ಸತತ 4ನೇ ದಿನವೂ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್‌ ಏರಿಕೆ : ನಿನ್ನೆ 899 ಅಂಕಗಳ ಏರಿಕೆ

KannadaprabhaNewsNetwork | Updated : Mar 21 2025, 04:22 AM IST

ಸಾರಾಂಶ

ಸತತ 4ನೇ ದಿನವಾದ ಗುರುವಾರ ಕೂಡಾ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಏರಿಕೆ ಕಂಡಿದೆ.

ಮುಂಬೈ: ಸತತ 4ನೇ ದಿನವಾದ ಗುರುವಾರ ಕೂಡಾ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಏರಿಕೆ ಕಂಡಿದೆ. ಗುರುವಾರ ಸೆನ್ಸೆಕ್ಸ್‌ 899 ಅಂಕಗಳ ಉತ್ತಮ ಏರಿಕೆ ಕಂಡು 76348 ಅಂಕಗಳಲ್ಲಿ ಮುಕ್ತಾಯವಾಯಿತು. ಇನ್ನೊಂದೆಡೆ ನಿಫ್ಟಿ ಕೂಡಾ 283 ಅಂಕ ಏರಿ 23190 ಅಂಕಗಳಲ್ಲಿ ತೆರೆಕಂಡಿತು. ಜಾಗತಿಕ ಷೇರುಪೇಟೆಗಳ ಪ್ರಭಾವ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಈ ವರ್ಷ ಇನ್ನಷ್ಟು ಬಡ್ಡಿದರ ಕಡಿತದ ಸುಳಿವು ನೀಡಿದ್ದು ಷೇರುಪೇಟೆ ಉತ್ತಮ ಏರಿಕೆಗೆ ಕಾರಣವಾಗಿದೆ. ರಿಲಯನ್ಸ್‌, ಭಾರ್ತಿ ಏರ್‌ಟೆಲ್‌, ಐಟಿ ಷೇರುಗಳು ಉತ್ತಮ ಏರಿಕೆ ಕಂಡವು.

ನಾಗ್ಪುರ ಹಿಂಸಾಚಾರ: 6 ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸು

ನಾಗಪುರ: ಧರ್ಮಗ್ರಂಥ ವಿಚಾರವಾಗಿ ಹಿಂಸಾಚಾರಕ್ಕೆ ತುತ್ತಾಗಿದ್ದ ನಾಗಪುರದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದ ಕಾರಣಕ್ಕೆ ಸ್ಥಳೀಯ ಮುಸ್ಲಿಂ ನಾಯಕ ಸೇರಿ 6 ಜನರ ವಿರುದ್ಧ ಸೈಬರ್‌ ಕ್ರೈಂ ಪೊಲೀಸರು ದೇಶದ್ರೋಹದ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಫಹೀಂ ಖಾನ್‌ ಸೇರಿದಂತೆ 6 ಜನರ ವಿರುದ್ಧ ಕಠಿಣ ಕಾಯ್ದೆ ಹೊರಿಸಲಾಗಿದೆ. ಫಹೀಂ ಖಾನ್‌ ಹಿಂಸೆಯನ್ನು ಪ್ರಚೋದಿಸುವಂತಹ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದ. ಚಾದರ್‌ ಜೊತೆ ಧರ್ಮಗ್ರಂಥವನ್ನು ಸುಡಲಾಗಿದೆ ಎಂದು ಸುಳ್ಳು ವಿಡಿಯೋ ಮಾಡಿ ಹಿಂಸೆ ತೀವ್ರತೆಗೆ ತೆರುಗಲು ಕಾರಣನಾಗಿದ್ದ. ಹೀಗಾಗಿ ಈ 6 ಜನರ ಸಾಮಾಜಿಕ ಜಾಲತಾಣಗಳ ಮಾಹಿತಿ ನೀಡುವಂತೆ ಫೇಸ್‌ಬುಕ್‌, ಇನ್ಸ್ಟಾ, ಎಕ್ಸ್ ಮತ್ತು ಯೂಟ್ಯೂಬ್‌ಗೆ ಸೂಚಿಸಲಾಗಿದೆ. ಜೊತೆಗೆ ಅವರ ಖಾತೆಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಯುಎಇನಲ್ಲಿ ಭಾರತದ 25 ಜನರಿಗೆ ಗಲ್ಲು ಶಿಕ್ಷೆ ಪ್ರಕಟ, ಜಾರಿ ಆಗಿಲ್ಲ

