ಬಿಎಸ್‌ಎನ್‌ಎಲ್‌: ಕೋಟ್ಯಂತರ ಗ್ರಾಹಕರ ಮಾಹಿತಿ ಸೋರಿಕೆ

KannadaprabhaNewsNetwork |  
Published : Jun 27, 2024, 01:02 AM ISTUpdated : Jun 27, 2024, 04:56 AM IST
ಬಿಎಸ್‌ಎನ್‌ಎಲ್‌ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಅಧೀನ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದು, ಕೋಟ್ಯಂತರ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಕಳವು ಮಾಡಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ಅಧೀನ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದು, ಕೋಟ್ಯಂತರ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಕಳವು ಮಾಡಿದ್ದಾರೆ. ಜೊತೆಗೆ ಕಳವು ಮಾಡಿದ ಮಾಹಿತಿಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಏಥಿಯನ್ಸ್‌ ಟೆಕ್‌ ಎಂಬ ಸಂಸ್ಥೆ ತಯಾರಿಸಿದ ಅಪಾಯ ಮುನ್ಸುಚನಾ ವರದಿಯಲ್ಲಿ ಈ ಮಾಹಿತಿ ಹೊರಬಂದಿದೆ. ‘ಕಿಬರ್‌ಫ್ಯಾಂಟಮ್‌’ ಎಂಬ ಹೆಸರಿನ ಹ್ಯಾಕರ್‌ ಈ ಕೆಲಸ ಮಾಡಿದ್ದಾನೆ ಎಂದು ಅದು ಹೇಳಿದೆ.

ಹ್ಯಾಕ್‌ ಮಾಡಿದ ಬಳಿಕ ಸಿಮ್‌ ಕ್ಲೋನಿಂಗ್‌, ಐಎಂಎಸ್‌ಐ ಸಂಖ್ಯೆ, ಮೊಬೈಲ್‌ ಲೊಕೇಷನ್‌, ಡಿಪಿ ಕಾರ್ಡ್‌ ಡೇಟಾ, ಬ್ಯಾಂಕ್ ಮಾಹಿತಿಗಳನ್ನು ಸೇರದಂತೆ ಒಟ್ಟು 278 ಜಿಬಿ ದತ್ತಾಂಶವನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ವರದಿ ಹೇಳಿದೆ.

4 ಲಕ್ಷ ರು.ಗೆ ಮಾರಾಟ:

ಕೋಟ್ಯಂತರ ಜನರ ಸೂಕ್ಷ್ಮ ಮಾಹಿತಿಗಳನ್ನು ಕದ್ದಿರುವ ‘ಕಿಬರ್‌ಫ್ಯಾಂಟಮ್‌’ ಅದನ್ನು ಮೇ 30-31ರವರೆಗೆ ವಿಶೇಷ ಆಫರ್‌ ಅಡಿಯಲ್ಲಿ 4,17,000 ರು.ಗೆ (5000 ಡಾಲರ್‌) ಮಾರಾಟ ಮಾಡಿದ್ದಾನೆ ಎಂದು ವರದಿಯಲ್ಲಿ ಹೇಳಿದೆ.

===

ಇದರಿಂದಾಗುವ ಆಪತ್ತು:

1.ಸಿಮ್‌ ಕ್ಲೋನಿಂಗ್‌:

ಸಿಮ್‌ ಕ್ಲೋನಿಂಗ್‌ ಹಾಗೂ ಗುರುತಿನ ಮಾಹಿತಿ ಸೋರಿಕೆಯಾಗಲಿದೆ. ಸಿಮ್‌ ನಕಲಿ ಮಾಡುವ ಮೂಲಕ ಕರೆ, ಓಟಿಪಿ, ಸಂದೇಶಗಳು, ಬ್ಯಾಂಕ್‌ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.

2. ಖಾಸಗಿ ಮಾಹಿತಿ ಸೋರಿಕೆ:

ಹ್ಯಾಕಿಂಗ್‌ನಿಂದಾಗಿ ಖಾಸಗಿ ಮಾಹಿತಿ ಸೋರಿಕೆಯಾಗಲಿದ್ದು, ಇದು ವಸತಿ, ಖಾಸಗಿ ಬಳಗ ಸೇರಿದಂತೆ ಇತರೆ ಮಾಹಿತಿ ಸುಲಭವಾಗಿ ಲಭಿಸಲಿದೆ.

