ನವದೆಹಲಿ : ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಮಾಡುವ ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮತ್ತೆ ಕೇಂದ್ರ ಸರ್ಕಾರದ ಕದ ಬಡಿದಿದೆ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ಕರ್ನಾಟಕದ ಪ್ರಸ್ತಾವಕ್ಕೆ ಅನುಮತಿ ನೀಡಬಾರದು ಎಂದು ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಜಲಶಕ್ತಿ ಖಾತೆ ಸಚಿವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಇದೀಗ ಸಚಿವರ ನಿಯೋಗ ನೇರವಾಗಿ ಕೇಂದ್ರ ಸಚಿವರನ್ನೇ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಮನವಿ ಸಲ್ಲಿಕೆ:
ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ನಿಯೋಗವು ಸೋಮವಾರ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಈ ವೇಳೆ ಮಹಾರಾಷ್ಟ್ರದ ಸಂಸದರು ಮತ್ತು ಸಚಿವರು ಕೂಡಾ ಹಾಜರಿದ್ದರು.
‘ಕರ್ನಾಟಕ ಸರ್ಕಾರವು ಅಣೆಕಟ್ಟಿನ ಎತ್ತರ ಹೆಚ್ಚಳ ಮಾಡಿದರೆ ಅದು ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಭಾರೀ ಪ್ರವಾಹಕ್ಕೆ ಕಾರಣವಾಗಲಿದೆ. ಕರ್ನಾಟಕದ ಸರ್ಕಾರದ ಈ ಕ್ರಮವು ರಾಜ್ಯದಲ್ಲಿ ಪರಿಸರ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಬಗ್ಗೆ ನಾವು ಹಿಂದಿನಿಂದಲೂ ನಮ್ಮ ಕಳವಳವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇವೆ. ನಮ್ಮ ವಾದಕ್ಕೆ ಪೂರಕವಾದ ಅಂಕಿ ಅಂಶಗಳನ್ನೂ ದಾಖಲೆ ಸಮೇತ ಮುಂದಿಟ್ಟಿದ್ದೇವೆ. ಹೀಗಾಗಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ನೀಡಿರುವ ಅನುಮತಿ ರದ್ದುಪಡಿಸುವ ಕುರಿತು ನಿಮ್ಮ ಮಧ್ಯಪ್ರವೇಶವನ್ನು ಬಯಸುತ್ತೇವೆ’ ಎಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ ಹೇಳಲಾಗಿದೆ.
‘ಜೊತೆಗೆ 2919 ಮತ್ತು 2021ರಲ್ಲಿ ಆಲಮಟ್ಟಿ ಅಣೆಕಟ್ಟಿನಲ್ಲಿ ಹಿನ್ನೀರು ಹೆಚ್ಚಾದ ವೇಳೆ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಭಾರೀ ಪ್ರಮಾಣದ ಪ್ರವಾಹಕ್ಕೆ ತುತ್ತಾಗಿದ್ದವು’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.