ಹುಬ್ಬಳ್ಳಿ : ಅಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಅಮಾನುಷವಾಗಿ ಹತ್ಯೆಗೈದ ಬಿಹಾರ ಮೂಲದ ಆರೋಪಿಯನ್ನು ಹುಬ್ಬಳ್ಳಿಯ ಮಹಿಳಾ ಪಿಎಸ್‌ಐ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ ಘಟನೆ ಭಾನುವಾರ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಶರಣಪ್ಪ-ಲತಾ ಕುರಿ ದಂಪತಿಯ ಪುತ್ರಿ ಆಧ್ಯಾ ಸಾಯಿ (5) ಮೃತ ಬಾಲಕಿ. ಬಿಹಾರ ಮೂಲದ ಗಾರೆ (ಗೌಂಡಿ) ಕೆಲಸಗಾರ ರಕ್ಷಿತ್ ಕುಮಾರ ಕ್ರಾಂತಿ (35), ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾದ ಆರೋಪಿ. ಘಟನೆ ನಡೆದ ಬರೀ ಏಳೆಂಟು ಗಂಟೆಯಲ್ಲೇ ಆರೋಪಿಯನ್ನು ಎನ್‌ಕೌಂಟರ್ ಮಾಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬಾಲಕಿ ಅಪಹರಿಸಿ, ನೀಚ ಕೃತ್ಯವೆಸಗಿದ ಪಾಪಿ:
ಶರಣಪ್ಪ-ಲತಾ ಪುರಿ ದಂಪತಿ ಕಳೆದ ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಶರಣಪ್ಪ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ಲತಾ ಮನೆಗೆಲಸ ಮಾಡುತ್ತಿದ್ದರು. ಎಂದಿನಂತೆ ಲತಾ ಭಾನುವಾರ ಬೆಳಗ್ಗೆ ವಿಜಯನಗರ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆ ಹೋದ ವೇಳೆ ಮಗಳನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯ ಒಳಗಡೆ ಕೆಲಸ ಮಾಡುತ್ತಿದ್ದಾಗ ಆಧ್ಯಾ ಸಾಯಿ ಮನೆಯ ಮುಂದಿನ ಆವರಣದಲ್ಲಿ ಆಟವಾಡಿಕೊಂಡಿದ್ದಳು.
ಈ ವೇಳೆ ಮಗುವಿನ ಚಲನವಲನ ಗಮನಿಸಿದ ರಕ್ಷಿತ್ ಕುಮಾರ ಎಂಬಾತ, ಬಾಲಕಿಗೆ ಚಾಕೋಲೆಟ್ ಕೊಡಿಸುವುದಾಗಿ ಹೇಳಿ ಆಮಿಷ ತೋರಿಸಿ ಅಪಹರಿಸಿ, ಸಮೀಪದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಾಡಿದಾಗ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಬಳಿಕ ಮನೆ ಕೆಲಸ ಮುಗಿಸಿಕೊಂಡು ಬಂದ ತಾಯಿಗೆ ಮಗಳು ಕಾಣಿಸದೇ ಇದ್ದಾಗ ಗಾಬರಿಯಿಂದ ಹುಡುಕಾಟ ನಡೆಸಿದಳು. ಆಗ ಶೌಚಾಲಯದಲ್ಲಿ ಮಗು ಶವವಾಗಿ ಬಿದ್ದಿರುವುದು ಕಂಡಿತು. ತಾಯಿಯ ರೋದನ ಕೇಳಿ, ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.ಭುಗಿಲೆದ್ದ ಆಕ್ರೋಶ:
ಮಗುವಿನ ಹತ್ಯೆಯ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ, ಸ್ಥಳೀಯರು ಅಶೋಕನಗರ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ಶುರು ಮಾಡಿದರು. ಆರೋಪಿಯನ್ನು ಬಂಧಿಸಿ ಎನ್‌ಕೌಂಟರ್ ಮಾಡಬೇಕು, ಇಲ್ಲವೇ ಆರೋಪಿಯನ್ನು ನಮಗೆ ನೀಡಿ, ನಾವೇ ಶಿಕ್ಷೆ ಕೊಡುತ್ತೇವೆ ಎಂದು ಆಗ್ರಹಿಸಿ 5 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದರು.
ಠಾಣೆಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಧ್ಯಾಹ್ನದ ಬಳಿಕ ಮಹಿಳಾ ಸಂಘಟನೆಗಳು, ವಿವಿಧ ಜನಪರ ಸಂಘಟನೆಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದವು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು, ನೂಕುನುಗ್ಗಲು ಏರ್ಪಟ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಜೊತೆಗೆ, ನಗರದ ಇತರೆಡೆಯೂ ಪ್ರತಿಭಟನೆಗಳು ನಡೆದವು. ಕೆಎಂಸಿ ಶವಾಗಾರದ ಎದುರಿಗೆ ಟೈರ್‌ಗೆ ಬೆಂಕಿ ಹಚ್ಚಲಾಯಿತು. ಪ್ರತಿಭಟನೆಯಿಂದಾಗಿ ನಗರದ ಕೆಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.ಕೊನೆಗೂ ಎನ್‌ಕೌಂಟರ್:
ಸಾರ್ವಜನಿಕರ ತೀವ್ರ ಪ್ರತಿಭಟನೆಯಿಂದ ಒತ್ತಡಕ್ಕೊಳಗಾದ ಪೊಲೀಸ್ ಆಯುಕ್ತರು, ಆರೋಪಿ ಪತ್ತೆಗೆ 5 ತಂಡಗಳನ್ನು ರಚಿಸಿ ಶೋಧಕಾರ್ಯ ಶುರು ಮಾಡಿದರು. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ, ರಕ್ಷಿತ ಕುಮಾರ ಕ್ರಾಂತಿ ವಾಸವಾಗಿದ್ದ ಇಲ್ಲಿನ ತಾರಿಹಾಳ ಬ್ರಿಡ್ಜ್ ಬಳಿಯ ಮನೆಯ ಮೇಲೆ ದಾಳಿ ನಡೆಸಿದರು. ಆತನನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ. ಪೊಲೀಸ್ ವಾಹನಕ್ಕೆ ಕಲ್ಲೆಸೆದು ತಪ್ಪಿಸಿಕೊಳ್ಳಲು ಯತ್ನಿಸಿದ.
ಈ ವೇಳೆ, ಅಶೋಕನಗರ ಠಾಣೆಯ ಮಹಿಳಾ ಪಿಎಸ್‌ಐ ಅನ್ನಪೂರ್ಣಾ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಸರೆಂಡರ್ ಆಗುವಂತೆ ಎಚ್ಚರಿಸಿದರು. ಆದರೂ ಆತ ತನ್ನ ಕೃತ್ಯ ಮುಂದುವರಿಸಿದಾಗ ಅನಿವಾರ್ಯವಾಗಿ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಅದನ್ನು ಲೆಕ್ಕಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೊಂದು ಗುಂಡು ಹೊಡೆದಾಗ ಅದು ಆರೋಪಿಯ ಬೆನ್ನಿಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಕೆಎಂಸಿಆರ್‌ಐಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾದಕ ವ್ಯಸನಿ ಆರೋಪಿ:
