ರಷ್ಯಾದ ಕಟ್ಟಡಗಳ ಮೇಲೆ ಡ್ರೋನ್‌ ಬಳಸಿ ಉಕ್ರೇನ್‌ ಸೇನಾ ಪಡೆ 9/11 ರೀತಿ ಭೀಕರ ದಾಳಿ

KannadaprabhaNewsNetwork | Updated : Dec 22 2024, 04:33 AM IST

ಸಾರಾಂಶ

ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆ ಕಟ್ಟಡದ ಮೇಲೆ ಅಲ್‌ಖೈದಾ ಉಗ್ರರು ವಿಮಾನ ಬಳಸಿ ನಡೆಸಿದ ದಾಳಿಯ ಮಾದರಿಯಲ್ಲೇ ರಷ್ಯಾದ ಕಟ್ಟಡಗಳ ಮೇಲೆ ಡ್ರೋನ್‌ ಬಳಸಿ ಉಕ್ರೇನ್‌ ಸೇನಾ ಪಡೆ ಭೀಕರ ದಾಳಿ ನಡೆಸಿದೆ.

ಮಾಸ್ಕೋ: ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆ ಕಟ್ಟಡದ ಮೇಲೆ ಅಲ್‌ಖೈದಾ ಉಗ್ರರು ವಿಮಾನ ಬಳಸಿ ನಡೆಸಿದ ದಾಳಿಯ ಮಾದರಿಯಲ್ಲೇ ರಷ್ಯಾದ ಕಟ್ಟಡಗಳ ಮೇಲೆ ಡ್ರೋನ್‌ ಬಳಸಿ ಉಕ್ರೇನ್‌ ಸೇನಾ ಪಡೆ ಭೀಕರ ದಾಳಿ ನಡೆಸಿದೆ.

ಕಜಾನ್‌ ನಗರದಲ್ಲಿನ 6 ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಉಕ್ರೇನಿ ಸೇನಾಪಡೆಗಳು ಒಟ್ಟು 8 ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ. ಈ ಕುರಿತ ವಿಡಿಯೋಗಳು ವೈರಲ್‌ ಆಗಿವೆ. ವೈರಲ್‌ ಆಗಿರುವ ವಿಡಿಯೋಗಳಲ್ಲಿ ಡ್ರೋನ್‌ಗಳು ಕಟ್ಟಡದ ಮೇಲೆ ಅಪ್ಪಳಿಸಿದ ಭಾರೀ ಪ್ರಮಾಣದ ಬೆಂಕಿ ಎದ್ದ ಮತ್ತು ಬಳಿಕ ಹೊಗೆ ಆವರಿಸಿಕೊಂಡ ದೃಶ್ಯಗಳಿವೆ. ದಾಳಿಯ ನಂತರ ಕಜಾನ್ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳ ಸಲಾಯಿತು. ಇಝೆವ್ಸ್ಕ್‌ ವಿಮಾನ ನಿಲ್ದಾಣದಲ್ಲಿಯೂ ನಿರ್ಬಂಧಗಳನ್ನು ಹೇರಲಾಗಿದೆ.

ಉಕ್ರೇನ್ ಮೇಲೆ ರಷ್ಯಾದಿಂದ ಶುಕ್ರವಾರ ಡ್ರೋನ್ ದಾಳಿ:

ಶುಕ್ರವಾರ ರಾತ್ರಿ ಕೈವ್ ಮತ್ತು ಉಕ್ರೇನ್‌ನ ಇತರ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿತ್ತು. ಉಕ್ರೇನ್ ನಗರಗಳ ಮೇಲೆ 60 ಡ್ರೋನ್‌ಗಳು ಮತ್ತು 5 ಬ್ಯಾಲಿಸ್ಟಿಕ್ ಕ್ಷಿಪಣಿಗಳು ದಾಳಿ ನಡೆಸಿದ್ದವು. ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಅನೇಕರು ಗಾಯಗೊಂಡಿದ್ದರು.

ಕ್ರೆಡಿಟ್‌ ಕಾರ್ಡ್‌: ಶೇ.30 ಬಡ್ಡಿ ಮಿತಿ ರದ್ದುಪಡಿಸಿದ ಸುಪ್ರೀಂ ವಿಳಂಬ ಪಾವತಿಗೆ ನಿಗದಿಪಡಿಸಿದ್ದ ಮಿತಿ

ನವದೆಹಲಿ: ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ತಡವಾದಾಗ ವಿಧಿಸುತ್ತಿದ್ದ ವಾರ್ಷಿಕ ಶೇ.30ರಷ್ಟು ಬಡ್ಡಿಯ ಗರಿಷ್ಠ ಮಿತಿಯನ್ನು ಸುಪ್ರೀಂಕೋರ್ಟ್‌ ತೆಗೆದು ಹಾಕಿದೆ. ಈ ಮೂಲಕ ಬ್ಯಾಂಕುಗಳಿಗೆ, ನಿಗದಿತ ಸಮಯ ಮೀರಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸುವುದರ ಮೇಲೆ ಹೇರಲಾಗುವ ಬಡ್ಡಿ ದರವನ್ನು ನಿರ್ಧರಿಸುವ ಹಾಗೂ ನಿಗದಿಸುವ ಸ್ವಾತಂತ್ರ್ಯ ದೊರಕಿದೆ.