3. ಹಣಕಾಸು ನಷ್ಟ:

ಬ್ಯಾಂಕ್‌ ಖಾತೆಗಳು ಸುಲಭವಾಗಿ ಓಟಿಪಿ ಸಹಾಯದಿಂದ ಲಭಿಸುವುದರಿಂದ, ಆರ್ಥಿಕ ನಷ್ಟವಾಗುವ ಸಾಧ್ಯತೆ ಹೆಚ್ಚಿದೆ.

4. ವೈಯಕ್ತಿಕ ದಾಳಿ:

ವೈಯಕ್ತಿಕ ದಾಳಿ/ಆಕ್ರಮಣ: ಸಿಮ್ ಕಾರ್ಡ್‌ ಹ್ಯಾಕ್ ಆಗುವುದರಿಂದ ಬಳಕೆದಾರರನ ಸಂಪೂರ್ಣ ವಿಳಾಸವನ್ನು ಪತ್ತೆ ಹಚ್ಚಬಹುದಾಗಿದೆ. ಜೊತೆಗೆ ವ್ಯವಸ್ಥಿತ ದಾಳಿಯನ್ನು ಮಾಡಲು ಸುಲಭವಾಗುತ್ತದೆ.

ಎರಡೇ ದಿನಕ್ಕೆ ಮುಗಿದ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ: ₹11340 ಕೋಟಿ ಸಂಗ್ರಹನವದೆಹಲಿ: ದೂರಸಂಪರ್ಕ ಸೇವೆಗಳಿಗೆ ಅಗತ್ಯವಾದ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ 2ನೇ ದಿನವಾದ ಬುಧವಾರಕ್ಕೆ ಮುಕ್ತಾಯವಾಗಿದೆ. 2 ದಿನಗಳ ಅವಧಿಯಲ್ಲಿ 141.4 ಮೆಗಾಹರ್ಟ್ಜ್‌ನ ರೇಡಿಯೋ ತರಂಗಾಂತರಗಳು ಒಟ್ಟು 11340 ಕೋಟಿ ರು.ಗೆ ಮಾರಾಟವಾಗಿದೆ.

ಈ ಪೈಕಿ ಶೇ.60ರಷ್ಟು ಸ್ಪೆಕ್ಟ್ರಂ ಅನ್ನು ಏರ್‌ಟೆಲ್‌ ಹೆಸರಿನಲ್ಲಿ ಟೆಲಿಕಾಂ ಸೇವೆ ನೀಡುವ ಭಾರ್ತಿ ಏರ್‌ಟೆಲ್‌ ಖರೀದಿಸಿದೆ. ಮಂಗಳವಾರ ಈ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಭಾರ್ತಿ ಏರ್‌ಟೆಲ್‌ 6856, ವೊಡಾಫೋನ್‌ ಐಡಿಯಯಾ 3510 ಕೋಟಿ ರು. ಮ ತ್ತು ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ 974 ಮೊತ್ತದ ಸ್ಪೆಕ್ಟ್ರಂ ಖರೀದಿ ಮಾಡಿದವು. 

ಕೇಂದ್ರ ಸರ್ಕಾರ 800 ಮೆಗಾಹರ್ಟ್ಜ್‌ನಿಂದ 26 ಗಿಗಾಹರ್ಟ್ಜ್‌ನ ಸ್ಪೆಕ್ಟ್ರಂ ಹರಾಜಿಗೆ ಇಟ್ಟಿತ್ತು. ಇವುಗಳಿಗೆ 96238 ಕೋಟಿ ರು. ಮೂಲ ಬೆಲೆ ನಿಗದಿ ಮಾಡಿತ್ತು. ಆದರೆ ಈ ಪೈಕಿ ಅಲ್ಪ ಪ್ರಮಾಣದ ಸ್ಪೆಕ್ಟ್ರಂ ಮಾತ್ರವೇ ಹರಾಜಾಗಿದೆ. ಇದರ ಜೊತೆಗೆ ಅವಧಿ ಮುಗಿದ್ದ ತಮ್ಮ ಸ್ಪೆಕ್ಟ್ರಂ ಮರು ಖರೀದಿಗೆ ಟೆಲಿಕಾಂ ಕಂಪನಿಗಳು ಒಟ್ಟು 6164 ಕೋಟಿ ರು. ವ್ಯಯಿಸಿವೆ.

PREV

Recommended Stories

2026ರ ಫೆ.7 ರಿಂದ ಟಿ20 ವಿಶ್ವಕಪ್‌ ಆರಂಭ ?
ನೇಪಾಳದಲ್ಲಿ ಪೊಲೀಸರಿಂದಲೇ ಹಿಂಸೆ, ರೇ*: ಆರೋಪ