ದೇಶದ ಔದ್ಯಮಿಕ ವಲಯದ ಜೀವಾಳವಾದ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳಿಗೆ ವಿಶೇಷ ಗಮನ ನೀಡಲು ಸರ್ಕಾರ ನಿರ್ಧರಿಸಿದೆ. ಅದರಲ್ಲೂ ವಿಶೇಷವಾಗಿ ಕಾರ್ಮಿಕರ ಆಧರಿತ ಉತ್ಪಾದನ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ನಿಟ್ಟಿನಲ್ಲಿ ಹಣಕಾಸು, ಕಾನೂನು ಬದಲಾವಣೆ ಮತ್ತು ತಂತ್ರಜ್ಞಾನದ ನೆರವಿನ ಮೂಲಕ ಈ ವಲಯದ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಲು ಅಗತ್ಯವಾದ ನೆರವು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಕೈಗಾರಿಕೆಗಳ ಸಾಲಕ್ಕೆ ಖಾತರಿಕಿರು, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು ಯಂತ್ರೋಪಕರಣ ಮತ್ತು ಇತರೆ ಉಪಕರಣ ಖರೀದಿಗೆ ಸಾಲ ಪಡೆಯಲು ಮೂರನೇ ವ್ಯಕ್ತಿಯ ಗ್ಯಾರಂಟಿ ಪಡೆಯಬೇಕಾದ ಅನಿವಾರ್ಯತೆ ತಪ್ಪಿಸಲು, ಸ್ವತಃ ಸರ್ಕಾರವೇ ಸಾಲಕ್ಕೆ ಖಾತರಿ ನೀಡುವ ಯೋಜನೆ ಜಾರಿಗೆ ನಿರ್ಧರಿಸಿದೆ. ಇಂಥ ಕೈಗಾರಿಕೆಗಳ ಸಾಲದ ಅಪಾಯವನ್ನು ಗಮನಿಸಿ ಸಾಲದ ಖಾತ್ರಿ ಯೋಜನೆ ಜಾರಿಗೊಳಿಸಲಾಗುವುದು.
ಈ ಯೋಜನೆ ಜಾರಿಗಾಗಿಯೇ ಪ್ರತ್ಯೇಕ ಹಣಕಾಸು ಖಾತರಿ ನಿಧಿ ಸ್ಥಾಪಿಸಲಾಗುವುದು. ಸಾಲದ ಮೊತ್ತ ಹೆಚ್ಚಿದ್ದರೂ ಪ್ರತಿ ಅರ್ಜಿದಾರರಿಗೂ 100 ಕೋಟಿ ರು.ವರೆಗೂ ಸಾಲದ ಖಾತ್ರಿ ಸಿಗಲಿದೆ. ಇದಕ್ಕಾಗಿ ಸಾಲ ಪಡೆಯುವವರು ಗ್ಯಾರಂಟಿ ಶುಲ್ಕ ಮತ್ತು ವಾರ್ಷಿಕ ಗ್ಯಾರಂಟಿ ಶುಲ್ಕ ಪಾವತಿಸಬೇಕು ಎಂದು ಸರ್ಕಾರ ಹೇಳಿದೆ.
ಎಂಎಸ್‌ಎಂಇ ಸಾಲ ಪರಿಶೀಲನೆಗೆ ವ್ಯವಸ್ಥೆ
ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವ ಬಾಹ್ಯ ಸಂಸ್ಥೆಗಳ ವರದಿ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ತಮ್ಮದೇ ಆದ ಪರಿಶೀಲನಾ ವ್ಯವಸ್ಥೆಯೊಂದನ್ನು ರೂಪಿಸಲಿವೆ. ಇದು ಸಾಲ ನೀಡಲು ಬಳಸುವ ಸಾಂಪ್ರದಾಯಿಕ ವ್ಯವಸ್ಥೆ ಬದಲಾಯಿಸಿ, ಹೊಸ ವ್ಯವಸ್ಥೆ ಜಾರಿಗೆ ಕಾರಣವಾಗಲಿದೆ. ಉದ್ಯಮಗಳ ಆಸ್ತಿ ಮತ್ತು ವಹಿವಾಟು ಆಧರಿಸಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.
