ಉಡುಪಿ/ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತ ಆರೋಪ ಸಂಬಂಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆಯ ಪೊಲೀಸರು ಗುರುವಾರ ಉಜಿರೆ ಸಮೀಪದ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಬೆಳಗ್ಗೆ ನಿವಾಸದಲ್ಲಿ ವಶಕ್ಕೆ ಪಡೆಯುವ ವೇಳೆ ತಿಮರೋಡಿ ಪರ ವಕೀಲ, ಪತ್ನಿ, ಬೆಂಬಲಿಗರು ಪೊಲೀಸರಿಗೆ ಅಡ್ಡಿಪಡಿಸಿದ್ದಾರೆ. ಈ ವೇಳೆ, ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ, ದಾರಿ ಮಧ್ಯೆ ಅವರನ್ನು ಕರೆದೊಯ್ಯುತ್ತಿದ್ದ ಕರ್ತವ್ಯನಿರತ ಎಎಸ್ಪಿ ಕಾರಿಗೆ ತಿಮರೋಡಿ ಬೆಂಬಲಿಗರು ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಈ ಸಂಬಂಧ ತಿಮರೋಡಿ ಅವರ ಮೂವರು ಬೆಂಬಲಿಗರನ್ನು ಬಂಧಿಸಲಾಗಿದೆ. ಬಳಿಕ, ಪೊಲೀಸರು ಖಾಸಗಿ ವಾಹನದಲ್ಲಿ ಬ್ರಹ್ಮಾವರ ಠಾಣೆಗೆ ತಿಮರೋಡಿ ಅವರನ್ನು ಕರೆ ತಂದು, ವಿಚಾರಣೆಗೊಳಪಡಿಸಿ, ತಾಲೂಕು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದೇ ವೇಳೆ, ತಿಮರೋಡಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆಯನ್ನು ಆ.23ಕ್ಕೆ ಮುಂದೂಡಿ, ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸಂತೋಷ್ ಬಗ್ಗೆ ಅವಹೇಳನಕಾರಿ ಭಾಷಣ:
ತಿಮರೋಡಿ ಅವರು ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಬಿ.ಎಲ್.ಸಂತೋಷ್ ಅವರ ಬಗ್ಗೆ ಮಾನಹಾನಿಕರವಾಗಿ ಮಾತನಾಡಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಉಡುಪಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ಅವರು ಮಂಗಳವಾರ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬ್ರಹ್ಮಾವರ ಪೊಲೀಸರು ತಿಮರೋಡಿಗೆ ಬುಧವಾರ ಮತ್ತು ಗುರುವಾರ 2 ಬಾರಿ ನೋಟಿಸ್ ನೀಡಿದ್ದರು. ಆದರೆ, ತಿಮರೋಡಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಆದ್ದರಿಂದ ಗುರುವಾರ ಬೆಳಗ್ಗೆ ಬ್ರಹ್ಮಾವರ ಠಾಣೆಯ ಪೊಲೀಸರು ಉಜಿರೆಯ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಮನೆಗೆ ತೆರಳಿದ್ದರು. ಈ ವೇಳೆ, ತಿಮರೋಡಿ ಪರ ವಕೀಲರು ಶೋಧ ವಾರೆಂಟ್ ನೀಡುವಂತೆ ಆಗ್ರಹಿಸಿ, ಬ್ರಹ್ಮಾವರ ಠಾಣೆಗೆ ಅವರನ್ನೇ ಕರೆತರುವುದಾಗಿ ತಿಳಿಸಿದರು. ಆದರೆ ಪೊಲೀಸರು, ಅದಕ್ಕೆ ಒಪ್ಪದೆ ತಾವೇ ಕರೆದುಕೊಂಡು ಹೊರಟರು. ಈ ವೇಳೆ, ತಿಮರೋಡಿ ಪತ್ನಿ, ವಕೀಲರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಈ ಮಧ್ಯೆ, ಅವರ ಮನೆಯ ಬಳಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನೆರೆದಿದ್ದರು. ವಶಕ್ಕೆ ಪಡೆಯಲು ಮುಂದಾದಾಗ ಅಡ್ಡಿ ಪಡಿಸಿದರು. ಪುಂಡಾಟ ನಡೆಸಿ, ದಾಂಧಲೆಗೆ ಯತ್ನಿಸಿದರು. ಈ ವೇಳೆ, ಬೆಂಬಲಿಗರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ, ಪೊಲೀಸರು ತಿಮರೋಡಿ ಅವರನ್ನು ವಶಕ್ಕೆ ಪಡೆದು, ಖಾಸಗಿ ವಾಹನದಲ್ಲಿ ಬ್ರಹ್ಮಾವರ ಠಾಣೆಗೆ ಕರೆ ತಂದರು.
