ನಾಳೆಯಿಂದ ಪ್ರಧಾನಿ ನರೇಂದ್ರ ಮೋದಿ 8 ದಿನ 5 ದೇಶಗಳ ಪ್ರವಾಸ

KannadaprabhaNewsNetwork |  
Published : Jul 01, 2025, 12:47 AM ISTUpdated : Jul 01, 2025, 05:25 AM IST
Prime Minister Narendra Modi (Photo: ANI)

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜುಲೈ 2ರಿಂದ 9ರವರೆಗೆ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದು 8 ದಿನಗಳ ಪ್ರವಾಸವಾಗಿದ್ದು, ಅವರ 11 ವರ್ಷದ ಅಧಿಕಾರಾವಧಿಯಲ್ಲೇ ಅತಿ ಸುದೀರ್ಘ ವಿದೇಶ ಯಾನವಾಗಲಿದೆ.

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 2ರಿಂದ 9ರವರೆಗೆ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದು 8 ದಿನಗಳ ಪ್ರವಾಸವಾಗಿದ್ದು, ಅವರ 11 ವರ್ಷದ ಅಧಿಕಾರಾವಧಿಯಲ್ಲೇ ಅತಿ ಸುದೀರ್ಘ ವಿದೇಶ ಯಾನವಾಗಲಿದೆ.

ಪ್ರಧಾನಿಯವರ ಪ್ರವಾಸವು 2 ಖಂಡಗಳನ್ನು ಒಳಗೊಂಡಿದ್ದು, ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗಳಿಗೆ ಭೇಟಿ ನೀಡಲಿದ್ದಾರೆ.ಈ ಪೈಕಿ ಬ್ರಿಕ್ಸ್ ಶೃಂಗಸಭೆಗಾಗಿ ಬ್ರೆಜಿಲ್‌ನಲ್ಲಿ ಮೋದಿ 4 ದಿನ (ಜುಲೈ 5ರಿಂದ 8ರವರೆಗೆ) ತಂಗಲಿದ್ದಾರೆ. ಉಳಿದ 4 ದೇಶಗಳಲ್ಲಿ ಅವರು ತಲಾ 1 ದಿನ ತಂಗಲಿದ್ದಾರೆ. ಈ ಎಲ್ಲ ದೇಶಗಳು ಭಾರತದ ಜತೆ ಉತ್ತಮ ಸಂಬಂಧ ಹೊಂದಿರುವ ಹಾಗೂ ಭಾರತೀಯರು ಅಧಿಕ ಸಂಖ್ಯೆಯಲ್ಲಿರುವ ದೇಶಗಳಾಗಿವೆ.

2ನೇ ಪಂಚ ದೇಶ ಪ್ರವಾಸ:

ಇದಲ್ಲದೆ, ಇದು ಮೋದಿ ಅಧಿಕಾರಾವಧಿಯಲ್ಲಿನ 2ನೇ 5 ರಾಷ್ಟ್ರಗಳ ಪ್ರವಾಸವಾಗಿದೆ. ಕೊನೆಯ ಭೇಟಿ 2016ರಲ್ಲಿ ನಡೆದಿತ್ತು, ಆಗ ಅವರು ಅಮೆರಿಕ, ಮೆಕ್ಸಿಕೊ, ಸ್ವಿಟ್ಜರ್ಲೆಂಡ್, ಅಫ್ಘಾನಿಸ್ತಾನ ಮತ್ತು ಕತಾರ್‌ಗೆ ಭೇಟಿ ನೀಡಿದ್ದರು.

ಮನೆಯಿಂದ 3 ವರ್ಷ ಹೊರಗೇ ಬಾರದವನ ರಕ್ಷಣೆ!

