11 ದಿನಗಳ ಮೋದಿ ರಾಮಯಾತ್ರೆ ವ್ರತ ಸಂಪೂರ್ಣ

KannadaprabhaNewsNetwork | Updated : Jan 22 2024, 07:12 AM IST

ಸಾರಾಂಶ

ಧನುಷ್ಕೋಡಿ, ಕೋದಂಡ ರಾಮಸ್ವಾಮಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಸಮುದ್ರಕ್ಕೆ ಹೂವು ಹಾಕಿ ರಾಮಸೇತುವೆಗೂ ಪೂಜೆ ಮಾಡಿದರು. ಇದರೊಂದಿಗೆ ಮೋದಿ 11 ದಿನಗಳಿಂದ ಕೈಗೊಂಡಿದ್ದ ವಿಶೇಷ ಅನುಷ್ಠಾನ ಬಹುತೇಕ ಅಂತ್ಯವಾಗಿದೆ.

ಪಿಟಿಐ ರಾಮೇಶ್ವರ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮಿಳುನಾಡಿನ ದಕ್ಷಿಣದ ತುತ್ತ ತುದಿಯಲ್ಲಿರುವ ಧನುಷ್ಕೋಡಿ, ಶ್ರೀರಾಮನು ರಾಮಸೇತು ನಿರ್ಮಿಸಿದ ಸ್ಥಳ ಎನ್ನಲಾದ ಅರಿಚಲ್ ಮುನೈ ಹಾಗೂ ಅಲ್ಲಿಗೆ ಸನಿಹದ ಕೋದಂಡರಾಮಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಈ ಮೂಲಕ ಅವರು ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾಪನೆ ಯಜಮಾನತ್ವ ವಹಿಸುವ ಉದ್ದೇಶದಿಂದ ಕೈಗೊಂಡ 11 ದಿನಗಳ ರಾಮನ ಐತಿಹ್ಯ ಇರುವ ಸ್ಥಳಗಳ ದರ್ಶನ ಪೂರ್ಣಗೊಳಿಸಿದರು.

ಶನಿವಾರ ರಾಮೇಶ್ವರದ ರಾಮನಾಥಸ್ವಾಮಿ ಹಾಗೂ ಶ್ರೀರಂಗಂ ನಗರಗಳಿಗೆ ಭೇಟಿ ನೀಡಿದ್ದ ಮೋದಿ ಭಾನುವಾರ ತಮ್ಮ ಯಾತ್ರೆ ಮುಂದುವರಿಸಿ ಶ್ರೀಲಂಕಾಕ್ಕೆ ಸಮೀಪ ಇರುವ ಧನುಷ್ಕೋಡಿ ಮತ್ತು ಅರಿಚಲ್ ಮುನೈ ಕಡೆಗೆ ಹೋಗುವ ಮಾರ್ಗದಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು ಮತ್ತು ದರ್ಶನ ಪಡೆದರು.

ತಮಿಳರ ಪಾಲಿಗೆ ಕೋದಂಡರಾಮಸ್ವಾಮಿಯು ಬಿಲ್ಲು ಮತ್ತು ಬಾಣ ಹಿಡಿದ ಶ್ರೀರಾಮನಾಗಿದ್ದಾನೆ.ಬಳಿಕ ಮೋದಿ ಅವರು ಶ್ರೀರಾಮನು ರಾಮಸೇತು ನಿರ್ಮಿಸಿದ ಸ್ಥಳ ಎನ್ನಲಾದ ಅರಿಚಲ್ ಮುನೈ ಕಡಲತೀರದಲ್ಲಿ ಪುಷ್ಪಾರ್ಚನೆ ಮಾಡಿದರು ಮತ್ತು ರಾಷ್ಟ್ರೀಯ ಲಾಂಛನವಿರುವ ಕಂಬಕ್ಕೆ ಪುಷ್ಪ ನಮನ ಸಲ್ಲಿಸಿದರು. ಅರಿಚಲ್ ಮುನೈ ದಕ್ಷಿಣ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದ ದಕ್ಷಿಣ ತುದಿಯಲ್ಲಿದೆ.

ಇದೇ ವೇಳೆ, ಕಡಲತೀರದಲ್ಲಿ ಪ್ರಾಣಾಯಾಮ ಮಾಡಿದ ಪ್ರಧಾನಿ ಸಮುದ್ರದ ನೀರನ್ನು ಅರ್ಘ್ಯರೂಪದಲ್ಲಿ ಸಮರ್ಪಿಸಿದರು.ರಾಮಸೇತುವನ್ನು ಆಡಮ್ ಸೇತುವೆ ಎಂದೂ ಕರೆಯುತ್ತಾರೆ. 

ಇದನ್ನು ರಾವಣನ ವಿರುದ್ಧ ಯುದ್ಧದ ಉದ್ದೇಶದಿಂದ ಲಂಕೆಗೆ ಪ್ರಯಾಣಿಸಲು ರಾಮನು ವಾನರ ಸೇನೆಯ ಸಹಾಯದಿಂದ ನಿರ್ಮಿಸಿದನೆಂದು ಹೇಳಲಾಗುತ್ತದೆ.

ಕೋದಡರಾಮಸ್ವಾಮಿ ದೇವಸ್ಥಾನ ಮತ್ತು ಅರಿಚಲ್ ಮುನೈಗೆ ಭೇಟಿ ನೀಡಿದ ನಂತರ ಪ್ರಧಾನಿ ಮದುರೈ ತಲುಪಿ ಅಲ್ಲಿಂದ ವಿಮಾನದಲ್ಲಿ ನವದೆಹಲಿಗೆ ತೆರಳಿದರು.

ತಮಿಳುನಾಡಿನಿಂದ ಪವಿತ್ರ ಜಲದ ಕಲಶವನ್ನು ಮೋದಿ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ.

ಈ ವಾರದ ಆರಂಭದಿಂದ ಅಂತ್ಯದವರೆಗೆ ಅವರು ರಾಮಾಯಣ ಪ್ರಸ್ತುತತೆ ಹೊಂದಿರುವ ಆಂಧ್ರಪ್ರದೇಶದ ಲೇಪಾಕ್ಷಿ, ಕೇರಳದ ಗುರುವಾಯೂರು ಕೃಷ್ಣ, ತಮಿಳುನಾಡಿನ ರಾಮೇಶ್ವರ ಹಾಗೂ ಶ್ರೀರಂಗಂ ದೇವಾಲಯಗಳನ್ನು ಮೋದಿ ಸಂದರ್ಶಿಸಿದ್ದರು.

Share this article