ಶಬರಿಮಲೆ ಬಳಿಕ ಗುರುವಾಯೂರು ದೇಗುಲದ ಸ್ವತ್ತಿನಲ್ಲೂ ಅಕ್ರಮ ಶಂಕೆ

| N/A | Published : Oct 22 2025, 01:03 AM IST / Updated: Oct 22 2025, 03:09 AM IST

ಶಬರಿಮಲೆ ಬಳಿಕ ಗುರುವಾಯೂರು ದೇಗುಲದ ಸ್ವತ್ತಿನಲ್ಲೂ ಅಕ್ರಮ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶಬರಿಮಲೆ ದೇಗುಲದ ಚಿನ್ನ ಲೂಟಿ ಪ್ರಕರಣದ ಬೆನ್ನಲ್ಲೇ ಇದೀಗ ಕೇರಳದ ಮತ್ತೊಂದು ಪ್ರಸಿದ್ಧ ದೇಗುಲವಾದ ಗುರುವಾಯೂರು ದೇವಸ್ಥಾನದಲ್ಲೂ ಇದೇ ರೀತಿಯ ಅಕ್ರಮದ ಶಂಕೆ ಮೂಡಿದೆ. ಹೊಸ ಆಡಿಟ್‌ ವರದಿಯು, ಬೆಲೆಬಾಳುವ ವಸ್ತುಗಳ ನಿರ್ವಹಣೆಯಲ್ಲಿ ಆಗಿರುವ ಭಾರೀ ನಿರ್ಲಕ್ಷ್ಯದ ಕುರಿತು ಬೆಳಕು ಚೆಲ್ಲಿದೆ.

 ತ್ರಿಶೂರು (ಕೇರಳ): ಶಬರಿಮಲೆ ದೇಗುಲದ ಚಿನ್ನ ಲೂಟಿ ಪ್ರಕರಣದ ಬೆನ್ನಲ್ಲೇ ಇದೀಗ ಕೇರಳದ ಮತ್ತೊಂದು ಪ್ರಸಿದ್ಧ ದೇಗುಲವಾದ ಗುರುವಾಯೂರು ದೇವಸ್ಥಾನದಲ್ಲೂ ಇದೇ ರೀತಿಯ ಅಕ್ರಮದ ಶಂಕೆ ಮೂಡಿದೆ. ದೇಗುಲದ ಆಸ್ತಿ ಕುರಿತ ಹೊಸ ಆಡಿಟ್‌ ವರದಿಯು, ಬೆಲೆಬಾಳುವ ವಸ್ತುಗಳ ನಿರ್ವಹಣೆಯಲ್ಲಿ ಆಗಿರುವ ಭಾರೀ ನಿರ್ಲಕ್ಷ್ಯದ ಕುರಿತು ಬೆಳಕು ಚೆಲ್ಲಿದೆ.

2019-20 ಮತ್ತು 2020-21ರ ನಡುವಿನ ಆಡಿಟ್‌ ವರದಿಯಲ್ಲಿ, ‘ದೇವಸ್ಥಾನಕ್ಕೆ ಸೇರಿದ ಬೆಲೆಬಾಳುವ ಚಿನ್ನ, ಬೆಳ್ಳಿ, ದಂತ, ಕೇಸರಿಯಂಥ ಬೆಳೆಬಾಳುವ ವಸ್ತುಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ರಸೀದಿ ಮತ್ತಿತರ ದಾಖಲೆಗಳನ್ನು ನಿಯಮದಂತೆ ನಿರ್ವಹಿಸಿಲ್ಲ’ ಎಂದು ಹೇಳಲಾಗಿದೆ. ‘ಕಳೆದ 4 ದಶಕದಿಂದಲೂ ಇದೇ ರೀತಿ ಆಗುತ್ತಿದೆ’ ಎಂಬ ಮಹತ್ವದ ಅಂಶವನ್ನು ಅದು ಹೇಳಿದೆ.

‘ಗುರುವಾಯೂರು ದೇವಸ್ವಂ ಕಾಯ್ದೆ-1978 ಮತ್ತು ನಿಯಮಗಳು-1980ರ ಪ್ರಕಾರ ಎಲ್ಲಾ ಬೆಲೆಬಾಳುವ ವಸ್ತುಗಳ ವಾರ್ಷಿಕ ಭೌತಿಕ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದ್ದರೂ, 4 ದಶಕಗಳಿಗೂ ಹೆಚ್ಚು ಕಾಲ ಅಂತಹ ಯಾವುದೇ ಪರಿಶೀಲನೆಯನ್ನು ನಡೆಸಲಾಗಿಲ್ಲ’ ಎಂದು ಲೆಕ್ಕಪರಿಶೋಧಕರು ಗಮನಸೆಳೆದಿದ್ದಾರೆ.

ಭೌತಿಕ ಪರಿಶೀಲನೆ ಆಗಿಲ್ಲ:

ದೇಗುಲದ ಖಜಾನೆಯಲ್ಲಿ ಭಾರೀ ಪ್ರಮಾಣದ ಬೆಲೆಬಾಳುವ ವಸ್ತುಗಳಿದ್ದರೂ ಅವುಗಳ ಸಮಗ್ರ ಭೌತಿಕ ಪರಿಶೀಲನೆ ಆಗಿಯೇ ಇಲ್ಲ. ಸುಮಾರು 15 ಲಕ್ಷದಷ್ಟು ಮೌಲ್ಯದ ಸೇವೆ, ದಾನಗಳಿಗೂ ಸರಿಯಾದ ರಶೀದಿಗಳನ್ನು ಇಟ್ಟುಕೊಂಡಿಲ್ಲ ಎಂದು ಆಡಿಟ್‌ ವರದಿ ಹೇಳಿದೆ.

