ಎಲ್‌ಎನ್‌ಜಿ ಕೊರತೆಯಿಂದ ಕೈಗಾರಿಕೆಗೆ ಶಾಕ್‌

KannadaprabhaNewsNetwork |  
Published : Mar 06, 2026, 02:00 AM IST
ತೈಲ | Kannada Prabha

ಸಾರಾಂಶ

ಅನಿಲ ಸಮೃದ್ಧ ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧಗ್ರಸ್ತವಾಗಿರುವುದರಿಂದ ಮತ್ತು ಇಂಧನ ಸಾಗಿಬರುವ ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್‌ ಮಾಡಿರುವುದರಿಂದ ಭಾರತದ ಕೆಲ ಕೈಗಾರಿಕೆಗಳು, ಕಾರ್ಯಾಚರಣೆಗೆ ಅತಿಮುಖ್ಯವಾದ ಎಲ್‌ಎನ್‌ಜಿ ಕೊರತೆ ಎದುರಿಸುವ ಭೀತಿಯಲ್ಲಿವೆ. ಇಂತಹ ಸ್ಥಿತಿ ನಿರ್ಮಾಣವಾದಲ್ಲಿ, ಉತ್ಪಾದನೆ ಕುಸಿಯುವುದಲ್ಲದೆ ವಸ್ತುಗಳ ಬೆಲೆಯೇರಿಕೆಯೂ ಆಗಲಿದೆ. ಪರಿಣಾಮ ಆ ಕಾರ್ಖಾನೆಗಳಿಗೆ ಬೀಗ ಬೀಳುವ ಆಪತ್ತು ತಪ್ಪಿದ್ದಲ್ಲ.

ತೈಲ ಸಂಸ್ಕರಣೆ, ರಾಸಾಯನಿಕ, ಜವಳಿ ಕ್ಷೇತ್ರಕ್ಕೆ ಹೊಡೆತ

ಉತ್ಪಾದನೆ ಕುಂಠಿತ, ರಫ್ತು ಕುಸಿತದ ಭಾರೀ ಆತಂಕ

ನವದೆಹಲಿ: ಅನಿಲ ಸಮೃದ್ಧ ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧಗ್ರಸ್ತವಾಗಿರುವುದರಿಂದ ಮತ್ತು ಇಂಧನ ಸಾಗಿಬರುವ ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್‌ ಮಾಡಿರುವುದರಿಂದ ಭಾರತದ ಕೆಲ ಕೈಗಾರಿಕೆಗಳು, ಕಾರ್ಯಾಚರಣೆಗೆ ಅತಿಮುಖ್ಯವಾದ ಎಲ್‌ಎನ್‌ಜಿ ಕೊರತೆ ಎದುರಿಸುವ ಭೀತಿಯಲ್ಲಿವೆ. ಇಂತಹ ಸ್ಥಿತಿ ನಿರ್ಮಾಣವಾದಲ್ಲಿ, ಉತ್ಪಾದನೆ ಕುಸಿಯುವುದಲ್ಲದೆ ವಸ್ತುಗಳ ಬೆಲೆಯೇರಿಕೆಯೂ ಆಗಲಿದೆ. ಪರಿಣಾಮ ಆ ಕಾರ್ಖಾನೆಗಳಿಗೆ ಬೀಗ ಬೀಳುವ ಆಪತ್ತು ತಪ್ಪಿದ್ದಲ್ಲ.

ಭಾರತದ ಸೆರಾಮಿಕ್ಸ್, ರಸಗೊಬ್ಬರ, ಟೈರ್‌, ಬಣ್ಣ, ವಿಶೇಷ ರಾಸಾಯನಿಕ, ಪ್ಯಾಕೇಜಿಂಗ್, ಜವಳಿ, ತೈಲ ಸಂಸ್ಕರಣಾಗಾರ ಸೇರಿದಂತೆ ಹಲವು ಕೈಗಾರಿಕೆಗಳು ಕಚ್ಚಾತೈಲದ ಮೇಲೆ ಅವಲಂಬಿತವಾಗಿವೆ. ಇದೀಗ ಉದ್ಭವಿಸುವ ಬಿಕ್ಕಟ್ಟಿನಿಂದಾಗಿ ಅವುಗಳ ಉತ್ಪಾದನೆಯಲ್ಲಿ ಅಡಚಣೆಯಾಗುವುದರ ಜತೆಗೆ ಉತ್ಪಾದನಾ ವೆಚ್ಚವೂ ಏರಿಕೆಯಾಗಲಿದೆ.

