ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯ ಐದು ಪಾಲಿಕೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರವು ಎಸ್‌ಜಿಎಸ್‌ಟಿಯ ಶೇ. 5ರಷ್ಟು ಹಾಗೂ ಮುದ್ರಾಂಕ ಶುಲ್ಕದ ಸರ್‌ಚಾರ್ಜ್‌ನ್ನು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡುವಂತೆ 5ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ.

ವಿಧಾನಸಭೆ : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯ ಐದು ಪಾಲಿಕೆಗಳಲ್ಲಿ ಸಮರ್ಪಕ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರವು ಎಸ್‌ಜಿಎಸ್‌ಟಿಯ ಶೇ. 5ರಷ್ಟು ಹಾಗೂ ಮುದ್ರಾಂಕ ಶುಲ್ಕದ ಸರ್‌ಚಾರ್ಜ್‌ನ್ನು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡುವಂತೆ 5ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ.

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಸ್ಥಿತಿಗತಿ ಕುರಿತು 5ನೇ ಹಣಕಾಸು ಆಯೋಗ ಸಲ್ಲಿಸಿದ್ದ ವರದಿಯನ್ನು ಮಂಗಳವಾರ ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಸಭೆಯಲ್ಲಿ ಮಂಡಿಸಿದರು.

ವರದಿಯಲ್ಲಿ ಪ್ರಮುಖವಾಗಿ ಪಾಲಿಕೆಗಳ ಆರ್ಥಿಕ ಪರಿಸ್ಥಿತಿ, ಹೊಸ ಆದಾಯ ಮೂಲಗಳ ಸೃಷ್ಟಿ, ಸರ್ಕಾರದಿಂದ ನೀಡಬೇಕಾದ ನೆರವಿನ ಕುರಿತು ಉಲ್ಲೇಖಿಸಲಾಗಿದೆ. ಎಲ್ಲ 5 ಪಾಲಿಕೆಗಳ ಬಂಡವಾಳ ವೆಚ್ಚದಲ್ಲಿ ಶೇ.10ರಷ್ಟನ್ನು ವಾರ್ಷಿಕ ನಿರ್ವಹಣಾ ಅನುದಾನವನ್ನಾಗಿ ಮೀಸಲಿಡಬೇಕು. ಅದರ ಜತೆಗೆ ಜಿಬಿಎ ಪ್ರತಿ ಪಾಲಿಕೆಗೆ ವಾರ್ಷಿಕ 50 ಕೋಟಿ ರು. ಮತ್ತು ವಾರ್ಡ್‌ಗೆ 5 ಕೋಟಿ ರು. ಅನುದಾನ ನೀಡಬೇಕು. ಇನ್ನು ಒಂದು ಬಾರಿಯ ಸ್ಥಾಪನಾ ಅನುದಾನವಾಗಿ ಹೊಸ ವಾರ್ಡ್‌ಗಳಿಗೆ 2 ಕೋಟಿ ರು. ಹಾಗೂ ಹಳೇ ವಾರ್ಡ್‌ಗಳಿಗೆ 1 ಕೋಟಿ ರು. ನೀಡಬೇಕು ಹಾಗೂ ಪ್ರತಿ ನಗರ ಪಾಲಿಕೆಗೆ ಸಾಮರ್ಥ್ಯಾಭಿವೃದ್ಧಿ ಅನುದಾನವಾಗಿ ತಲಾ 5 ಕೋಟಿ ರು. ಕೊಡಬೇಕು ಎಂದು ತಿಳಿಸಲಾಗಿದೆ. ಜತೆಗೆ ಹಿಂದಿನ ವರ್ಷದ ರಾಜಸ್ವ ಕೊರತೆಗೆ ಸಮಾನವಾದ ಅನುದಾನವನ್ನು ಪಾಲಿಕೆಗಳಿಗೆ ಕೊಡಬೇಕು ಎಂದು ಶಿಫಾರಸು ಮಾಡಿದೆ.

