-ಮಂಜುನಾಥ ನಾಗಲೀಕರ್
ಬೆಂಗಳೂರು : ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಇತ್ತೀಚೆಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಭಾರೀ ಕಳವಳಕ್ಕೆ ಕಾರಣವಾದ ಹೊತ್ತಿನಲ್ಲೇ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಬಂದರೂ ನೋಂದಣಿ ಮಾಡಿಕೊಳ್ಳದಿರುವ ಹಾಗೂ ಯುಪಿಐ ಮೂಲಕ ವಾರ್ಷಿಕ 40 ಲಕ್ಷ ರು. ಮತ್ತು ಅದಕ್ಕೂ ಮೇಲ್ಪಟ್ಟು ‘ಹಣ ಸ್ವೀಕಾರ’ ಮಾಡಿರುವ ಬರೊಬ್ಬರಿ 14,000 ವ್ಯಾಪಾರಿಗಳು ಪತ್ತೆಯಾಗಿದ್ದಾರೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಈ ಪೈಕಿ 5,500 ಜನರಿಗೆ ಮೊದಲ ಹಂತದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಈ ಪೈಕಿ ಶೇ.80ರಷ್ಟು ವ್ಯಾಪಾರಿಗಳು ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿದ್ದಾರೆ. ಇದರ ಜೊತೆಗೆ 2 ಕೋಟಿ ರು.ಗೂ ಹೆಚ್ಚು ಹಣ ಸ್ವೀಕರಿಸಿರುವ 150 ಜನ ಹಾಗೂ 80 ಲಕ್ಷ ರು. ಮೇಲ್ಪಟ್ಟು ಹಣ ಸ್ವೀಕರಿಸಿರುವ ಸುಮಾರು 900 ವ್ಯಾಪಾರಿಗಳಿದ್ದಾರೆ ಎಂಬ ವಿಷಯವೂ ಬೆಳಕಿಗೆ ಬಂದಿದೆ.
ಯಾರಿಗೆ ನೋಟಿಸ್?:
2021-22, 2022-23, 2023-24 ಮತ್ತು 2024-25ನೇ ಸಾಲಿನಲ್ಲಿ ಯಾವುದಾದರೂ ಒಂದು ಅಥವಾ ಅದಕ್ಕೂ ಹೆಚ್ಚು ಆರ್ಥಿಕ ವರ್ಷಗಳಲ್ಲಿ ಒಂದು ಪಾನ್ ಸಂಖ್ಯೆಯಲ್ಲಿ ಸ್ವೀಕೃತಿ ಮೊತ್ತ 40 ಲಕ್ಷ ರು. ದಾಟಿದ್ದರೆ, ಅಂಥವರಿಗೆ ವ್ಯಾಪಾರದ ಸ್ವರೂಪ, ಸ್ವೀಕೃತಿ ಮತ್ತು ಪಾವತಿ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಹೆದರಿಕೆ ಬೇಡ:
ನೋಟಿಸ್‌ಗೆ ವ್ಯಾಪಾರಿಗಳು ಹೆದರಬೇಕಿಲ್ಲ. ಪ್ರತಿಯೊಂದಕ್ಕೂ ಪರಿಹಾರವಿದೆ. ನೋಟಿಸ್ ಬಂದಿರುವ ಕಚೇರಿಗೆ ಭೇಟಿ ನೀಡಿ ವಿವರಣೆ ನೀಡಿದರೆ ಸಾಕು. ಅದಕ್ಕೆ ಕಾಲಾವಕಾಶ ಇದೆ. ಜಿಎಸ್ಟಿ ವ್ಯಾಪ್ತಿಗೆ ಬರುವ ಸರಕು, ಸೇವೆಗಳು ಮತ್ತು ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ಇರುವ ಸರಕು ಸೇವೆಗಳು ಇರುತ್ತವೆ. ಆ ಕುರಿತು ವಿವರಣೆ ನೀಡಿದಾಗ ವ್ಯಾಪಾರಿಗಳು ಕಟ್ಟಬೇಕಾದ ತೆರಿಗೆ ಪ್ರಮಾಣ ಅತ್ಯಂತ ಕಡಿಮೆಯಾಗುತ್ತದೆ. ಇನ್ನು ಸಣ್ಣ ವ್ಯಾಪಾರಿಗಳಿಗಾಗಿ ಕಂಪೋಸಿಷನ್ ಟ್ಯಾಕ್ಸ್ ಸ್ಕೀಮ್ ಇದೆ. ಅದರಡಿ ನಿಗದಿತ ತೆರಿಗೆ ಪಾವತಿಸಿದರೆ ಆರ್ಥಿಕವಾಗಿ ಶಿಸ್ತುಬದ್ಧ ವ್ಯಾಪಾರ ಮಾಡಬಹುದು ಎಂದು ವಿವರಿಸಿದರು.
