ಮೇಲೆ ಕಲ್ಲು, ಮುಂತಾದ ವಸ್ತು ಇಟ್ಟು ಹಳಿ ತಪ್ಪಿಸಲು ಯತ್ನಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ
ದಿಲ್ಲಿ ಬದಲು ಬೆಂಗಳೂರು ರಾಜಧಾನಿ ಮಾಡಿ : ದಿಲ್ಲಿ ಯುವತಿ ಆಗ್ರಹ