ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಜೀವನ, ಕೆಲಸ ದೇಶದ ಭವಿಷ್ಯ ರೂಪಿಸಿತು: ಸಿಡಬ್ಲ್ಯುಸಿ

KannadaprabhaNewsNetwork |  
Published : Dec 28, 2024, 12:45 AM ISTUpdated : Dec 28, 2024, 04:32 AM IST
ಅರ್ಧಕ್ಕೆ ಹಾರಿದ ಧ್ವಜ | Kannada Prabha

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಗಲುವಿಕೆಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಂತಾಪ ಸೂಚಿಸಿದ್ದು, ಅವರ ಕೊಡುಗೆಗಳು ದೇಶವನ್ನು ಬದಲಾಯಿಸಿ, ಜಾಗತಿಕ ಗೌರವಕ್ಕೆ ಪಾತ್ರರಾಗುವಂತೆ ಮಾಡಿತು ಎಂದಿದೆ.

 ನವದೆಹಲಿ : ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಗಲುವಿಕೆಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಂತಾಪ ಸೂಚಿಸಿದ್ದು, ಅವರ ಕೊಡುಗೆಗಳು ದೇಶವನ್ನು ಬದಲಾಯಿಸಿ, ಜಾಗತಿಕ ಗೌರವಕ್ಕೆ ಪಾತ್ರರಾಗುವಂತೆ ಮಾಡಿತು ಎಂದಿದೆ.

ಎಐಸಿಸಿ ಮುಖ್ಯಕಚೇರಿಯಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಜೈರಾಂ ರಮೇಶ್‌, ಕೆ.ಸಿ. ವೇಣುಗೋಪಾಲ್‌, ಪ್ರಿಯಾಂಕಾ ಗಾಂಧಿ ಸೆರಿದಂತೆ ಪಕ್ಷದ ನಾಯಕರು ಮನಮೋಹನ್‌ ಸಿಂಗ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಅಂಗೀಕರಿಸಲಾದ ಸಂತಾಪಸೂಚಕ ಗೊತ್ತುವಳಿಯಲ್ಲಿ, ‘ವಿತ್ತಸಚಿವರಾಗಿದ್ದ ಸಿಂಗ್‌ ಭಾರತದ ಆರ್ಥಿಕ ಉದಾರೀಕರಣದ ಶಿಲ್ಪಿಯಾಗಿದ್ದರು. ದೂರದೃಷ್ಟಿಯ ನಾಯಕರಾಗಿದ್ದ ಅವರು ಹಲವು ಸುಧಾರಣೆಗಳ ಮೂಲಕ ದೇಶವನ್ನು ಪಾವತಿಗಳ ಸಮತೋಲನದಂತಹ ಬಿಕ್ಕಟ್ಟುಗಳಿಂದ ಮೇಲೆತ್ತಿ ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟು ಆರ್ಥಿಕ ಬೆಳವಣಿಗೆಗೆ ಕಾರಣರಾದರು. ಪ್ರಧಾನಿಯಾಗಿದ್ದ ಅವಧಿಯಲ್ಲಿ ಶಾಂತಿ ಹಾಗೂ ಬುದ್ಧಿವಂತಿಕೆಯಿಂದ ದೇಶವನ್ನು ಮುನ್ನಡೆಸಿದರು. ಜತೆಗೆ, ಉದ್ಯೋಗ ಖಾತ್ರಿ, ಶಿಕ್ಷಣ ಹಕ್ಕು, ಅಣು ಒಪ್ಪಂದದಂತಹ ಹಲವು ಯೋಜನೆಗಳನ್ನು ಪರಿಚಯಿಸಿದರು. ಸಾಂವಿಧಾನಿಕ ತಿದ್ದುಪಡಿಗಳನ್ನೂ ತಂದರು’ ಎಂದು ಸಿಂಗ್‌ ಕೊಡುಗೆಗಳನ್ನು ಸ್ಮರಿಸಲಾಗಿದೆ.

ಸಂಪುಟದಲ್ಲಿ ಮನಮೋಹನ್‌ ವ್ಯಕ್ತಿತ್ವದ ಗುಣಗಾನ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ನಿಧನಕ್ಕೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂತಾಪ ಸೂಚಿಸಲಾಗಿದ್ದು, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಸಂತಾಪಸೂಚಕ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

ಈ ಗೊತ್ತುವಳಿಯಲ್ಲಿ, ‘ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ರಾಷ್ಟ್ರೀಯ ಜೀವನದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಅಗಲಿಕೆಯಿಂದ ದೇಶವು ಓರ್ವ ಚಾಣಾಕ್ಷ ಆಡಳಿತಗಾರ ಹಾಗೂ ವಿಶಿಷ್ಟ ನಾಯಕನನ್ನು ಕಳೆದುಕೊಂಡಿದೆ’ ಎಂದು ಬರೆಯಲಾಗಿದೆ.

ಈ ಸಂದರ್ಭದಲ್ಲಿ ಸಿಂಗ್‌ ಅವರಿಗೆ ಗೌರವ ಸೂಚಿಸುವ ಸಲುವಾಗಿ ಜ.1ರ ವರೆಗೆ ಶೋಕಾಚರಣೆ ಘೋಷಿಸಲಾಗಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಈ ವೇಳೆ ಯಾವುದೇ ಮನರಂಜನೆ ಕಾರ್ಯಕ್ರಮ ನಡೆಯುವುದಿಲ್ಲ ಎಂದ ತೀರ್ಮಾನಿಸಲಾಯಿತು. ಅಂತೆಯೇ, ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಲಾಯಿತು.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