2019ರ ಲೋಕಸಭೆ ಚುನಾವಣೆಗಿಂತ ವಿಭಿನ್ನ ಲೋಕಸಭೆ ಚುನಾವಣೆ ಈ ಸಲ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಏಕೆಂದರೆ 2019ರಲ್ಲಿ ಬಿಜೆಪಿ ಹಾಗೂ ಅವಿಭಜಿತ ಶಿವಸೇನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ, ರಾಜ್ಯದ 48 ಕ್ಷೇತ್ರಗಳ ಪೈಕಿ 41ನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದವು.
ಮುಂಬೈ: 2019ರ ಲೋಕಸಭೆ ಚುನಾವಣೆಗಿಂತ ವಿಭಿನ್ನ ಲೋಕಸಭೆ ಚುನಾವಣೆ ಈ ಸಲ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಏಕೆಂದರೆ 2019ರಲ್ಲಿ ಬಿಜೆಪಿ ಹಾಗೂ ಅವಿಭಜಿತ ಶಿವಸೇನೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ, ರಾಜ್ಯದ 48 ಕ್ಷೇತ್ರಗಳ ಪೈಕಿ 41ನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದವು. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಕೇವಲ 7 ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಆದರೆ ಈ ಸಲ ಪರಿಸ್ಥಿತಿ ಸಂಪೂರ್ಣ ವಿಭಿನ್ನ. ರಾಜ್ಯದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ವಿಭಜನೆ ಆಗಿವೆ. ಶಿವಸೇನೆಯ ವಿಭಜಿತ ತಲಾ 1 ಬಣಗಳು (ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಬಣಗಳು) ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚಿಸಿವೆ.
ಅದೇ ಶಿವಸೇನೆಯ ಮೂಲ ಬಣ (ಉದ್ಧವ್ ಠಾಕ್ರೆ ಬಣ) ತನ್ನ ಸೈದ್ಧಾಂತಿಕ ಭಿನ್ನಮತ ಮರೆತು ಕಾಂಗ್ರೆಸ್-ಎನ್‌ಸಿಪಿ (ಶರದ್ ಪವಾರ್ ಬಣ) ಜತೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಈ ಸಲ ಸಂಪೂರ್ಣ ಭಿನ್ನವಾದ ಲೋಕಸಭೆ ಚುನಾವಣೆಯನ್ನು ಮಹಾರಾಷ್ಟ್ರ ಕಾಣಲಿದೆ.
ಆದರೆ ಕೇಂದ್ರದ ಚುನಾವಣೆ ಇದಾಗಿರುವ ಕಾರಣ ರಾಜ್ಯದ ವಿಭಜನೆಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿವೆ ಎಂಬುದನ್ನು ಕಾಲವೇ ಹೇಳಬೇಕು. ಏ.18ರಿಂದ ಮೇ 20ರವರೆಗೆ 5 ಹಂತದಲ್ಲಿ ರಾಜ್ಯ ಚುನಾವಣೆ ಎದುರಿಸುತ್ತಿದೆ.
ಯಾವ ಪಕ್ಷದ ಸ್ಥಿತಿ ಏನು?
ಸದ್ಯದ ಮಟ್ಟಿಗೆ ಬಿಜೆಪಿ ಮೋದಿ ಅಲೆ ನೆಚ್ಚಿಕೊಂಡಿದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಾರಥ್ಯದಲ್ಲಿ ರಾಜ್ಯ ಬಿಜೆಪಿ ಮುನ್ನಡೆಯುತ್ತಿದೆ. ಫಡ್ನವೀಸ್ ಸಿಎಂ ಪಟ್ಟ ವಂಚಿತರು ಎಂಬುದು ಬಿಜೆಪಿಗೆ ಹಿನ್ನಡೆ ಸೃಷ್ಟಿಸಬಲ್ಲದು.
ಬಿಜೆಪಿಯ ಮಿತ್ರಪಕ್ಷ ಶಿವಸೇನೆ (ಶಿಂಧೆ ಬಣ)ಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಸರಳತೆಯೇ ಶ್ರೀರಕ್ಷೆ. ಆದರೆ ಶಿಂಧೆ ಬಾಳಾ ಠಾಕ್ರೆ ಕಟ್ಟಿದ್ದ ಪಕ್ಷ ಬಿಟ್ಟು ಬಂದರು ಎಂಬ ಅಪವಾದ ಹೊತ್ತಿದ್ದಾರೆ. ಇದು ಅವರಿಗೆ ಮೈನಸ್ ಪಾಯಿಂಟ್.
ಇನ್ನು ಎನ್‌ಸಿಪಿ (ಅಜಿತ್) ಬಣದ ನಾಯಕ ಅಜಿತ್ ಪವಾರ್ ಅವರು ದೊಡ್ಡಪ್ಪ ಶರದ್ ಪವಾರ್ ನೆರಳಿನಿಂದ ಹೊರಬಂದು ಬಿಜೆಪಿ ಜತೆ ಸೇರಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಇವರು ರಾಜ್ಯದ ಡಿಸಿಎಂ ಕೂಡ. ಆದರೆ ತಮ್ಮ ಸ್ವಕ್ಷೇತ್ರ ಬಾರಾಮತಿಯಲ್ಲಿ ಶರದ್ ಎನ್‌ಸಿಪಿ ಬಣದ ಅಭ್ಯರ್ಥಿಯಾಗಲಿರುವ ತಮ್ಮ ಸೋದರಿ ಸುಪ್ರಿಯಾ ಸುಳೆಯನ್ನು ಅಜಿತ್ ಹಾಕುವ ಅಭ್ಯರ್ಥಿ ಸೋಲಿಸಬೇಕು.
