ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ, 8,000 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಹಗರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು : ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬೆನ್ನಲ್ಲೇ 8 ಸಾವಿರ ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್ ಹಗರಣ ಸಂಬಂಧ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.
ಎಫ್‌ಐಆರ್ ಬೆನ್ನಲ್ಲೇ ಪ್ರಕರಣದ ಕುರಿತ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಅಥವಾ ಸಿಐಡಿ ತನಿಖೆಗೆ ವಹಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ಇದು ಬೃಹತ್ ಆರ್ಥಿಕ ಹಗರಣವಾಗಿರುವ ಕಾರಣ ಪೊಲೀಸ್ ಠಾಣೆ ಮಟ್ಟದಲ್ಲಿ ತನಿಖೆ ಅಸಾಧ್ಯವಾಗಿದೆ.
ನಿರ್ಮಲಾ ಹಾಗೂ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗುವುದರೊಂದಿಗೆ ಮುಡಾ ಪ್ರಕರಣದ ಬಳಿಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ತನಿಖಾ ಸಂಸ್ಥೆಗಳ ಜಂಗಿ ಕುಸ್ತಿ ಅಧಿಕೃತವಾಗಿ ಪ್ರಾರಂಭವಾದಂತಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿ ಎ1 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎ2 ಜಾರಿ ನಿರ್ದೇಶನಾಲಯ, ಎ3 ಕೇಂದ್ರ ಬಿಜೆಪಿ ಕಚೇರಿ ಸಿಬ್ಬಂದಿ, ಎ4 ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎ5 ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಬಹುರಾಷ್ಟ್ರೀಯ ಹಾಗೂ ಕಾರ್ಪೋರೇಟ್ ಕಂಪನಿಗಳಿಂದ ಅಕ್ರಮವಾಗಿ ಕೋಟ್ಯಂತರ ರು. ಮೌಲ್ಯದ ಚುನಾವಣಾ ಬಾಂಡ್ ಸಂಗ್ರಹಿಸಿರುವ ಆರೋಪದ ಮೇರೆಗೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜನಾಧಿಕಾರ ಸಂಘರ್ಷ ಸಮಿತಿಯ ಪದಾಧಿಕಾರಿ ಆದರ್ಶ ಅಯ್ಯರ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯವು, ನಿರ್ಮಲಾ ಸೇರಿದಂತೆ ಇ.ಡಿ. ಮತ್ತು ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಶುಕ್ರವಾರ ಆದೇಶಿಸಿತ್ತು. ಈ ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ತಿಲಕನಗರ ಠಾಣೆಗೆ ಆದರ್ಶ್ ಅಯ್ಯರ್ ದೂರು ಸಲ್ಲಿಸಿದರು. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.
ಎಫ್‌ಐಆರ್‌ನಲ್ಲೇನಿದೆ?:
ನಿರ್ಮಲಾ ಹಾಗೂ ಇ.ಡಿ. ಅಧಿಕಾರಿಗಳು ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇತರೆ ಆರೋಪಿಗಳ ಜತೆ ಒಳ ಸಂಚು ರೂಪಿಸಿ ಎಂಎನ್‌ಸಿ ಹಾಗೂ ಟಿಎನ್‌ಸಿ ಕಾರ್ಪೋರೇಟ್ ಕಂಪನಿಗಳ ಸಿಇಓ ಮತ್ತು ಎಂ.ಡಿ.ರವರಿಂದ ಎಲೆಕ್ಟೋರಲ್ ಬಾಂಡ್ಸ್ (ಚುನಾವಣಾ ಬಾಂಡ್) ಹೆಸರಿನಲ್ಲಿ ಸುಮಾರು 8,000 ಕೋಟಿ ರು.ಗೂ ಹೆಚ್ಚು ಹಣವನ್ನು ಬಲ ಪ್ರಯೋಗದ ಮೂಲಕ ಸಂಗ್ರಹಿಸಿದ್ದರು.