ಆರೋಪಿ ರಕ್ಷಿತ ಕ್ರಾಂತಿ ಕಳೆದ ಕೆಲ ತಿಂಗಳಿಂದ ಇಲ್ಲೇ ವಾಸವಾಗಿದ್ದ. ಆತ ಗಾಂಜಾ ಸೇರಿದಂತೆ ವಿವಿಧ ಮಾದಕ ವ್ಯಸನಿಯಾಗಿದ್ದ. ಗಾಂಜಾ ಅಮಲಿನಲ್ಲೇ ಈತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಘಟನೆ ನೆನಪಿಸಿದ ಘಟನೆ:
ಈ ಹಿಂದೆ, ತೆಲಂಗಾಣದಲ್ಲಿ ಯುವತಿಯೊಬ್ಬಳ ಮೇಲೆ ಆರು ಜನ ಸೇರಿ ಅತ್ಯಾಚಾರ ಎಸಗಿದ್ದಾಗ ಹುಬ್ಬಳ್ಳಿ ಮೂಲದ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಹತ್ಯೆಗೈದಿದ್ದರು. ಅದು ದೇಶದಲ್ಲೇ ಭಾರೀ ಸಂಚಲನವನ್ನುಂಟು ಮಾಡಿತ್ತು. ಅತ್ಯಾಚಾರ, ಹತ್ಯೆ ಆರೋಪಿಗಳ ಆ ರೀತಿ ಕ್ರಮವನ್ನೇಕೆ ನಮ್ಮಲ್ಲಿ ತೆಗೆದುಕೊಳ್ಳುವುದಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಇತ್ತು. ಆದರೆ, ಇದೀಗ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಈ ಪ್ರಶ್ನೆಗಳಿಗೆ ಉತ್ತರ ನೀಡಿದಂತಾಗಿದೆ. ಇದು ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆ ನಡೆದಿದ್ದು ಹೇಗೆ?
- ಹುಬ್ಬಳ್ಳಿಯ ವಿಜಯನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ
- ಬಾಲಕಿಗೆ ಬಿಹಾರ ಮೂಲದ ರಕ್ಷಿತ್ ಕುಮಾರನಿಂದ ಚಾಕೋಲೇಟ್ ಆಮಿಷ
- ಶೌಚಾಲಯಕ್ಕೆ ಕರೆದೊಯ್ದು ರೇಪ್‌ಗೆ ಯತ್ನ, ಬಾಲಕಿ ಕಿರುಚಿದಾಗ ಕೊಲೆ
- ಸೀಸಿಟೀವಿಯಲ್ಲಿ ಆರೋಪಿ ಪತ್ತೆ ಹಚ್ಚಿ ಆತನ ಮನೆಗೆ ಹೋದ ಪೊಲೀಸ್
- ಪೊಲೀಸರ ಮೇಲೇ ಕಲ್ಲೆಸೆದು ದಾಳಿ ಮಾಡಿ ಪರಾರಿಗೆ ಆರೋಪಿ ಯತ್ನ
- ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡು । ಎನ್‌ಕೌಂಟರ್‌ಗೆ ಆರೋಪಿ ಬಲಿ
ಎನ್‌ಕೌಂಟರ್ ಮಾಡಿದ್ದು ಲೇಡಿ ಪಿಎಸ್‌ಐ
ಆರೋಪಿಯನ್ನು ಎನ್‌ಕೌಂಟರ್ ಮಾಡಿದ್ದು ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಎಂಬದು ವಿಶೇಷ. ಬಂಧಿಸಲು ಹೋದ ತಮ್ಮ ಮೇಲೆ ದಾಳಿಗೆ ಆರೋಪಿ ಯತ್ನಿಸಿದಾಗ 2 ಬಾರಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದರು. ಆದರೆ ಆತ ಅದಕ್ಕೆ ಲೆಕ್ಕಿಸದೇ ತಪ್ಪಿಸಿಕೊಳ್ಳಲು ಹೋದಾಗ ಗುಂಡು ಹಾರಿಸಿದರು. ಗುಂಡು ಬೆನ್ನಿಗೆ ತಾಗಿ ಗಾಯಗೊಂಡ ಆತ ಕಿಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ. ಅನ್ನಪೂರ್ಣಾ ಕ್ರಮ ಜನಮೆಚ್ಚುಗೆಗೆ ಪಾತ್ರವಾಗಿದೆ.