ವಹಿವಾಟು ಮೊತ್ತ ಇನ್ನೂ ಹೆಚ್ಚುತ್ತದೆ:
ನೋಟಿಸ್ ಕೊಟ್ಟಿರುವುದು ಹಣ ಸ್ವೀಕೃತಿಗೆ ಮಾತ್ರ. ಒಟ್ಟಾರೆ ವಹಿವಾಟಿಗಲ್ಲ. ವ್ಯಾಪಾರಿಗಳು ಯುಪಿಐ ಮೂಲಕ ಸ್ವೀಕರಿಸಿದ ಹಣವನ್ನು ಮಾತ್ರ ಜಿಎಸ್ಟಿ ನೋಟಿಸ್‌ಗೆ ಪರಿಗಣಿಸಲಾಗಿದೆ. ನಗದು ಪರಿಗಣಿಸಿದರೆ ಮೊತ್ತ ಇನ್ನೂ ಹೆಚ್ಚಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಯುಪಿಐ, ನಗದು ಅನುಪಾತ ಕ್ರಮವಾಗಿ 70:30ರಷ್ಟು ಎಂಬ ಲೆಕ್ಕಾಚಾರವಿದೆ.
20 ಲಕ್ಷ ರು. ಮೇಲ್ಪಟ್ಟು ವ್ಯಾಪಾರ
ಮಾಡಿದ 50000 ವ್ಯಾಪಾರಿಗಳು
ಸೇವೆಗೆ ಸಂಬಂಧಿಸಿದ ವ್ಯಾಪಾರದಲ್ಲಿ ವರ್ಷಕ್ಕೆ 20 ಲಕ್ಷ ರು. ಮತ್ತು ಸರಕು ವ್ಯಾಪಾರದಲ್ಲಿ 40 ಲಕ್ಷ ರು. ಮೇಲ್ಪಟ್ಟು ಹಣ ಸ್ವೀಕರಿಸಿದರೆ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು. ಇಂತಹ 50 ಸಾವಿರ ವ್ಯಾಪಾರಿಗಳನ್ನು ಗುರುತಿಸಲಾಗಿದೆ.
ಆದರೆ, ಎಲ್ಲರಿಗೂ ನೋಟಿಸ್ ನೀಡಿಲ್ಲ. ಜಿಎಸ್ಟಿ ವಿನಾಯ್ತಿಯ ವ್ಯಾಪಾರ ಮಾಡುವವರಿಗೆ ನೋಟಿಸ್ ನೀಡಿಲ್ಲ. ಜಿಎಸ್ಟಿ ವ್ಯಾಪ್ತಿಯ ವಸ್ತುಗಳ ಮಾರಾಟಗಾರರಿಗೆ ಮಾತ್ರ ನೋಟಿಸ್ ನೀಡಲಾಗುತ್ತದೆ. ಬರೀ ಯುಪಿಐ ಪೇಮೆಂಟ್ ಮಾತ್ರವಲ್ಲದೆ, ಬೇರೆ ಬೇರೆ ಮೂಲಗಳಿಂದ ವ್ಯಾಪಾರಿಗಳ ವಹಿವಾಟು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ತೆರಿಗೆ ವಂಚನೆ ಸುಲಭವಲ್ಲ- ಇಲಾಖೆ ಎಚ್ಚರಿಕೆ:
ಜಿಎಸ್ಟಿ ವಂಚಿಸುತ್ತಿರುವ ವ್ಯಾಪಾರಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ ಗುರುತಿಸಿವೆ. ಯುಪಿಐ ಪೇಮೆಂಟ್ ಜೊತೆಗೆ, ವೆಂಡರ್‌ಗಳ ಜೊತೆ ನಡೆಸುತ್ತಿರುವ ವಹಿವಾಟು, ಪಾವತಿಗಳು, ವೆಂಡರ್‌ಗಳ ಅಕೌಂಟ್ ಮಾಹಿತಿ ಕಲೆ ಹಾಕುತ್ತೇವೆ. ವ್ಯಾಪಾರಿಗಳು ಯುಪಿಐ ಬದಲು ನಗದು ಸ್ವೀಕರಿಸಿ ತೆರಿಗೆ ಕಟ್ಟುವುದರಿಂದ ಬಚಾವ್ ಆಗುತ್ತೇವೆ ಎನ್ನುವುದು ತಪ್ಪು ಕಲ್ಪನೆ. ತೆರಿಗೆ ವಂಚನೆ ಮಾಡಿಯೇ ತೀರುತ್ತೇವೆ ಎನ್ನುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮಾರ್ಗಗಳಿಗೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಭೀತಿ ಬೇಡ, ಕಚೇರಿಗೆ
ಬಂದು ಮಾಹಿತಿ ನೀಡಿ
ನೋಟಿಸ್ ಬಂದಿರುವ ಕಚೇರಿಗೆ ವ್ಯಾಪಾರಿಗಳು ತೆರಳಿ ವಿವರಣೆ ನೀಡಿದರೆ ಸಾಕು. ಆತಂಕ ಬೇಡ. ಅವರಿಗೆ ಜಿಎಸ್ಟಿ ಸಂಬಂಧಿಸಿದ ನಿಯಮಗಳು ಮತ್ತು ಅದಕ್ಕೆ ಪರಿಹಾರಗಳು ಹಾಗೂ ಆರ್ಥಿಕವಾಗಿ ಶಿಸ್ತುಬದ್ಧ ವ್ಯಾಪಾರ ಮಾಡುವುದನ್ನು ತಿಳಿಸುತ್ತೇವೆ.
ಚಂದ್ರಶೇಖರ್ ನಾಯಕ್, ಹೆಚ್ಚುವರಿ ಆಯುಕ್ತರು, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