20 ವರ್ಷ ತಿರುಪತಿ ಹುಂಡಿ ದುಡ್ಡು ಕದ್ದು ₹140 ಕೋಟಿ ಆಸ್ತಿ ಮಾಡಿದ!

KannadaprabhaNewsNetwork |  
Published : Sep 30, 2025, 01:00 AM ISTUpdated : Sep 30, 2025, 03:42 AM IST
ವೆಂಕಟೇಶ್ವರ | Kannada Prabha

ಸಾರಾಂಶ

ವಿಶ್ವದ ಶ್ರೀಮಂತ ದೇವರಾದ ತಿಮ್ಮಪ್ಪನ ಹುಂಡಿಗೆ ಹಾಕಿದ್ದ ಹಣವನ್ನು ಕದ್ದು ಅಲ್ಲಿನ ಸಿಬ್ಬಂದಿಯೊಬ್ಬ 140 ಕೋಟಿ ರು. ಆಸ್ತಿ ಸಂಪಾದಿಸಿದ್ದ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ.

 ತಿರುಪತಿ: ವಿಶ್ವದ ಶ್ರೀಮಂತ ದೇವರಾದ ತಿಮ್ಮಪ್ಪನ ಹುಂಡಿಗೆ ಹಾಕಿದ್ದ ಹಣವನ್ನು ಕದ್ದು ಅಲ್ಲಿನ ಸಿಬ್ಬಂದಿಯೊಬ್ಬ 140 ಕೋಟಿ ರು. ಆಸ್ತಿ ಸಂಪಾದಿಸಿದ್ದ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ವಿಚಿತ್ರ ಎಂದರೆ, ಹೀಗೆ ಭಾರೀ ಅಕ್ರಮ ಎಸಗಿದ್ದರೂ ಮುಚ್ಚಿ ಹಾಕಲಾಗಿದ್ದ ಈ ಪ್ರಕರಣಕ್ಕೆ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಮರುಜೀವ ನೀಡಿದೆ. ಹೀಗಾಗಿ ತಿರುಪತಿ ಹಣ ಕದ್ದರೂ, ಟಿಟಿಡಿಯ ಹಿಂದಿನ ಅಧ್ಯಕ್ಷರ ಕೃಪಾಕಟಾಕ್ಷದಿಂದ ಪಾರಾಗಿದ್ದ ರವಿಕುಮಾರ್‌ ಎಂಬಾತನಿಗೆ ಇದೀಗ ಸಂಕಷ್ಟ ಎದುರಾಗಿದೆ.

ಅಧಿಕಾರಕ್ಕೆ ಬಂದಾದ ಬಳಿಕ ಕಲಬೆರಕೆ ತುಪ್ಪ ಬಳಸಿ ಲಡ್ಡು ತಯಾರಿಸುವ ಹಗರಣಕ್ಕೆ ಸಿಎಂ ನಾಯ್ಡು ಬ್ರೇಕ್‌ ಹಾಕಿದ್ದರು. ಹೀಗಾಗಿ ಟಿಟಿಡಿ ಮರಳಿ ಕರ್ನಾಟಕದ ಕೆಎಂಎಫ್‌ನಿಂದ ನಂದಿನಿ ತುಪ್ಪ ಖರೀದಿಗೆ ಮುಂದಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಅಕ್ರಮವನ್ನು ಮುಚ್ಚಿಹಾಕಿದ್ದ ಪ್ರಕರಣಕ್ಕೆ ಮರುಜೀವ ನೀಡಿದೆ.