ಸಂಕಷ್ಟದ ಸಮಯದಲ್ಲಿ ನೆರವು
ಉದ್ಯಮಗಳು ಸಂಕಷ್ಟದಲ್ಲಿರುವಾಗ ಅವುಗಳಿಗೆ ನೆರವು ನೀಡಲು ಹೊಸ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪರಿಸ್ಥಿತಿ ಕೈಮೀರಿದೆ ಎನ್ನುವ ಹಂತದಲ್ಲಿ ಉದ್ಯಮಗಳು ಸ್ಪೆಷಲ್ ಮೆನ್ಷನ್ ಅಕೌಂಟ್‌ನಲ್ಲಿ ಸೇರ್ಪಡೆಯಾದ ವೇಳೆ ಅವು ಎನ್‌ಪಿಎಗೆ ಸೇರುವುದನ್ನು ತಡೆಯಲು ಅವುಗಳಿಗೆ ಸರಾಗ ಸಾಲದ ಅಗತ್ಯವಿರುತ್ತದೆ. ಈ ನೆರವು ನೀಡಲು ಸರ್ಕಾರದ ಪ್ರಾಯೋಜಿತ ವಿಶೇಷ ನೆರವಿನ ನಿಧಿ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ
ತರುಣ್ ಯೋಜನೆಯಡಿ ಈಗಾಗಲೇ 10 ಲಕ್ಷ ರು. ಸಾಲ ಪಡೆದ ಅದನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದವರಿಗೆ ಹೆಚ್ಚುವರಿ 10 ಲಕ್ಷ ರು. ಸಾಲ ವಿತರಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.
ಟಿಆರ್‌ಇಡಿಎಸ್ ಸೇರ್ಪಡೆಗೆ ವಹಿವಾಟು ಮಿತಿ ಇಳಿಕೆ
500 ಕೋಟಿ ರು. ಇದ್ದ ಮಿತಿ 250 ಕೋಟಿ ರು.ಗೆ ಕಡಿತಟ್ರೇಡ್ ರಿಸೀವಬಲ್ಸ್ ಎಲೆಕ್ಟ್ರಾನಿಕ್ ಡಿಸ್ಕೌಂಟ್ ಸಿಸ್ಟಮ್‌ಗೆ ಎಂಎಸ್‌ಎಂಇ ವಲಯದ ಉದ್ಯಮಗಳು ಸೇರಲು ಉದ್ಯಮಗಳು ಹೊಂದಿರಬೇಕಾದ ವಹಿವಾಟು ಮೊತ್ತವನ್ನು 500 ಕೋಟಿ ರು.ನಿಂದ 250 ಕೋಟಿ ರು.ಗೆ ಇಳಿಸಲಾಗುವುದು. ಇದರಿಂದ 7000ಕ್ಕೂ ಹೆಚ್ಚು ಕಂಪನಿಗಳು ಹೊಸದಾಗಿ ಈ ಆನ್‌ಲೈನ್ ವ್ಯವಸ್ಥೆಗೆ ಸೇರ್ಪಡೆಯಾಗುವ ಮೂಲಕ ತಮ್ಮ ದುಡಿಯುವ ಬಂಡವಾಳವನ್ನು ನಗದಾಗಿ ಪರಿವರ್ತಿಸಬಹುದು ಎಂದು ಸರ್ಕಾರ ಹೇಳಿದೆ.
ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಸಿಡ್ಬಿ ಶಾಖೆ
ಮುಂದಿನ 3 ವರ್ಷಗಳಲ್ಲಿ ಎಲ್ಲಾ ಪ್ರಮುಖ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಸಿಡ್ಬಿ ತನ್ನ ಶಾಖೆ ತೆರೆದು ನೇರವಾಗಿ ಸಾಲ ವಿತರಣೆಗೆ ಮುಂದಾಗಲಿವೆ ಎಂದು ಸರ್ಕಾರ ಹೇಳಿದೆ. ಈ ವರ್ಷ ಅಂಥ 24 ಶಾಖೆ ತೆರೆಯಲಾಗುವುದು. ಇದರೊಂದಿಗೆ 242 ದೊಡ್ಡ ಕ್ಲಸ್ಟರ್‌ಗಳ ಪೈಕಿ 168 ಕ್ಲಸ್ಟರ್‌ಗಳಲ್ಲಿ ಸಿಡ್ಬಿ ಶಾಖೆ ತೆರೆದಂತೆ ಆಗಲಿದೆ.