ದೇವಸ್ಥಾನದ ಖಜಾನೆಯಲ್ಲಿರುವ ಆನೆಗಳ ದಂತಗಳ ಲೆಕ್ಕಾಚಾರವನ್ನೂ ಸರಿಯಾಗಿ ನಿರ್ವಹಿಸಿಲ್ಲ. ದೇಗುಲಕ್ಕೆ ಸೇರಿದ ಆನೆಗಳ ದಂತಗಳನ್ನು ತುಂಡರಿಸಲು ತಗುಲಿದ ವೆಚ್ಚದ ಕುರಿತು ದಾಖಲೆಗಳಲ್ಲಿ ಮಾಹಿತಿ ಇದ್ದರೂ ನಂತರ ಆ ದಂತಗಳ ಕತೆ ಏನಾಯ್ತು ಎಂಬ ಬಗ್ಗೆ ಸರಿಯಾದ ದಾಖಲೆಗಳಿಲ್ಲ. ಉದಾಹರಣೆಗೆ ಪಣತ್ತೂರು ಅರಣ್ಯದಿಂದ 530 ಕೇಜಿ ಆನೆದಂತೆ ಸಂಗ್ರಹಿಸಿದ್ದರೂ, ಆ ಆನೆದಂತ ನಾಪತ್ತೆಯಾಗಿದೆ. ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ದಂತ ತುಂಡರಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ಆ ದಂತಗಳನ್ನು ದುರುಪಯೋಗ ಮಾಡಲಾಗಿದೆಯೇ, ಅಕ್ರಮವಾಗಿ ಮಾರಾಟ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿದೆ ಎಂದು ವರದಿ ಹೇಳಿದೆ.

ಇನ್ನು ಪಾಲಕ್ಕಾಡ್‌ನ ಮನೆತನವೊಂದು 15 ಲಕ್ಷ ರು. ಬೆಲೆಬಾಳುವ 2000 ಕೇಜಿ ತೂಕದ ಕಂಚಿನ ಪರಾತ ನೀಡಿತ್ತು. ಅದನ್ನು ಲೆಕ್ಕಪತ್ರದಲ್ಲಿ ದಾಖಲಿಸಿಲ್ಲ.

ಪ್ರತಿ ದಿನ ದೇಗುಲಕ್ಕೆ ಭಾರೀ ಪ್ರಮಾಣದಲ್ಲಿ ಕೇಸರಿ ದಾನ ಮಾಡಲಾಗುತ್ತದೆ. ಈ ಕೇಸರಿ ಬೆಲೆ ಪ್ರತಿ ಕೆ.ಜಿ.ಗೆ 1.47 ಲಕ್ಷದಷ್ಟಿದೆ. ಆದರೆ, ಈ ಕುರಿತು ಸರಿಯಾದ ದಾಖಲೆಗಳೇ ಇಲ್ಲ. ಮತ್ತೊಂದು ಆಘಾತಕಾರಿ ಅಂಶ ಏನೆಂದರೆ ದೇಗುಲಕ್ಕೆ ದಾನವಾಗಿ ನೀಡುವ ಮಂಜಡಿ ಕೂರು ಅಥವಾ ಕೆಂಪುಬೀಜವನ್ನು 17 ಚೀಲಗಳಲ್ಲಿ ದೇಗುಲದ ಪೂರ್ವ ಗೋಪುರದಲ್ಲಿ ಸಂಗ್ರಹಿಸಿಡಲಾಗಿದೆ. ಆದರೆ, 2019 ಡಿಸೆಂಬರ್‌ನಲ್ಲೇ ಆ ಚೀಲಗಳು ನಾಪತ್ತೆಯಾಗಿವೆ.

ಎಸ್‌ಬಿಐ ಗೋಲ್ಡ್‌ ಡಿಪಾಸಿಟ್‌ ಯೋಜನೆಯಡಿ ಬ್ಯಾಂಕ್‌ನಲ್ಲಿಟ್ಟಿರುವ ಚಿನ್ನದ ಠೇವಣಿಯನ್ನು ಸರಿಯಾದ ಸಮಯದಲ್ಲಿ ನವೀಕರಣ ಮಾಡಿಲ್ಲ. ಇದರಿಂದ ದೇಗುಲಕ್ಕೆ 79 ಲಕ್ಷ ರು.ನಷ್ಟು ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗುರುವಾಯೂರು ದೇವಸ್ವಂ ಕಾಯ್ದೆ ಅನ್ವಯ ಎಲ್ಲಾ ಬೆಲೆಬಾಳುವ ವಸ್ತುಗಳ ವಾರ್ಷಿಕ ಭೌತಿಕ ಪರಿಶೀಲನೆಯನ್ನು ಕಡ್ಡಾಯ

ಆದರೆ 4 ದಶಕಗಳಿಗೂ ಹೆಚ್ಚು ಕಾಲ ಅಂತಹ ಪರಿಶೀಲನೆ ನಡೆಸಲಾಗಿಲ್ಲ ಎಂದು ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪ

ಬ್ಯಾಂಕ್‌ನಲ್ಲಿ ಇಟ್ಟಿರುವ ಚಿನ್ನದ ಠೇವಣಿ ಸೂಕ್ತ ಸಮಯಕ್ಕೆ ನವೀಕರಣ ಮಾಡದ್ದರಿಂದಲೂ ದೇಗುಲಕ್ಕೆ ನಷ್ಟದ ಆರೋಪ

Read more Articles on