ಎಸ್ಸಿ ಮೀಸಲಿನಲ್ಲಿ ಕೆನೆಪದರ ಇಲ್ಲ: ಅಂಬೇಡ್ಕರ್ ನೀತಿಯನ್ನು ಪಾಲಿಸಲು ನಾವು ಬದ್ಧ - ಕೇಂದ್ರ ಪುನರುಚ್ಚಾರ

KannadaprabhaNewsNetwork |  
Published : Aug 12, 2024, 01:09 AM ISTUpdated : Aug 12, 2024, 05:12 AM IST
Amit sha india parliament

ಸಾರಾಂಶ

‘ಡಾ.ಬಿ.ಆರ್‌.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಿನಲ್ಲಿ ಕೆನೆಪದರಕ್ಕೆ ಅವಕಾಶವೇ ಇಲ್ಲ. ಈ ನೀತಿಯನ್ನು ಪಾಲಿಸಲು ನಾವು ಬದ್ಧ’ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ

 ನವದೆಹಲಿ :  ‘ಡಾ.ಬಿ.ಆರ್‌.ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಿನಲ್ಲಿ ಕೆನೆಪದರಕ್ಕೆ ಅವಕಾಶವೇ ಇಲ್ಲ. ಈ ನೀತಿಯನ್ನು ಪಾಲಿಸಲು ನಾವು ಬದ್ಧ’ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಇದೇ ವೇಳೆ, ‘ಕೆನೆಪದರ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟ ವಿಷಯದಲ್ಲಿ ವಿಪಕ್ಷಗಳು ಜನರಲ್ಲಿ ಅನಗತ್ಯ ಗೊಂದಲ ಮೂಡಿಸುತ್ತಿವೆ’ ಎಂದು ಆರೋಪಿಸಿದೆ.

ಭಾನುವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಕೇಂದ್ರ ಕಾನೂನು ಖಾತೆ ಸಚಿವ ಅರ್ಜುನ್‌ ಮೇಘ್ವಾಲ್‌, ‘ಅಂಬೇಡ್ಕರ್‌ ರಚಿಸಿರುವ ಸಂವಿಧಾನವನ್ನು ಪಾಲಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅವರು ನೀಡಿರುವ ಸಂವಿಧಾನದಲ್ಲಿ ಎಸ್‌ಸಿ, ಎಸ್ಟಿ ಮೀಸಲಿನಲ್ಲಿ ಕೆನೆಪದರ (ಆರ್ಥಿಕವಾಗಿ ಮುಂದುವರೆದವರು) ನೀಡುವ ಅವಕಾಶ ಇಲ್ಲ. ಇತ್ತೀಚೆಗೆ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ಕೆನೆಪದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆಯೇ ಹೊರತೂ, ಕೆನೆಪದರ ಜಾರಿ ಮಾಡಿ ಎಂದು ಹೇಳಿಲ್ಲ. ಅಭಿಪ್ರಾಯಕ್ಕೂ ಮತ್ತು ತೀರ್ಪಿಗೂ ವ್ಯತ್ಯಾಸವಿದೆ. ಆದರೂ ವಿಪಕ್ಷ ನಾಯಕರು ಈ ವಿಷಯದ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಕೆನೆಪದರ ಕುರಿತ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕೆನೆಪದರದ ಹೆಸರಿನಲ್ಲಿ ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಮೀಸಲು ನಿರಾಕರಿಸುವುದು ಖಂಡನಾರ್ಹ. ಸುಪ್ರೀಂಕೋರ್ಟ್‌ ಈ ತೀರ್ಪು ಅನರ್ಹಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ಮಸೂದೆ ಅಂಗೀಕರಿಸಬೇಕಿತ್ತು’ ಎಂದು ಆಗ್ರಹಿಸಿದ್ದರು.ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮೇಘವಾಲ್‌, ‘ರಾಜ್ಯಗಳು ಬೇಕಿದ್ದರೆ ಮೀಸಲಿನ ಒಳಗೆ ಒಳ ಮೀಸಲು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ. ಆದರೆ ಈ ವಿಷಯದಲ್ಲಿ ಅದು ಯಾವುದೇ ತೀರ್ಪನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಕೂಡಾ ಕೆನೆಪದರದ ಕುರಿತು ತನ್ನ ಇದೇ ನಿಲುವನ್ನು ಸ್ಪಷ್ಪಪಡಿಸಿತ್ತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