ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ

KannadaprabhaNewsNetwork |  
Published : Nov 14, 2025, 04:30 AM ISTUpdated : Nov 14, 2025, 04:54 AM IST
CM Siddaramaiah

ಸಾರಾಂಶ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮನಾಂತರ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಗುರುವಾರ ವಜಾಗೊಳಿಸಿದೆ.

  ನವದೆಹಲಿ :  ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮನಾಂತರ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ತಡೆ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಗುರುವಾರ ವಜಾಗೊಳಿಸಿದೆ. ಯೋಜನೆ ಇನ್ನೂ ತಜ್ಞರ ಪರಿಶೀಲನಾ ಹಂತದಲ್ಲಿ ಇದ್ದು, ಈಗಲೇ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದು ‘ಅಕಾಲಿಕ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 ಹೀಗಾಗಿ, ಯೋಜನೆಗೆ ಕಳೆದ 7 ವರ್ಷಗಳಿಂದ ಅಡ್ಡಗಾಲು ಹಾಕುತ್ತಾ ಬರುತ್ತಿದ್ದ ತಮಿಳುನಾಡಿಗೆ ಮುಖಭಂಗವಾಗಿದ್ದು, ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಜಯ ಸಿಕ್ಕಂತಾಗಿದೆ.ಬೆಂಗಳೂರು ಮತ್ತು ನೆರೆಯ ಪ್ರದೇಶಗಳಿಗೆ 4.75 ಟಿಎಂಸಿ ಕುಡಿಯುವ ನೀರು ಒದಗಿಸಲು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಲುವಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ಒಂಟಿ ಕುಡ್ಲು ಅರಣ್ಯ ಪ್ರದೇಶದಲ್ಲಿ ಡ್ಯಾಂ ನಿರ್ಮಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. 

ಯೋಜನೆ ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾ.ಕೆ.ವಿನೋದ್ ಚಂದ್ರನ್ ಮತ್ತು ನ್ಯಾ. ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿತು.

ನ್ಯಾಯಪೀಠ ಹೇಳಿದ್ದೇನು?: 

ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಸದ್ಯಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಮಾತ್ರ ಸೂಚಿಸಿದೆ. ಈ ವರದಿಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮತ್ತು ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ)ಗಳು ಅನುಮೋದನೆ ನೀಡುವುದು ಕಡ್ಡಾಯ. ಈ ಸಂಸ್ಥೆಗಳು ತಮಿಳುನಾಡಿನ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಿವೆ. ಹೀಗಾಗಿ, ತಮಿಳುನಾಡು ಈಗ ಸಲ್ಲಿಸಿರುವ ಆಕ್ಷೇಪಣಾ ಅರ್ಜಿ ಅಕಾಲಿಕ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.ಅಲ್ಲದೆ, ನೀರಿನ ಹಂಚಿಕೆಯಂತಹ ತಾಂತ್ರಿಕ ವಿಷಯಗಳಲ್ಲಿ ನ್ಯಾಯಾಲಯಕ್ಕೆ ಪರಿಣತಿ ಇಲ್ಲ. 

ಈ ಹಿಂದೆ, ಆಗಸ್ಟ್ 25, 2023 ರಂದು ನಮ್ಮ ಆದೇಶದಲ್ಲಿ ಗಮನಿಸಿದ್ದನ್ನು ನಾವು ಪುನರುಚ್ಚರಿಸುತ್ತೇವೆ. ತಜ್ಞರ ಸಮಿತಿಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ತಜ್ಞರ ಸಂಸ್ಥೆಗಳು ಈ ವಿಷಯವನ್ನು ಪರಿಶೀಲಿಸುತ್ತಿರುವಾಗ ನ್ಯಾಯಾಲಯದ ಪ್ರವೇಶ ಅನಗತ್ಯ. ಈ ವಿಚಾರವನ್ನು ಸಿಡಬ್ಲ್ಯುಸಿ ತೀರ್ಮಾನ ಮಾಡಲಿ. ಅಲ್ಲಿ ಅರ್ಜಿ ಸಲ್ಲಿಸಿ ಎಂದು ನ್ಯಾಯಪೀಠ ಹೇಳಿದೆ.ಜೊತೆಗೆ, ನ್ಯಾಯಾಲಯದ ಆದೇಶ ಮತ್ತು ಪ್ರಾಧಿಕಾರಗಳ ನಿರ್ದೇಶನದಂತೆ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಹರಿಸುವುದನ್ನು ಕರ್ನಾಟಕ ಮುಂದುವರಿಸಬೇಕು. ಒಂದು ವೇಳೆ, ಆದೇಶ ಪಾಲನೆಯಲ್ಲಿ ವಿಫಲವಾದರೆ, ನ್ಯಾಯಾಂಗ ನಿಂದನೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.

