ಸಾರಾಂಶ
ಮದುವೆಗೆಂದು ಚಿನ್ನಾಭರಣ ಖರೀದಿಸಲು ಕುಟುಂಬದವರೊಂದಿಗೆ ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದ ಯುವಕನೊಬ್ಬ ಪಟ್ಟಣದಲ್ಲಿ ನಾಪತ್ತೆಯಾಗಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಭಟ್ಕಳ
ಮದುವೆಗೆಂದು ಚಿನ್ನಾಭರಣ ಖರೀದಿಸಲು ಕುಟುಂಬದವರೊಂದಿಗೆ ಕುಮಟಾದಿಂದ ಭಟ್ಕಳಕ್ಕೆ ಬಂದಿದ್ದ ಯುವಕನೊಬ್ಬ ಪಟ್ಟಣದಲ್ಲಿ ನಾಪತ್ತೆಯಾಗಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಕಾಣೆಯಾಗಿರುವ ಯುವಕನನ್ನು ಕುಮಟಾ ತಾಲೂಕಿನ ಚಿತ್ರಗಿ ನಿವಾಸಿ ಜಾಕೀರ ಬೇಗ್ (೩೨) ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈತನಿಗೆ ಮದುವೆ ನಿಶ್ಚಯವಾಗಿರುವುದರಿಂದ ಊರಿಗೆ ಬಂದಿದ್ದ. ಅ. ೧೮ರಂದು ಚಿನ್ನಾಭರಣ ಖರೀದಿಗೆಂದು ಭಟ್ಕಳಕ್ಕೆ ಬಂದಿದ್ದ ಎನ್ನಲಾಗಿದೆ. ಭಟ್ಕಳಕ್ಕೆ ಅಣ್ಣನ ಹೆಂಡತಿ ಮತ್ತು ಅಣ್ಣನ ಮಗಳ ಜತೆ ಬಂದಿದ್ದ ಈತ ಬಸ್ ನಿಲ್ದಾಣದ ಪಕ್ಕದಲ್ಲಿರುವ ನೂರ್ ಮಸೀದಿಯಲ್ಲಿ ನಮಾಜ್ ಮಾಡಲು ತೆರಳಿದ್ದ ಎನ್ನಲಾಗಿದೆ. ನಮಾಜ್ ಮುಗಿಸಿ ಹೊರ ಬಂದ ಈತ ಎಲ್ಲಿ ಹೋಗಿದ್ದಾನೆ ಎಂದು ತಿಳಿದಿಲ್ಲ. ಕುಟುಂಬದವರಿಗೂ ತಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಹೇಳದೇ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.ಈ ಕುರಿತು ಆತನ ಸಹೋದರ ಗಫೂರ್ ಬೇಗ್ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಸ್ಟೇರಿಂಗ್ ಲಾಕ್; ಮರಕ್ಕೆ ಬಸ್ ಡಿಕ್ಕಿ:ಖಾಸಗಿ ಬಸ್ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಮುಂಬೈಯಿಂದ ಗೋವಾಗೆ ಹೋಗುತ್ತಿದ್ದ ಖಾಸಗಿ ಬಸ್‌ನ ಸ್ಟೇರಿಂಗ್ ಲಾಕ್ ಆಗಿದ್ದು, ಹಳಿಯಾಳ ಕ್ರಾಸ್ ಬಳಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಚಾಲಕನ ಕಾಲು ಮುರಿದಿದೆ. ಬಸ್‌ನಲ್ಲೇ ಸಿಕ್ಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು, ಪೊಲೀಸರು ಹೊರಕ್ಕೆ ತಂದಿದ್ದಾರೆ.ಬಸ್‌ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಚಾಲಕ ಸೇರಿ ನಾಲ್ವರಿಗೆ ಹೆಚ್ಚಿನ ಪ್ರಮಾಣದ ಗಾಯಗಳಾಗಿವೆ. ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ.ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅಪಘಾತದಲ್ಲಿ ಮಹಿಳೆ ಸಾವು:
ಕಾರವಾರ ನಗರದ ಬಾಂಡಿಸಿಟ್ಟಾ ಬಳಿ ಭಾನುವಾರ ಬಸ್ ಹಾಗೂ ಸ್ಕೂಟಿ ನಡುವೆ ಉಂಟಾದ ಅಪಘಾತದಲ್ಲಿ ಮಹಿಳೆ ಸುಶೀಲಾ ನಾಯ್ಕ (65) ಮೃತಪಟ್ಟಿದ್ದಾರೆ. ಸ್ಕೂಟಿ ಸವಾರ ತೀವ್ರ ಗಾಯಗೊಂಡಿದ್ದಾರೆ.ಕಡವಾಡದತ್ತ ತೆರಳುತ್ತಿದ್ದ ಬಸ್ ಹಾಗೂ ಶೇಜವಾಡದಿಂದ ಕಾರವಾರದತ್ತ ಬರುತ್ತಿದ್ದ ಸ್ಕೂಟಿಗೆ ಬಸ್ ಬಡಿದಿದ್ದರಿಂದ ಸ್ಕೂಟಿಯಲ್ಲಿದ್ದ ಇಬ್ಬರೂ ಉರುಳಿ ಬಿದ್ದರು. ಸ್ಕೂಟಿಯಲ್ಲಿ ಹಿಂದುಗಡೆ ಕುಳಿತಿದ್ದ ಸುಶೀಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಸ್ಕೂಟಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.