ಸಾಲ ನೀಡುವ ಬ್ಯಾಂಕುಗಳು ತಡವಾಗಿ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಮಾಡುವ ಗ್ರಾಹಕರಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿ ಪಡಿಸುವ ಅಧಿಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)ಕ್ಕೆ ಇದೆಯೇ ಎಂದು ಪ್ರಶ್ನಿಸಿ ಹಲವು ಬ್ಯಾಂಕ್‌ಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಇದರ ವಿಚಾರಣೆ ನಡೆಸಿದ ನ್ಯಾ। ಬೇಲಾ ತ್ರಿವೇದಿ ಹಾಗೂ ಸತೀಶ್‌ ಚಂದ್ರ ಶರ್ಮಾ ಅವರ ಪೀಠ ಬಡ್ಡಿ ದರ ನಿಗದಿಪಡಿಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡುವ ಮೂಲಕ 16 ವರ್ಷದ ಪ್ರಕರಣಕ್ಕೆ ತೆರೆ ಎಳೆದಿದೆ.

ನಿಗದಿತ ಸಮಯದೊಳಗೆ ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿಸದ ಅಥವಾ ಮೊತ್ತಕ್ಕಿಂದ ಕಡಿಮೆ ಪಾವತಿಸುವವರ ಮೇಲೆ ವಾರ್ಷಿಕ ಗರಿಷ್ಠ ಶೇ.30ರಷ್ಟು ಬಡ್ಡಿ ಹಾಕಬೇಕು ಎಂದು 2008ರಲ್ಲಿ ಎನ್‌ಸಿಡಿಆರ್‌ಸಿ ನಿರ್ಧರಿಸಿತ್ತು. ಇದನ್ನು ಬ್ಯಾಂಕುಗಳು ವಿರೋಧಿಸಿದ್ದವು.

ಸಾರವರ್ಧಿತ ಅಕ್ಕಿ, ದ್ರಾಕ್ಷಿ, ಕಾಳು ಮೆಣಸು, ಜೀನ್‌ ಥೆರಪಿಗಿಲ್ಲ ಜಿಎಸ್ಟಿ

ನವದೆಹಲಿ: ಜೀನ್‌ ಥೆರಪಿ ಚಿಕಿತ್ಸೆ, ರೈತರೇ ನೇರವಾಗಿ ಮಾರಾಟ ಮಾಡುವ ದ್ರಾಕ್ಷಿ, ಕಾಳುಮೆಣಸಿಗೆ ಜಿಎಸ್ಟಿ ವಿನಾಯ್ತಿ ನೀಡಲು ಕೇಂದ್ರೀಯ ಜಿಎಸ್ಟಿ ಮಂಡಳಿ ನಿರ್ಧರಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.ಸಾರವರ್ಧಿತ ಅಕ್ಕಿನ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲು, ಬ್ಯಾಂಕ್‌ಗಳು ಸಾಲಕ್ಕೆ ವಿಧಿಸುವ ದಂಡವನ್ನು ಸಂಗ್ರಹಿಸಿದಾಗ ಅದಕ್ಕೆ ಯಾವುದೇ ಜಿಎಸ್ಟಿ ಹೇರದೇ ಇರಲು ಮಂಡಳಿ ನಿರ್ಧರಿಸಿದೆ. ಜೊತೆಗೆ ಶೇ.50ರಷ್ಟು ಹಾರುಬೂದಿ ಬಳಸಿ ತಯಾರಿಸಿದ ಎಸಿಸಿ ಬ್ಲ್ಯಾಕ್‌ಗಳಿಗೆ ವಿಧಿಸುವ ಜಿಎಸ್ಟಿ ಶೇ.12ಕ್ಕೆ ಇಳಿಸಲು, 2000 ರು.ಗಿಂತ ಕಡಿಮೆ ಮೊತ್ತದ ವಹಿವಾಟಿಗೆ ಪೇಮೆಂಟ್‌ ಅಗ್ರಿಗೇಟರ್‌ಗಳಿಗೆ, ಕೌಶಲ್ಯ ತರಬೇತಿ ಪಾಲುದಾರರಿಗೆ ಜಿಎಸ್ಟಿಯಿಂದ ವಿನಾಯ್ತಿ ಪ್ರಕಟಿಸಲಾಗಿದೆ.

ಇನ್ನು ಬಳಸಿದ ಎಲೆಕ್ಟ್ರಿಕ್‌ ವಾಹನಗಳನ್ನು ಯಾವುದೇ ಕಂಪನಿಗಳು ಮಾರಾಟ ಮಾಡಿದಲ್ಲಿ ಅದರ ಲಾಭದ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಲಾಗಿದೆ. ಆದರೆ ಜೀವ ವಿಮಾ ಪ್ರೀಮಿಯಂ ಮೇಲೆ ವಿಧಿಸುವ ತೆರಿಗೆ ರದ್ದುಪಡಿಸುವ ಕುರಿತು ಶನಿವಾರದ ಸಭೆಯಲ್ಲೂ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಜಿಎಸ್ಟಿ ಮಂಡಳಿ ವಿಫಲವಾಗಿದೆ.

Share this article