ಆತಂಕವೇಕೆ?:

ಮಧ್ಯಪ್ರಾಚ್ಯ ರಾಷ್ಟ್ರಗಳು ಜಗತ್ತಿನಲ್ಲಿ ಉತ್ಪಾದನೆಯಾಗುವ ಕಚ್ಚಾತೈಲದ ಶೇ.30ರಷ್ಟನ್ನು ಹಾಗೂ ಎಲ್‌ಎನ್‌ಜಿಯ ಶೇ.20ರಷ್ಟನ್ನು ಉತ್ಪಾದಿಸುತ್ತವೆ. ಆದರೆ ಸದ್ಯ ಅವು ಕದನದಲ್ಲಿ ವ್ಯಸ್ತವಾಗಿವೆ. ಜತೆಗೆ, ಆ ರಾಷ್ಟ್ರಗಳಿಂದ ಭಾರತ ತರಿಸಿಕೊಳ್ಳುವ ತೈಲ ಮತ್ತು ಅನಿಲ ಸಾಗಿಬರುವುದು ಹೋರ್ಮುಜ್‌ ಜಲಸಂಧಿಯ ಮೂಲಕ. ಆದರೆ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧದ ಪ್ರತೀಕಾರದ ಕಾರಣ ನೀಡಿ ಅದನ್ನು ಇರಾನ್‌ ಮುಚ್ಚಿದ್ದು, ಯಾವುದೇ ಹಡಗು ಆ ಮಾರ್ಗದಲ್ಲಿ ಸಾಗದಂತೆ ಎಚ್ಚರಿಸಿದೆ. ಇದನ್ನೂ ಮೀರಿ ಆ ಪ್ರದೇಶದತ್ತ ಹೊರಟ ನೌಕೆಗಳನ್ನು ಉಡಾಯಿಸಿದೆ.

ಇದು, ತನ್ನ ಒಟ್ಟು ಆಮದಿನಲ್ಲಿ ಶೇ.50ರಷ್ಟು ಕಚ್ಚಾ ತೈಲ ಹಾಗೂ ಶೇ.60ರಷ್ಟು ಎಲ್‌ಎನ್‌ಜಿಗೆ ಹೋರ್ಮುಜ್‌ಅನ್ನೇ ನೆಚ್ಚಿಕೊಂಡಿದ್ದ ಭಾರತದ ಉತ್ಪಾದನಾ ವಲಯಕ್ಕೆ ಬಂದೊದಗಿರುವ ಬಹುದೊಡ್ಡ ಸಂಕಷ್ಟ.

ಇನ್ಯಾವ ಕ್ಷೇತ್ರಕ್ಕೆ ನಷ್ಟ?:

ಭಾರತದಿಂದ ರಫ್ತಾಗುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ ಶೇ.72ರಷ್ಟು ಮಧ್ಯಪ್ರಾಚ್ಯಕ್ಕೆ ಹೋಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾಗಣೆಗೆ ಅಡಚಣೆಯಾಗಿದ್ದು, ಪಾವತಿಯಲ್ಲಿಯೂ ವಿಳಂಬವಾಗುವ ಸಾಧ್ಯತೆಯಿದೆ. ಇಸ್ರೇಲ್‌ ಮತ್ತು ಯುಎಇಯನ್ನು ಬಹುದೊಡ್ಡ ಮಾರುಕಟ್ಟೆಯಾಗಿ ಹೊಂದಿರುವ ವಜ್ರೋದ್ಯಮಕ್ಕೂ ಇದೇ ಸ್ಥಿತಿ ಬಂದೊದಗಿದೆ. ರಾಸಾಯನಿಕ ಉತ್ಪಾದನೆಗೆ ಬೇಕಾಗುವ ವಸ್ತುಗಳ ಪೂರೈಕೆಗೂ ತೊಂದರೆಯಾಗಿದೆ. ಯುದ್ಧಗ್ರಸ್ತ ರಾಷ್ಟ್ರಗಳಿಗೆ ಹೋಗುವ ವಿಮಾಗಳ ಸಂಚಾರ ರದ್ದಾಗಿರುವುದರಿಂದ ವಿಮಾನಯಾನ ಕ್ಷೇತ್ರಕ್ಕೂ ನಷ್ಟವಾಗಿದೆ.

