ವಿಷ್ಣುವಿನ 11ನೇ ಅವತಾರ ಆಗಲು ಮೋದಿ ಯತ್ನ: ಖರ್ಗೆ ಕಿಡಿ

KannadaprabhaNewsNetwork | Updated : Jan 29 2024, 06:41 AM IST

ಸಾರಾಂಶ

ಅತಿರಂಜಿತ ಪ್ರಚಾರ ಪಡೆಯುತ್ತಿರುವ ಪ್ರಧಾನಿ ಮೋದಿ ವಿಷ್ಣುವಿನ 11ನೇ ಅವತಾರವಾಗಲು ಯತ್ನಿಸುತ್ತಿದ್ದಾರೆ. ಈ ರೀತಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿರುವ ಬಿಜೆಪಿ ಗೆಲ್ಲಲು ಬಿಡಬೇಡಿ ಎಂದು ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕುರಿತು ಅತಿರಂಜಿತ ಪ್ರಚಾರ ಪಡೆಯುತ್ತಿದ್ದಾರೆ. ಈ ಮೂಲಕ ವಿಷ್ಣುವಿನ 11ನೇ ಅವತಾರವಾಗಲು ಯತ್ನಿಸುತ್ತಿರುವಂತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಟಿ ಬೀಸಿದ್ದಾರೆ.

ಉತ್ತರಾಖಂಡದಲ್ಲಿ ಕಾಂಗ್ರೆಸ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರತಿ ಸಲ ಟೀವಿ ಹಾಕಿದಾಗಲೂ ಎಲ್ಲ ಸುದ್ದಿಗಳಲ್ಲೂ ಮೋದಿಯ ಕುರಿತೇ ಸುದ್ದಿ ಬರುತ್ತಿರುತ್ತದೆ. 

ಈ ರೀತಿ ತಮ್ಮ ಕುರಿತು ಅತಿಯಾಗಿ ಪ್ರಚಾರ ಮಾಡಿಕೊಳ್ಳುವ ಮೂಲಕ ಮೋದಿ ವಿಷ್ಣುವಿನ 11ನೇ ಅವತಾರವಾಗಿ ಸರ್ವಾಂತರ್ಯಾಮಿಯಾಗಲು ಬಯಸಿದಂತಿದೆ’ ಎಂದು ಟೀಕಿಸಿದರು.

‘ಧರ್ಮದ ವಿಷಯದಲ್ಲಿ ಮರುಳಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಡಿ’ ಎಂದ ಖರ್ಗೆ, ಮೋದಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಿಜೃಂಭಿಸಿದ್ದರ ಕುರಿತು ಪರೋಕ್ಷವಾಗಿ ಟೀಕಿಸಿದರು. 

ಅಲ್ಲದೆ ತಮ್ಮ ಪಕ್ಷದ ಹಿರಿಯ ನಾಯಕರಾದ ಇಂದಿರಾ ಮತ್ತು ರಾಜೀವ್‌ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಮತ್ತು ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ ಮತ್ತು ನೆಹರೂ ಜೈಲಿಗೆ ಹೋಗಿದ್ದಾರೆ.

ಆದರೆ ಬಿಜೆಪಿಗರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ದೇಶಭಕ್ತಿ ಮೆರೆಯುತ್ತಿದ್ದು ಅವರು ದೇಶಕ್ಕಾಗಿ ಏನೂ ಕೊಡುಗೆ ನೀಡಿಲ್ಲ ಎಂದು ಕುಟುಕಿದರು.

Share this article