ಮುಂಬೈ: ತಂದೆ ತಾಯಿ ಅಗಲಿದರು ಎಂದು ಖಿನ್ನತೆಗೆ ಒಳಗಾಗಿದ್ದ 55 ವರ್ಷದ ಅನುಜ್‌ ಕುಮಾರ್‌ ನಾಯರ್‌ ಎಂಬುವರು ಬರೋಬ್ಬರಿ 3 ವರ್ಷ ಮನೆಯಿಂದ ಹೊರಬಾರದೇ ಜೀವನ ನಡೆಸಿದ್ದ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್‌ ಅಪಾರ್ಟ್‌ಮೆಂಟ್‌ನ ಇತರೆ ನಿವಾಸಿಗಳು ಎನ್‌ಜಿಓ ಸಹಾಯದಿಂದ ಅನುಜ್‌ ಅವರನ್ನು ರಕ್ಷಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಅನುಜ್ ಅವರ ತಂದೆ ತಾಯಿ ಮೃತರಾಗಿದ್ದರು. ಇವರ ಅಣ್ಣ 2 ದಶಕಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದ ಅನುಜ್‌ ತಮ್ಮನ್ನು ತಾವು ನವೀ ಮುಂಬೈನಲ್ಲಿನ ಮನೆಯಲ್ಲಿಯೇ ಲಾಕ್‌ ಮಾಡಿಕೊಂಡಿದ್ದರು. ಆಹಾರವನ್ನು ಫುಡ್‌ ಡೆಲಿವರಿ ಆ್ಯಪ್‌ ಮೂಲಕ ತರಿಸಿಕೊಳ್ಳುತ್ತಿದ್ದರು. ಅದನ್ನು ಹೊರತುಪಡಿಸಿ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಬಳಿಕ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಮಾಹಿತಿ ಮೇರೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆಂಧ್ರದ ಶ್ರೀಶೈಲಂ ದೇವಸ್ಥಾನ ಲಡ್ಡು ಪ್ರಸಾದದಲ್ಲಿ ಜಿರಳೆ ಪತ್ತೆ

ಶ್ರೀಶೈಲಂ (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಪ್ರಸಿದ್ಧ ಶ್ರೀಶೈಲಂ ದೇವಸ್ಥಾನದಲ್ಲಿ ಭಾನುವಾರ ಭಕ್ತರೊಬ್ಬರಿಗೆ ನೀಡಿದ್ದ ಲಡ್ಡು ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿರುವ ಆರೋಪ ಕೇಳಿ ಬಂದಿದೆ. ಆದರೆ ದೇಗುಲದ ಆಡಳಿತ ಮಂಡಳಿ ಈ ಆರೋಪ ನಿರಾಕರಿಸಿದೆ.ಭಾನುವಾರ ದೇಗುಲದಲ್ಲಿ ಸರಶ್ಚಂದ್ರ ಕೆ. ಎನ್ನುವ ಭಕ್ತರೊಬ್ಬರು ಲಡ್ಡು ಪ್ರಸಾದದಲ್ಲಿ ಸತ್ತಿರುವ ಜಿರಳೆ ಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಅದನ್ನು ಅವರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡಿದ್ದಾರೆ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್‌ ರಾವ್‌ ಎನ್ನುವವರಿಗೆ ದೂರು ನೀಡಿದ್ದಾರೆ.

ಆದರೆ ದೇವಸ್ಥಾನದ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದು, ‘ಲಡ್ಡು ತಯಾರಿಕೆಯ ವೇಳೆ ಕಟ್ಟುನಿಟ್ಟಾದ ಶಿಷ್ಟಾಚಾರಗಳನ್ನು ಪಾಲಿಸಲಾಗಿದೆ. ತರಬೇತಿ ಪಡೆದ ಸಿಬ್ಬಂದಿಯೇ ಇದರಲ್ಲಿ ಭಾಗಿಯಾಗಿರುತ್ತಾರೆ. ಸ್ವಚ್ಛತೆ ಕಾಪಾಡಲಾಗುತ್ತದೆ’ ಎಂದಿದ್ದಾರೆ. ಜೊತೆಗೆ ವಿಡಿಯೋಗಳನ್ನು ನೋಡಿ ಭಕ್ತರು ಗಾಬರಿಯಾಗಬೇಡಿ ಎಂದು ಮನವಿ ಮಾಡಿದ್ದಾರೆ.ಇನ್ನು ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಣಿಪುರ: ಅಪರಿಚಿತರಿಂದ ಕುಕಿ ನಾಯಕ ಸೆರಿ ನಾಲ್ವರ ಹತ್ಯೆ

ಪಿಟಿಐ ಇಂಫಾಲ್‌ಜನಾಂಗೀಯ ಹಿಂಸೆಪೀಡಿತ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಸೋಮವಾರ ಕುಕಿ ಕಮಾಂಡರ್‌ ಥಾಹ್ಪಿ, ಓರ್ವ 60 ವರ್ಷದ ದಾರಿಹೋಕ ಮಹಿಳೆ ಸೇರಿದಂತೆ ನಾಲ್ವರು ನಾಗರಿಕರನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.

ಥಾಹ್ಪ ಸೇರಿ 3 ಜನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊಂಗ್ಜಾಂಗ್ ಗ್ರಾಮದ ಬಳಿ ಹೊಂಚುದಾಳಿ ನಡೆದಿದೆ. ಆಗ ಕಾರಲ್ಲಿದ್ದ ಎಲ್ಲ ಮೂವರು ಹಾಗೂ ದಾರಿಹೋಕ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಸ್ಥಳದಿಂದ 12 ಕ್ಕೂ ಹೆಚ್ಚು ಖಾಲಿ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ.