ದಾರಿ ಮಧ್ಯೆ, ಕಾರ್ಕಳದ ಹೊಸ್ಮಾರು ಬಳಿ ಮೂವರು ಆರೋಪಿಗಳಿದ್ದ ಕಾರು, ಕರ್ತವ್ಯದಲ್ಲಿದ್ದ ಎಎಸ್ಪಿ ಅವರ ಕಾರಿಗೆ ಡಿಕ್ಕಿ ಹೊಡೆಯಿತು. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಳಿಕ, ಬ್ರಹ್ಮಾವರ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ತಿಮರೋಡಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ, ಮುಂಜಾಗ್ರತಾ ಕ್ರಮವಾಗಿ ಠಾಣೆಯ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿತ್ತು. ಬಳಿಕ, ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಿ, ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿ ನಾಗೇಶ್ ಎನ್.ಎ. ಅವರು ತಿಮರೋಡಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.ಈ ವೇಳೆ, ತಿಮರೋಡಿ ಪರ ವಕೀಲ ವಿಜಯವಾಸು ಪೂಜಾರಿ ಅವರು, ಜಾಮೀನು ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಆ.23ಕ್ಕೆ ಮುಂದೂಡಿದರು. ನಂತರ, ತಿಮರೋಡಿ ಅವರನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಯಿತು.
ಜಾಮೀನು ರಹಿತ ಪ್ರಕರಣಗಳು :ಬ್ರಹ್ಮಾವರ ಠಾಣೆಯಲ್ಲಿ ತಿಮರೋಡಿ ವಿರುದ್ಧ ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಹೇಳನ (ಬಿಎನ್ಎಸ್ 352) ಹಾಗೂ ಜಾಮೀನು ರಹಿತವಾದ ಧರ್ಮ, ಜಾತಿಗಳ ನಡುವೆ ವೈರತ್ವಕ್ಕೆ ಯತ್ನ (ಬಿಎನ್‌ಎಸ್ 196-1) ಮತ್ತು ವದಂತಿಗಳ ಪ್ರಕಟ, ಪ್ರಸಾರ ಮಾಡಿ ದ್ವೇಷ ಹರಡುವ ಯತ್ನ (ಬಿಎನ್ಎಸ್ 353-2)ದ ಪ್ರಕರಣಗಳನ್ನು ದಾಖಲಿಸಲಾಗಿದೆ.(ಬಾಕ್ಸ್):
ಪದೇಪದೇ ಅಪರಾಧ ಆರೋಪಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಈ ಕುರಿತು ಮಾತನಾಡಿ, ತಿಮರೋಡಿಗೆ 2 ಬಾರಿ ನೋಟಿಸ್ ನೀಡಿದ್ದರೂ, ವಿಚಾರಣೆಗೆ ಹಾಜರಾಗಿಲ್ಲ. ಅವರ ಮೇಲೆ ಪದೇಪದೇ ದ್ವೇಷ ಭಾಷಣದ ಆರೋಪ ಇದೆ. ಅವರ ಮೇಲೆ ಜಾಮೀನುರಹಿತ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.