ಆಗ ಮಾತ್ರ ಅಜಿತ್‌ಗೆ ಉಳಿಗಾಲ.ಇನ್ನು ವಿಪಕ್ಷ ಕಾಂಗ್ರೆಸ್‌ನಿಂದ ಅಶೋಕ ಚವಾಣ್‌ರಂಥ ಅನೇಕ ವಿಮುಖರಾಗಿ ಬಿಜೆಪಿ ಸೇರಿದ್ದಾರೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕೂಡ ವಿಭಜನೆಗೊಂಡು ತತ್ತರಿಸಿದೆ.
ಆದರ ಬಾಳಾ ಠಾಕ್ರೆ ಫೋಟೋ ಇಟ್ಟುಕೊಂಡು ರಾಜಕಾಣ ನಡೆಸುತ್ತಿದೆ. ಎನ್‌ಸಿಪಿ (ಶರದ್ ಬಣ) ನಾಯಕ ಶರದ್ ಪವಾರ್ ತಮ್ಮ ಬಂಧು ಅಜಿತ್ ಪವಾರ್ ಕೈಕೊಟ್ಟಿದ್ದರಿಂದ ಕಂಗೆಟ್ಟಿದ್ದಾರೆ. ಆದರೆ ಅವರು ಫೀನಿಕ್ಸ್‌ನಂತೆ ಎದ್ದು ಬರುವ ಶಕ್ತಿ ಹೊಂದಿದ್ದಾರೆ.
ಅಭ್ಯರ್ಥಿಗಳು: ಸುಪ್ರಿಯಾ ಸುಳೆ (ಬಾರಾಮತಿ- ಎನ್‌ಸಿಪಿ ಶರದ್ ಪವಾರ್ ಬಣ), ಪೀಯೂಶ್ ಗೋಯಲ್ (ಮುಂಬೈ ಉತ್ತರ- ಬಿಜೆಪಿ), ನವನೀತ್ ರಾಣಾ (ಅಮರಾವತಿ- ಪಕ್ಷೇತರ), ಪಂಕಜಾ ಮುಂಡೆ (ಬಿಜೆಪಿ- ಬೀಡ್), ನಿತಿನ್ ಗಡ್ಕರಿ (ನಾಗಪುರ)
ಪ್ರಮುಖ ಕ್ಷೇತ್ರಗಳು: ನಾಗಪುರ, ಬಾರಾಮತಿ, ಮುಂಬೈ ಉತ್ತರ, ಅಮರಾವತಿ, ಸೊಲ್ಲಾಪುರ
ಪ್ರಮುಖ ಅಭ್ಯರ್ಥಿಗಳು: ನಿತಿನ್ ಗಡ್ಕರಿ (ಬಿಜೆಪಿ- ನಾಗಪುರ), ಸುಪ್ರಿಯಾ ಸುಳೆ (ಎನ್‌ಸಿಪಿ-ಬಾರಾಮತಿ), ನವನೀತ್ ರಾಣಾ (ಬಿಜೆಪಿ- ಅಮರಾವತಿ), ಪೀಯೂಶ್ ಗೋಯಲ್ (ಬಿಜೆಪಿ- ಮುಂಬೈ ಉತ್ತರ)
ಸ್ಪರ್ಧೆ ಹೇಗೆ?
ಮಹಾರಾಷ್ಟ್ರದಲ್ಲಿ ಮಾತೃಪಕ್ಷಗಳಿಗೆ ಶಿವಸೇನೆಯ ಶಿಂಧೆ ಹಾಗೂ ಎನ್‌ಸಿಪಿಯ ಅಜಿತ್ ಪವಾರ್ ದ್ರೋಹ ಮಾಡಿದ್ದಾರೆ ಎಂಬ ವಿಷಯ, ಮರಾಠಾ ಒಬಿಸಿ ಮೀಸಲು ಹೋರಾಟ, ರಾಜ್ಯದ ಬರಗಾಲ ಹಾಗೂ ತೀವ್ರ ನೀರಿನ ಅಭಾವದ ಸಮಸ್ಯೆ, ರೈತರ ಆತ್ಮಹತ್ಯೆ ಸಮಸ್ಯೆ. ಇತ್ಯಾದಿ ಚುನಾವಣಾ ವಿಷಯಗಳ ಮೇಲೆ ಈ ಸಲದ ಚುನಾವಣೆ ನಡೆಯಲಿದೆ.
ಶಿವಸೇನೆ (ಶಿಂಧೆ ಬಣ), ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್ ಬಣ) ಒಂದಾಗಿ ಸ್ಪರ್ಧಿಸುತ್ತಿದ್ದರೆ, ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್‌ಚಂದ್ರ ಪವಾರ್) ಹಾಗೂ ಕಾಂಗ್ರೆಸ್ ಒಟ್ಟಾಗಿ ಕಣಕ್ಕಿಳಿದಿವೆ.