ಹೊಂಚು ಹಾಕಿ ಲಾ ವಿದ್ಯಾರ್ಥಿನಿ ಮೇಲೆ ರೇಪ್‌: ತನಿಖೆಯಿಂದ ಬಯಲು

ಕೋಲ್ಕತಾ: ಕಾನೂನು ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ನೀಚತನ ಬಗೆದಷ್ಟು ಬಯಲಾಗುತ್ತಿದೆ. ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ ಈ ಕೃತ್ಯವನ್ನು ಆರೋಪಿಗಳು ಪೂರ್ವನಿಯೋಜಿತ ವಾಗಿಯೇ ಮಾಡಿದ್ದು, ಇದಕ್ಕಾಗಿ ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

ಇದುವರೆಗೆ ಅತ್ಯಾಚಾರದಲ್ಲಿ ಭಾಗಿಯಾದ ಮೂವರು ಹಾಗೂ ಸೆಕ್ಯೂರಿಟಿ ಗಾರ್ಡ್‌ ಸೇರಿದಂತೆ ನಾಲ್ವರ ಬಂಧನವಾಗಿದೆ. ಈ ಪೈಕಿ ಮೂವರು ಆರೋಪಿಗಳು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಅದನ್ನು ಚಿತ್ರೀಕರಿಸಿಕೊಂಡು ಆ ಬಳಿಕ ಆಕೆಗೆ ಬ್ಲ್ಯಾಕ್‌ಮೇಲ್‌ ಮೇಲೆ ಮಾಡುವುದಕ್ಕೆ ಷಡ್ಯಂತ್ರ ರೂಪಿಸಿದ್ದರು ಎನ್ನುವುದು ಬಯಲಾಗಿದೆ.ಅಧಿಕಾರಿಗಳ ಪ್ರಕಾರ, ಇದೊಂದು ಪೂರ್ವ ನಿಯೋಜಿತ ಕೃತ್ಯ. ಈ ರೀತಿ ಸನ್ನಿವೇಶ ಸೃಷ್ಟಿಸಲೆಂದು ಹಲವು ದಿನಗಳಿಂದ ಆರೋಪಿಗಳು ಕಾದು ಕುಳಿತಿದ್ದರು. ಆಕೆ ಕಾಲೇಜಿಗೆ ಪ್ರವೇಶ ಪಡೆದ ಮೊದಲ ದಿನದಿಂದಲೂ ಮೂವರಿಗೂ ಟಾರ್ಗೆಟ್‌ ಆಗಿದ್ದಳು ಎನ್ನುವ ಅಂಶ ಬೆಳಕಿಗೆ ಬಂದಿದೆ. 

ಮಾತ್ರವಲ್ಲದೇ ಈ ಮೂವರು ಆರೋಪಿಗಳ ವಿರುದ್ಧ ಹಲವು ಹುಡುಗಿಯರಿಗೆ ಚುಡಾಯಿಸಿದ ಆರೋಪವೂ ಇದೆ ಎನ್ನುವುದು ಎಸ್‌ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಇನ್ನು ಈ ಸಂಬಂಧ ಅಧಿಕಾರಿಗಳು ಇಬ್ಬರು ಆರೋಪಿಗಳ ಮನೆಯಲ್ಲಿ ಶೋಧ ನಡೆಸಿದ್ದು, ಜೂ.25ರ ಘಟನೆಯಲ್ಲಿ ಚಿತ್ರೀಕರಿಸಿ ಇತರ ಜೊತೆಗೆ ಹಂಚಿಕೊಂಡಿರುವ ಸಾಧ್ಯಸಾಧ್ಯತೆಗಳ ಬಗ್ಗೆಯೂ ತನಿಖೆಯನ್ನು ಕೈಗೊಂಡಿದ್ದಾರೆ.

ಸಿಸಿಟೀವಿಯಲ್ಲಿ ಸೆರೆ:ಇನ್ನು ಜೂ.25ರ ಸಂಜೆ ದುರುಳರು ಯುವತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಕಾಲೇಜಿನ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಪ್ರಮುಖ ಆರೋಪಿ ಮನೋಜಿತ್‌ ಮಿಶ್ರಾ ಮತ್ತು ಇತರ ಇಬ್ಬರು ಆಕೆಯನ್ನು ಬಲವಂತವಾಗಿ ಸೆಕ್ಯೂರಿಟಿ ಗಾರ್ಡ್‌ ಕೋಣೆಗೆ ಎಳೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಇದು ಯುವತಿಯ ಆರೋಪಗಳಿಗೆ ಮತ್ತಷ್ಟ ಸಾಕ್ಷ್ಯ ಸಿಕ್ಕಂತಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