==

ತೈಲ, ಎಲ್‌ಪಿಜಿಗೆ ಕೊರತೆ ಇಲ್ಲ: ಕೇಂದ್ರ ಅಭಯ

ಕೊಲ್ಲಿಯಿಂದ ಬರದಿದ್ದರೆ ಬೇರೆ ದೇಶಗಳಿಂದ ಖರೀದಿ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ಕಾರಣ ಭಾರತಕ್ಕೆ ತೈಲ ಮತ್ತು ಎಲ್‌ಪಿಜಿ (ಅಡುಗೆ ಅನಿಲ) ಕೊರತೆ ಉಂಟಾಗಲಿದೆ ಎಂಬ ಆತಂಕ ಮನೆಮಾಡುತ್ತಿರುವ ನಡುವೆಯೇ, ದೇಶದಲ್ಲಿ ಕಚ್ಚಾತೈಲ, ಎಲ್‌ಪಿಜಿ ಅಥವಾ ಎಲ್‌ಎನ್‌ಜಿಗೆ (ನೈಸರ್ಗಿಕ ಅನಿಲ) ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಭಾರತದ ಇಂಧನ ಸಂಗ್ರಹವನ್ನು ಪ್ರತಿದಿನ ತುಂಬಲಾಗುತ್ತಿದೆ. ದೇಶ ಇಂಧನ ಭದ್ರತೆಯಲ್ಲಿ ಬಹಳ ಆರಾಮದಾಯಕ ಸ್ಥಿತಿಯಲ್ಲಿದೆ. ಕಚ್ಚಾತೈಲ, ಎಲ್‌ಪಿಜಿ ಅಥವಾ ಎಲ್‌ಎನ್‌ಜಿ ಯಾವುದಕ್ಕೂ ನಮ್ಮಲ್ಲಿ ಕೊರತೆ ಇಲ್ಲ. ಮಧ್ಯಪ್ರಾಚ್ಯದ ಹೊರತಾಗಿ ಆಸ್ಟ್ರೇಲಿಯಾ, ಕೆನಡಾ, ಅಮೆರಿಕಾ, ಯುಎಇ ಮೊದಲಾದ ದೇಶಗಳಿಂದ ಪರ್ಯಾಯ ವ್ಯವಸ್ಥೆಗೆ ಹುಡುಕುತ್ತಿದ್ದೇವೆ. ಆಸ್ಟ್ರೇಲಿಯಾ ಮತ್ತು ಕೆನಡಾ ಅನಿಲ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿವೆ.ಅಮೆರಿಕ ಮತ್ತು ಯುಎಇಯೊಂದಿಗೆ ಹೊಸ ಖರೀದಿ ಒಪ್ಪಂದಗಳನ್ನು ಮಾಡಲಾಗಿದೆ. ಒಪೆಕ್‌ ಮತ್ತು ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯೊಂದಿಗೂ ಮಾತುಕತೆ ನಡೆಸಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.

ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ಬಂದ್ ಮಾಡಿದ್ದರಿಂದ ಭಾರತದಲ್ಲಿ ಇಂಧನ ಕೊರತೆ ಉಂಟಾಗಲಿದೆ ಎಂಬ ಕಳವಳ ವ್ಯಕ್ತವಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ
ಬಿಹಾರ ಸಿಎಂ ನಿತೀಶ್‌ ರಾಜ್ಯಸಭೆಗೆ