ಕದ್ದು ಕದ್ದು ₹140 ಕೋಟಿ ಆಸ್ತಿ:

ನಿತ್ಯ 1 ಲಕ್ಷ ಜನ ಭೇಟಿ ನೀಡುವ ತಿರುಪತಿಯಲ್ಲಿ ಕೋಟಿಗಟ್ಟಲೆ ಹಣ ಹುಂಡಿಗೆ ಬೀಳುತ್ತದೆ. ಹೀಗೆ ಬೀಳುವ ಹಣವನ್ನು ಲೆಕ್ಕ ಮಾಡಲೆಂದೇ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಅವರ ಮೇಲೆ ನಿಗಾಕ್ಕೆ ಸಿಸಿಟೀವಿಯೂ ಇದೆ. 2023ರ ಏ.29ರಂದು ಭದ್ರತಾ ಸಿಬ್ಬಂದಿ ಸಿಸಿಟೀವಿ ಪರಿಶೀಲಿಸುತ್ತಿದ್ದ ವೇಳೆ ರವಿಕುಮಾರ್‌ ಎಂಬ ವ್ಯಕ್ತಿ ಲೆಕ್ಕ ಹಾಕುವ ವೇಳೆ ಹುಂಡಿ ಹಣ ಕಳ್ಳತನ ಮಾಡಿದ್ದು ಕಂಡುಬಂದಿತ್ತು.

ಆತನನ್ನು ತಪಾಸಣೆಗೆ ಒಳಪಡಿಸಿದ ವೇಳೆ ಆತನ ಬಳಿ 80000 ರು. ನಗದು ಪತ್ತೆಯಾಗಿತ್ತು. ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ 20 ವರ್ಷಗಳಿಂದಲೂ ಆತ ಇದೇ ಕೆಲಸ ಮಾಡಿಕೊಂಡು ಬಂದಿದ್ದಾಗಿ ಬಾಯಿಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಟಿಟಿಡಿ ದೂರು ನೀಡಿತ್ತು. ಈ ಬಗ್ಗೆ ತನಿಖೆ ನಡೆದಾಗ ಆತ ತಿರುಪತಿ, ಚೆನ್ನೈ, ಹೈದ್ರಾಬಾದ್‌ನಲ್ಲಿ ಭಾರೀ ಪ್ರಮಾಣದ ಆಸ್ತಿ ಹೊಂದಿದ್ದು ಕಂಡುಬಂದಿತ್ತು. 2 ದಶಕಗಳಲ್ಲಿ ಹೀಗೆ ಆತ 14 ಕೋಟಿ ರು. ನೀಡಿ ಖರೀದಿಸಿದ್ದ ಆಸ್ತಿಯ ಮೌಲ್ಯ 2023ರ ವೇಳೆಗೆ 140 ಕೋಟಿ ರು.ಗೆ ತಲುಪಿತ್ತು. ಇದನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು.

ಈ ನಡುವೆ 2023ರ ಮೇ 19 ರಂದು ರವಿಕುಮಾರ್‌ ತಾನು ಸಂಪಾದಿಸಿದ್ದ ಏಳು ಆಸ್ತಿಯನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೇ ದಾನ ಮಾಡಿದ್ದ. ಇದಕ್ಕೆ ಟಿಟಿಡಿಯ ಅಂದಿನ ಮುಖ್ಯಸ್ಥ ವೈ.ವಿಸುಬ್ಬಾರೆಡ್ಡಿ ಅನುಮೋದನೆ ನೀಡಿದ್ದರು. ಅದರ ಬೆನ್ನಲ್ಲೇ ಮೇ 30ರಂದು ತಿರುಮಲ ಪೊಲೀಸರು ಅಕ್ರಮ ಕುರಿತು ಚಾರ್ಜ್‌ಶೀಟ್‌ ದಾಖಲಿಸಿದ್ದರು. ಆದರೆ ಅಚ್ಚರಿ ಎನ್ನುವಂತೆ ಇದಾದ ಕೇವಲ ಒಂದು ತಿಂಗಳಲ್ಲಿ ಆರೋಪಿ ಮತ್ತು ಟಿಟಿಡಿ ಅಧಿಕಾರಿಗಳು ಸಂಧಾನದ ಮೂಲಕ ಪ್ರಕರಣ ಇತ್ಯರ್ತಪಡಿಸಿಕೊಳ್ಳುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಬಳಿಕ ಸೆ.9ರಂದು ಲೋಕ ಅದಾಲತ್‌ ಮೂಲಕ ಪ್ರಕರಣ ರಾಜೀ ಮೂಲಕ ಇತ್ಯರ್ಥ ಮಾಡಿಕೊಂಡಿದ್ದರು.