ವಿತ್ತ ಸಚಿವೆ ಹಾಗೂ ಇ.ಡಿ. ಅಧಿಕಾರಿಗಳ ಸಹಾಯದಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿಯ ಪದಾಧಿಕಾರಿಗಳು ಹಣ ಮಾಡಿಕೊಂಡಿದ್ದರು. ಇದಕ್ಕಾಗಿ ಹಲವು ಕಾರ್ಪೋರೇಟ್ ಕಂಪನಿಗಳ ಮೇಲೆ ದಾಳಿ ಹಾಗೂ ಜಪ್ತಿ ಮಾಡುವ ಮೂಲಕ ಸಿಇಓ ಹಾಗೂ ಎಂ.ಡಿ.ಗಳನ್ನು ಇ.ಡಿ. ಅಧಿಕಾರಿಗಳ ಮೂಲಕ ವಿತ್ತ ಸಚಿವೆ ಬಂಧಿಸಿದ್ದರು. ಇ.ಡಿ. ದಾಳಿಗೆ ಹೆದರಿ ಅನೇಕ ಕಾರ್ಪೋರೇಟ್ ಕಂಪನಿಗಳು ಕೋಟ್ಯಂತರ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ್ದರು.
2019ನೇ ಸಾಲಿನ ಏಪ್ರಿಲ್ ತಿಂಗಳಿನಿಂದ 2022ನೇ ಸಾಲಿನ ಆಗಸ್ಟ್ ಮತ್ತು 2023ನೇ ಸಾಲಿನ ನವೆಂಬರ್ ವರೆಗೆ ಅಲ್ಯೂಮಿನಿಯಂ ಮತ್ತು ಕಾಪರ್ ಜೈಂಟ್ ಸ್ಟರ್ಲೈಟ್ ವೇದಾಂತ ಕಂಪನಿಯಿಂದ ಒಟ್ಟು 230.15 ಕೋಟಿ ರು., 2022 ಜುಲೈ 2ರಿಂದ ನವೆಂಬರ್ 15 ಹಾಗೂ 2023ರ ಜನವರಿ 5ರಿಂದ ಮತ್ತು ನವೆಂಬರ್ 8ವರೆಗೆ ಅರವಿಂದ್ ಫಾರ್ಮಾ ಹೆಸರಿನ ಕಂಪನಿಯಿಂದ ಒಟ್ಟು 49.5 ಕೋಟಿ ರು.ಗಳನ್ನು ರಹಸ್ಯವಾಗಿ ಒಳ ಸಂಚು ರೂಪಿಸಿ ಆರೋಪಿಗಳು ಪಡೆದಿದ್ದರು.
ಇದೇ ರೀತಿ ಹಲವು ಕಾರ್ಪೋರೇಟ್ ಕಂಪನಿಗಳಿಂದ ಆರೋಪಿಗಳು 8 ಸಾವಿರ ಕೋಟಿಗೂ ಅಧಿಕ ಹಣವನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದಾರೆ. ಈ ಕೃತ್ಯಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇ.ಡಿ. ಅಧಿಕಾರಿಗಳ ನೆರವು ಪಡೆದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಚುನಾವಣಾ ಬಾಂಡ್?:
2018ರಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಕ್ಕೆ ಚುನಾವಣಾ ಬಾಂಡ್‌ಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು. ಆದರೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ಇ.ಡಿ. ಹಾಗೂ ಐ.ಟಿ. ಇಲಾಖೆಗಳನ್ನು ಬಳಸಿಕೊಂಡು ಅಕ್ರಮವಾಗಿ ಕೋಟ್ಯಂತರ ರು. ಚುನಾವಣಾ ಬಾಂಡ್ ಸಂಗ್ರಹಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಚುನಾವಣಾ ಬಾಂಡ್‌ಗಳನ್ನೇ ಸುಪ್ರೀಂಕೋರ್ಟ್ ರದ್ದುಪಡಿಸಿದೆ.