ತಮಿಳುನಾಡಿನ ವಾದವೇನು?: 

ಇದಕ್ಕೂ ಮೊದಲು, ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಕಾವೇರಿ ಅವಲಂಬಿತ ರೈತರಿಗೆ ಅನ್ಯಾಯವಾಗಲಿದೆ. ಬಿಳಿಗುಂಡ್ಲು ಮಾಪನ ಕೇಂದ್ರಕ್ಕಿಂತ ಎತ್ತರದ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ಕೆಳಹರಿವಿನ ರಾಜ್ಯಕ್ಕೆ ನೀರಿನ ಹರಿವಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದ ವಾದವೇನು?: 

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್, ತಮಿಳುನಾಡಿನ ಅರ್ಜಿ ತಪ್ಪುಕಲ್ಪನೆಯಿಂದ ಕೂಡಿದೆ. ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ವಾರ್ಷಿಕ 177.25 ಟಿಎಂಸಿ ನೀರು ಹರಿಸಲು ಕರ್ನಾಟಕ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಪೂರೈಸುತ್ತಲೇ, ಅಗತ್ಯ ಅನುಮತಿಗಳನ್ನು ಪಡೆದು ಜಲಾಶಯ ನಿರ್ಮಿಸಲು ನಮಗೆ ಹಕ್ಕಿದೆ ಎಂದು ಪ್ರತಿಪಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕದ ವಾದ ಪುರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿತು.

ಮುಂದೇನು?: 

ಒಂದು ವೇಳೆ, ತಜ್ಞರ ಸಮಿತಿಗಳು ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಅಂತಿಮ ಅನುಮೋದನೆ ನೀಡಿದರೆ, ಅದನ್ನು ಕಾನೂನು ಪ್ರಕಾರಪ್ರಶ್ನಿಸಲು ತಮಿಳುನಾಡಿಗೆ ಸಂಪೂರ್ಣ ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಾಗಿ, ಮೇಕೆದಾಟು ಯೋಜನೆಯ ಭವಿಷ್ಯವುಇದೀಗ ಸಂಪೂರ್ಣವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯ ತೀರ್ಮಾನವನ್ನು ಅವಲಂಬಿಸಿದೆ.

ಯೋಜನೆಗೆ ಸಿದ್ಧತೆ ಮಾಡಿಕೊಳ್ಳಿ: 

ಸಿಎಂಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ದೊರೆತಿರುವ ಕಾನೂನಾತ್ಮಕ ವಿಜಯದ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಅಡಚಣೆ ನಿವಾರಣೆ ಆಗಿರುವುದರಿಂದ ಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಸುಪ್ರೀಂ ತೀರ್ಪಿನಿಂದಇಡೀ ರಾಜ್ಯಕ್ಕೆ ಸಂತಸ

ಮೇಕೆದಾಟು ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಇಡೀ ರಾಜ್ಯಕ್ಕೆ ಸಂತೋಷದಾಯಕ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಉಪಯೋಗ. ನೀರಿನ ಕೊರತೆ ಉಂಟಾದರೂ ಆ ರಾಜ್ಯಕ್ಕೆ ನೀರು ಕೊಡಲು ಅಣೆಕಟ್ಟು ನೆರವಾಗಲಿದೆ.ಡಿ.ಕೆ.ಶಿವಕುಮಾರ್‌, ಡಿಸಿಎಂ

PREV
Read more Articles on

Recommended Stories

ಜೈಷ್‌ ವೈದ್ಯರ ಉಗ್ರಜಾಲ ಬಯಲಿಗೆಳೆದಿದ್ದು ಎಸ್‌ಎಸ್‌ಪಿ ಚಕ್ರವರ್ತಿ
ಸ್ಫೋಟದ ತೀವ್ರತೆಗೆ ದೇಹ ಗೋಡೆಗೆ ಅಪ್ಪಳಿಸಿ ಶ್ವಾಸಕೋಶವೇ ಛಿದ್ರ