ನವದೆಹಲಿ: ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದ ವಿವಿಧ ಕೋರ್ಟ್‌ಗಳು ವಿವಿಧ ಪ್ರಕರಣಗಳಲ್ಲಿ 25 ಭಾರತೀಯರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ ಇನ್ನು ಶಿಕ್ಷೆಯನ್ನು ಜಾರಿ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಗುರುವಾರ ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್‌ ಸಿಂಗ್‌, ಯುಎಇಯಲ್ಲಿ ಅತಿ ಹೆಚ್ಚು ಭಾರತೀಯರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ಶಿಕ್ಷೆ ಜಾರಿಯಾಗಿಲ್ಲ. ಯುಎಇ ನಂತರದಲ್ಲಿ ಸೌದಿ ಅರೇಬಿಯಾ 11, ಮಲೇಷ್ಯಾ 6, ಕುವೈತ್‌ 3 ಮತ್ತು ಇಂಡೋನೇಷ್ಯಾ, ಕತಾರ್‌, ಅಮೆರಿಕ ಮತ್ತು ಯೆಮೆನ್‌ನಲ್ಲಿ ತಲಾ ಒಬ್ಬರು ಭಾರತೀಯರಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಇನ್ನು 10,152 ಭಾರತೀಯ ಖೈದಿಗಳು ವಿದೇಶಿ ಜೈಲುಗಳಲ್ಲಿದ್ದಾರೆ. ಅವರ ರಕ್ಷಣೆಗಾಗಿ ಭಾರತ ಸರ್ವಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.

ಮೋದಿ ಅಧಿಕಾರಾವಧಿಯಲ್ಲಿ ಉಗ್ರ ಕೃತ್ಯಗಳಲ್ಲಿ ಶೇ.71 ಇಳಿಕೆ: ಕೇಂದ್ರದ ಮಾಹಿತಿ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಇದರ ಪರಿಣಾಮ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ಉಗ್ರ ಕೃತ್ಯಗಳಲ್ಲಿ ಶೇ,.71ರಷ್ಟು ಇಳಿಕೆಯಾಗಿದೆ. ಮೋದಿ ಸರ್ಕಾರದಲ್ಲಿ ಉಗ್ರರನ್ನು ಜೈಲಿಗೆ ಅಥವಾ ನರಕಕ್ಕೆ ಕಳುಹಿಸಲಾಗುತ್ತದೆ’ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ‘ ಹಿಂದೆ ಭಯೋತ್ಪಾದಕರನ್ನು ವೈಭವೀಕರಿಸಿ ಉತ್ತಮ ಆಹಾರ ನೀಡಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಭಯೋತ್ಪಾದಕರ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಇದರ ಫಲವಾಗಿ ಒಳನಾಡಿನಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದಿಲ್ಲ’ ಎಂದಿದ್ದಾರೆ.

ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ: 85 ಸಾವು

ದೇರ್-ಅಲ್-ಬಲಾಹ್: ಗಾಜಾದ ಮೇಲೆ ಇಸ್ರೇಲ್ ಗುರುವಾರ ರಾತ್ರಿ ಮತ್ತೆ ದಾಳಿ ನಡೆಸಿದ್ದು, ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಒಟ್ಟು 85 ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.ಹಮಾಸ್‌ ಕದನ ವಿರಾಮ ವಿಸ್ತರಣೆಗೆ ಒಪ್ಪದಿರುವುದಕ್ಕೆ ಮತ್ತು ತನ್ನ ವಶದಲ್ಲಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡದ್ದಕ್ಕೆ ಮಂಗಳವಾರವಷ್ಟೇ ಇಸ್ರೇಲ್ ಗಾಜಾಪಟ್ಟಿ ಮೇಲೆ ನಡೆಸಿದ್ದ ಭೀಕರ ವೈಮಾನಿಕ ದಾಳಿಗೆ 400ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೇನಿಯರು ಬಲಿಯಾಗಿದ್ದರು. ಈ ನಡುವೆ ಗುರುವಾರ ಮಧ್ಯರಾತ್ರಿ ಮತ್ತೆ ಇಸ್ರೇಲ್ ಹಲವು ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್ ಸೇನೆ ಈ ದಾಳಿ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಹಮಾಸ್‌ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆದಿದೆ. ಆದರೆ ಗಾಜಾದ ನಾಗರಿಕರ ಸಾವಿಗೆ ಹಮಾಸ್‌ ಕಾರಣ ಎಂದಿದೆ.

Share this article