ಟಿಯಾಂಜಿನ್: ಕಳೆದ ಏಪ್ರಿಲ್ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ಕೃತ್ಯವನ್ನು ಇಲ್ಲಿ ನಡೆದ ಶಾಂಘೈ ಸಹಕಾರ ಶೃಂಗ ಸಭೆ (ಎಸ್‌ಸಿಒ) ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ ಖಂಡಿಸಿದೆ. ಇದರಿಂದ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಂತಾಗಿದೆ.
ವಿಶೇಷವೆಂದರೆ ಕೇವಲ 2 ತಿಂಗಳ ಹಿಂದಷ್ಟೇ ಚೀನಾದಲ್ಲೇ ನಡೆದಿದ್ದ ಇದೇ ಕೂಟದ ರಕ್ಷಣಾ ಸಚಿವರ ಮಟ್ಟದ ಸಭೆಯ ಜಂಟಿ ಹೇಳಿಕೆಯಲ್ಲಿ ಪಹಲ್ಗಾಂ ವಿಷಯ ಪ್ರಸ್ತಾಪಿಸಲು ಚೀನಾ ನಿರಾಕರಿಸಿತ್ತು. ಹೀಗಾಗಿ ಆ ಸಭೆಯನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಬಹಿಷ್ಕರಿಸಿದ್ದರು. ಆದರೆ ನಂತರದ ದಿನಗಳಲ್ಲಿ ಭಾರತ- ಚೀನಾ ಸ್ನೇಹ ಸಂಬಂಧದಲ್ಲಿ ಭಾರೀ ಬದಲಾವಣೆಯಾಗಿದೆ ಹಾಗೂ ಭಾರತ ಕೂಡ ಪಹಲ್ಗಾಂ ಬಗ್ಗೆ ಶೃಂಗದಲ್ಲಿ ಪ್ರಸ್ತಾಪ ಆಗಲಿ ಎಂದು ಪಟ್ಟು ಹಿಡಿದಿತ್ತು.
ಅದರಂತೆ ಸೋಮವಾರ ಶೃಂಗದ ಜಂಟಿ ಹೇಳಿಕೆಯಲ್ಲಿ ದಾಳಿ ಖಂಡಿಸಲಾಗಿದ್ದು, ‘ಎಸ್‌ಸಿಒ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕಠಿಣ ನಿಲವು ಹೊಂದಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗಳು ಸ್ವೀಕಾರಾರ್ಹವಲ್ಲ. ಉಗ್ರತ್ವ ಎದುರಿಸಲು ಅಂತಾರಾಷ್ಟ್ರೀಯ ಸಮುದಾಯಗಳು ಮುಂದಾಗಬೇಕು’ ಎಂದು ತಿಳಿಸಲಾಗಿದೆ.
ಹೀಗಾಗಿ ಪಾಕ್ ಸದಸ್ಯನಾಗಿರುವ ಕೂಟದಲ್ಲೇ, ಅದರ ಅತ್ಯಾಪ್ತ ದೇಶವಾದ ಚೀನಾ ಉಗ್ರ ನಿಗ್ರಹದಲ್ಲಿ ಭಾರತಕ್ಕೆ ಹೀಗೆ ನೇರ ಬೆಂಬಲ ನೀಡಿರುವುದು ಸಾಬೀತಾಗಿದೆ. ಇದು ಭಾರತಕ್ಕೆ ಅತಿದೊಡ್ಡ ರಾಜತಾಂತ್ರಿಕ ಜಯವಾಗಿದೆ. ಮತ್ತೊಂದೆಡೆ ಪಾಕ್‌ಗೆ ಆದ ಅತಿದೊಡ್ಡ ಮುಖಭಂಗ ಎಂದು ಬಣ್ಣಿಸಲಾಗಿದೆ.
- ಇತ್ತೀಚೆಗೆ ಶಾಂಘೈ ಒಕ್ಕೂಟದ ವಿದೇಶಾಂಗ ಸಚಿವರ ಶೃಂಗ ನಡೆದಿತ್ತು
- ಆಗ ಪಹಲ್ಗಾಂ ಪ್ರಸ್ತಾಪ ಆಗದ ಕಾರಣ ಸಭೆ ಬಹಿಷ್ಕರಿಸಿದ್ದ ರಾಜನಾಥ್
- ಆದರೆ ಭಾರತದ ಪಟ್ಟಿನಿಂದ ಈ ಸಲ ಶೃಂಗದಲ್ಲಿ ಪಹಲ್ಗಾಂ ಪ್ರಸ್ತಾಪ
- ದಾಳಿಗೆ ಖಂಡನೆ. ಉಗ್ರವಾದ ಎದುರಿಸಲು ಒಟ್ಟಾಗಿ: ಶೃಂಗದ ಕರೆ