ವಾರ್ಡ್‌ಗಳಿಗೆ ತೆರಿಗೆ ಪ್ರಯತ್ನದ ಗುರಿ:

ಪಾಲಿಕೆಗಳ ಆದಾಯ ವೃದ್ಧಿಗೆ ವಾರ್ಡ್‌ ಮಟ್ಟದಲ್ಲಿಯೇ ತೆರಿಗೆ ಸಂಗ್ರಹದ ಗುರಿಯನ್ನು ನೀಡಬೇಕು. ಪ್ರತಿ ವಾರ್ಡ್‌ನಲ್ಲೂ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳಿಂದ ತೆರಿಗೆ ವಸೂಲಿ ಸೇರಿದಂತೆ ಇನ್ನಿತರ ಆದಾಯ ಮೂಲಗಳ ಸಂಗ್ರಹಕ್ಕೆ ಪ್ರಯತ್ನಿಸಬೇಕು. ನಂತರದ ವರ್ಷದಲ್ಲಿ ವಾರ್ಡ್‌ಗಳಿಗೆ ತೆರಿಗೆ ಅಥವಾ ಆದಾಯ ಹಂಚುವ ಸಂದರ್ಭದಲ್ಲಿ ತೆರಿಗೆ ಪ್ರಯತ್ನದ ಗುರಿ ಮುಟ್ಟಲಾಗಿದೆಯೇ ಮತ್ತು ಹೊಸ ಪ್ರಯತ್ನ ಏನು ಮಾಡಲಾಗಿದೆ ಎಂಬುದರ ಲೆಕ್ಕಾಚಾರ ಮಾಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಸ್ತಿಗಳ ಮೌಲ್ಯಮಾಪನ ಅಗತ್ಯ:

ಪಾಲಿಕೆಗಳ ಪ್ರಮುಖ ಆದಾಯದ ಮೂಲ ಆಸ್ತಿ ತೆರಿಗೆಯಾಗಿದೆ. ಸದ್ಯ ಐದೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 20 ಲಕ್ಷ ಆಸ್ತಿಗಳ ಮೌಲ್ಯಮಾಪನ ಮಾಡಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಇನ್ನೂ 5 ಲಕ್ಷ ಆಸ್ತಿಗಳ ಮೌಲ್ಯಮಾಪನ ಮಾಡಿ, ತೆರಿಗೆ ವಸೂಲಿ ಮಾಡಬೇಕು ಎಂಬ ಅಂದಾಜಿದೆ. ಹೀಗಾಗಿ ತೆರಿಗೆ ವ್ಯಾಪ್ತಿಯಲ್ಲಿಲ್ಲದ ಆಸ್ತಿಗಳನ್ನು ಮೌಲ್ಯಮಾಪನ ಮಾಡುವ ಮೂಲಕ ವಾರ್ಷಿಕ 600ರಿಂದ 700 ಕೋಟಿ ರು. ಹೆಚ್ಚುವರಿ ತೆರಿಗೆ ವಸೂಲಿ ಮಾಡಬಹುದಾಗಿದೆ. ಈ ಕುರಿತು ಪಾಲಿಕೆಗಳು ಹೆಚ್ಚಿನ ಗಮನಹರಿಸಬೇಕು ಎಂದು ಸೂಚಿಸಲಾಗಿದೆ. ಜತೆಗೆ ತೆರಿಗೆ ಅಥವಾ ಇನ್ನಿತರ ಶುಲ್ಕ ಬಾಕಿ ಉಳಿಸಿಕೊಂಡಿರುವವರಿಗೆ ಒಂದು ಬಾರಿ ಇತ್ಯರ್ಥ (ಒಟಿಎಸ್) ವ್ಯವಸ್ಥೆ ನೀಡಿ, ತೆರಿಗೆ ಮತ್ತು ಶುಲ್ಕ ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಜಿಎಸ್‌ಟಿಯಲ್ಲಿ ಪಾಲು ನೀಡಿ:

ಐದೂ ನಗರ ಪಾಲಿಕೆಗಳು ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಅದರಿಂದಾಗಿ ರಾಜ್ಯ ಜಿಎಸ್‌ಟಿ ಸಂಗ್ರಹವು ಹೆಚ್ಚುವಂತಾಗಿದೆ. ಹೀಗಾಗಿ ರಾಜ್ಯ ಜಿಎಸ್‌ಟಿ ಆದಾಯದಲ್ಲಿ 5 ನಗರಗಳ ಪಾಲಿಕೆಗಳ ಕೊಡುಗೆ ಆಧರಿಸಿ ಶೇ. 5ರಷ್ಟನ್ನು ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಅದರ ಜತೆಗೆ 2006-07ರಿಂದ 2018-19ರವರೆಗೆ ವಸೂಲಾದ ಮುದ್ರಾಂಕ ಶುಲ್ಕದ ಮೇಲಿನ ಸರ್‌ಚಾರ್ಜ್‌ ಮೊತ್ತಕ್ಕಿಂತ ಹೆಚ್ಚುವರಿಯಾಗಿ 239.84 ಕೋಟಿ ರು.ಗಳನ್ನು ಹಿಂದಿನ ಬಿಬಿಎಂಪಿಗೆ ಬಿಡುಗಡೆ ಮಾಡಲಾಗಿತ್ತು. ಅದಾದ ನಂತರದಿಂದ ಮಹಾನಗರ ಪಾಲಿಕೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಿಬಿಎಂಪಿಗೆ ಬಿಡುಗಡೆಯಾಗದ ಮುದ್ರಾಂಕ ಶುಲ್ಕದ ಸರ್‌ಚಾರ್ಜ್‌ ಮೊತ್ತವನ್ನು 5 ನಗರ ಪಾಲಿಕೆಗಳಿಗೆ ನೇರವಾಗಿ ಬಿಡುಗಡೆ ಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇವುಗಳ ಜತೆಗೆ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಬಳಸಿಕೊಳ್ಳಬಹುದು, ಬೃಹತ್ ಯೋಜನೆಗಳಿಗೆ ಮುನ್ಸಿಪಲ್‌ ಬಾಂಡ್‌ಗಳ ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ.

ಸಂಚಾರ ದಟ್ಟಣೆ ಶುಲ್ಕ ವಿಧಿಸಲು ಸೂಚನೆ:

ನಗರ ಪಾಲಿಕೆಗಳು ತಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಸಂಚಾರ ದಟ್ಟಣೆ ಶುಲ್ಕ ವಿಧಿಸಬಹುದಾಗಿದೆ. ಪ್ರಮುಖವಾಗಿ ಹೊರವರ್ತುಲ ರಸ್ತೆ ಸೇರಿದಂತೆ ಇನ್ನಿತರ ಪ್ರಮುಖ ಮತ್ತು ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನಗಳ ನಿಯಂತ್ರಣಕ್ಕಾಗಿ ಸಂಚಾರ ದಟ್ಟಣೆ ಶುಲ್ಕ ವಿಧಿಸಬಹುದು. ಅದಕ್ಕಾಗಿ ಫಾಸ್ಟ್‌ ಟ್ಯಾಗ್‌ ವ್ಯವಸ್ಥೆ ಅನುಸರಿಸಬಹುದು.

ಜತೆಗೆ ಮುಂದಿನ 4 ವರ್ಷಗಳಲ್ಲಿ ಪ್ರತಿ ವರ್ಷ 250 ಕಿಮೀನಂತೆ ಬೆಂಗಳೂರಿನಲ್ಲಿ 1 ಸಾವಿರ ಕಿ.ಮೀ.ಗೂ ಹೆಚ್ಚಿನ ಹೊಸ ರಸ್ತೆಗಳನ್ನು ನಿರ್ಮಿಸಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಅನುದಾನದ ಜತೆಗೆ, ಸಂಚಾರ ದಟ್ಟಣೆ ಶುಲ್ಕ ಬಳಕೆಯಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.