ಆದರೆ ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಗುಲದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪರಿಶೀಲನೆ ಆರಂಭಿಸಿದ್ದರು. ಈ ವೇಳೆ ಟಿಟಿಡಿಯ ವಿಚಕ್ಷಣಾ ಅಧಿಕಾರಿ ಸತೀಶ್‌ ಕುಮಾರ್‌ ತಾನು ಪೊಲೀಸರ ಒತ್ತಡಕ್ಕೆ ಒಳಗಾಗಿ ಪ್ರಕರಣ ಇತ್ಯರ್ಥಕ್ಕೆ ಮುಂದಾಗಿದ್ದೆ ಎಂದು ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಲೋಕ ಅದಾಲತ್‌ನಲ್ಲಿ ಟಿಟಿಡಿ ಸಂಧಾನ ಪ್ರಕ್ರಿಯೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿ ಮನ್ನಿಸಿದ ಹೈಕೋರ್ಟ್‌, ಲೋಕ ಅದಾಲತ್‌ನ ನಿರ್ಧಾರವನ್ನು ರದ್ದುಗೊಳಿಸಿ, ಪ್ರಕರಣದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಸಿಐಡಿಗೆ ಸೂಚಿಸಿದೆ.

ಏನಿದು ಗೋಲ್ಮಾಲ್‌?

- 2023ರಲ್ಲಿ ಹುಂಡಿ ಹಣ ಎಣಿಸುವ ವೇಳೆ ರವಿಕುಮಾರ್‌ ಎಂಬಾತ ದುಡ್ಡು ಕದ್ದು ಸಿಕ್ಕಿಬಿದ್ದಿದ್ದ

- ಆತನ ಬಳಿ 80 ಸಾವಿರ ರು. ಪತ್ತೆ. ವಿಚಾರಣೆ ವೇಳೆ, 20 ವರ್ಷದಿಂದ ಕದಿಯುತ್ತಿದುದು ಪತ್ತೆ

- 2 ದಶಕದಲ್ಲಿ 14 ಕೋಟಿ ರು. ಕದ್ದು ವಿವಿಧೆಡೆ ಆಸ್ತಿ ಖರೀದಿ. ಅದರ ಮೌಲ್ಯ ಈಗ 140 ಕೋಟಿ! 

- ತನ್ನ ಏಳು ಆಸ್ತಿಯನ್ನು ದೇಗುಲಕ್ಕೆ ಬರೆಯುವುದಾಗಿ ಹೇಳಿದ್ದ ರವಿಕುಮಾರ್‌. ಒಪ್ಪಿದ್ದ ಟಿಟಿಡಿ 

- ನಾಯ್ಡು ಅಧಿಕಾರಕ್ಕೆ ಬಂದ ಬಳಿಕ ಪರಿಶೀಲನೆ. ಅಧಿಕಾರಿಯೊಬ್ಬರಿಂದ ಈ ಕುರಿತು ತಪ್ಪೊಪ್ಪಿಗೆ 

- ಆ ಮಾಹಿತಿ ಆಧರಿಸಿ ಹೈಕೋರ್ಟ್‌ ಮೊರೆ ಹೋದ ಪತ್ರಕರ್ತ. ದಾಖಲೆ ವಶಕ್ಕೆ ಆದೇಶ

PREV
Read more Articles on

Recommended Stories

ವಿದೇಶ ನಿರ್ಮಿತ ಸಿನಿಮಾಗಳಿಗೆ ಟ್ರಂಪ್‌ 100% ಸುಂಕ ಘೋಷಣೆ
ರಂಗೋಲಿಯಲ್ಲಿ ಐ ಲವ್‌ಮೊಹಮ್ಮದ್‌: ಮಹಾಗ್ರಾಮ ಉದ್ವಿಗ್ನ ಸ್ಥಿತಿ - ಆರೋಪಿ ವಶಕ್ಕೆ