100 ಆಹಾರ ಗುಣಮಟ್ಟ ತಪಾಸಣಾ ಕೇಂದ್ರ
ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷೆ ನಡೆಸುವ 100 ಪ್ರಯೋಗಾಲಯ ತೆರೆಯಲು ನೆರವು ನೀಡಲಾಗುವುದು. ಇಂಥ ಲ್ಯಾಬ್‌ಗಳಿಗೆ ಎನ್‌ಎಬಿಎಲ್ ಮಾನ್ಯತೆ ನೀಡಲಾಗುವುದು. ಇದಲ್ಲದೇ 50 ಬಹು ಉತ್ಪನ್ನ ಆಹಾರ ವಿಕಿರಣಾ ಚಿಕಿತ್ಸಾ ಕೇಂದ್ರ ತೆರೆಯಲೂ ನೆರವು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಇ ಕಾಮರ್ಸ್ ರಫ್ತು ಕೇಂದ್ರ
ಎಂಎಸ್‌ಎಂಇಗಳು ಮತ್ತು ಸಾಂಪ್ರದಾಯಿಕ ಕಲಾಕಾರರು ತಾವು ಉತ್ಪಾದಿಸುವ ವಸ್ತುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವಾಗುವಂತೆ ಖಾಸಗಿ ಸಹಭಾಗಿತ್ವದಲ್ಲಿ ಇ ಕಾಮರ್ಸ್ ರಫ್ತು ಕೇಂದ್ರಗಳನ್ನು ತೆರೆಯಲಾಗುವುದು. ಈ ಕೇಂದ್ರಗಳು ರಫ್ತಿಗೆ ಸಂಬಂಧಿತ ಕಾನೂನು ಮತ್ತು ಸಾಗಣೆ ಕುರಿತ ಎಲ್ಲಾ ಸೇವೆಗಳನ್ನು ಒಂದೆಡೆ ಲಭ್ಯವಾಗುವಂತೆ ಮಾಡಲಿದೆ.
500 ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ತರಬೇತಿ
1 ವರ್ಷ ತರಬೇತಿ, ಮಾಸಿಕ 5000 ರು. ನೆರವು
ಮುಂದಿನ 5 ವರ್ಷಗಳ ಅವಧಿಯಲ್ಲಿ 1 ಕೋಟಿ ಯುವಸಮೂಹಕ್ಕೆ 500 ಕಂಪನಿಗಳಲ್ಲಿ ಇಂಟ್ರನ್‌ಶಿಪ್‌ಗೆ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ. ಒಂದು ವರ್ಷಗಳ ಅವಧಿಯ ಈ ತರಬೇತಿಯು ಯುವಸಮೂಹಕ್ಕೆ ಉದ್ಯಮ ವಾತಾವರಣ, ವೃತ್ತಿಪರತೆ, ಹೊಸ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಲಿದೆ. ತರಬೇತಿ ಅವಧಿಯಲ್ಲಿ ಮಾಸಿಕ 5000 ರು. ಮತ್ತು ಒಂದು ಬಾರಿ ನೀಡಲಾಗುವ 6000 ರು. ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಈ ಯೋಜನೆಯಡಿ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯಡಿ ತರಬೇತಿ ವೆಚ್ಚ ಮತ್ತು ಇಂಟ್ರನ್‌ಶಿಪ್ ವೆಚ್ಚದ ಶೇ.10ರಷ್ಟು ಹಣವನ್ನು ಭರಿಸಬೇಕಿದೆ ಎಂದು ಸರ್ಕಾರ ಹೇಳಿದೆ.
ಕೈಗಾರಿಕಾ ಪಾರ್ಕ್ ಆರಂಭಕ್ಕೆ ನೆರವು
11 ನಗರಗಳಲ್ಲಿ ರಾಜ್ಯಗಳು ಮತ್ತು ಖಾಸಗಿ ಸಹಭಾಗಿತ್ವದಲ್ಲಿ, ಹೂಡಿಕೆಗೆ ಎಲ್ಲಾ ರೀತಿಯಲ್ಲಿ ಸರ್ವಸನ್ನದ್ಧವಾಗಿರುವ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಕೈಗಾರಿಕಾ ಕಾರ್ಮಿಕರಿಗೆ ವಸತಿ ವ್ಯವಸ್ಥೆ
ಕೈಗಾರಿಕಾ ಕಾರ್ಮಿಕರಿಗೆ ಅಗ್ಗದ ವಸತಿ ವ್ಯವಸ್ಥೆ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಡಾರ್ಮಿಟ್ರಿ ರೀತಿಯಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಕೈಗಾರಿಕೆಗಳ ನೆರವನ್ನೂ ಪಡೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