ಪಣಜಿ : ‘ಮೂರೂ ರಕ್ಷಣಾ ಪಡೆಗಳ ನಡುವಿನ ಅಸಾಧಾರಣ ಸಮನ್ವಯವು ಆಪರೇಷನ್ ಸಿಂದೂರದ ಸಮಯದಲ್ಲಿ ಪಾಕಿಸ್ತಾನವನ್ನು ಶರಣಾಗುವಂತೆ ಮಾಡಿತು. ಭದ್ರತಾ ಪಡೆಗಳ ಶೌರ್ಯ ಮತ್ತು ಬದ್ಧತೆಯಿಂದಾಗಿಯೇ ನಕ್ಸಲ್ ವಾದವನ್ನು ನಿರ್ಮೂಲನೆ ಮಾಡುವಲ್ಲಿ ದೇಶ ಮಹತ್ವದ ಮೈಲುಗಲ್ಲು ಸಾಧಿಸಿತು. ನಮ್ಮ ಯೋಧರ ಶೌರ್ಯ, ಅಚಲ ನಿರ್ಧಾರಕ್ಕೆ ಧನ್ಯವಾದಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಗೋವಾ - ಕಾರವಾರ ಕರಾವಳಿಯಲ್ಲಿ ಲಂಗರು ಹಾಕಿರುವ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ಸಿಬ್ಬಂದಿಗಳೊಂದಿಗೆ ದೀಪಾವಳಿ ಆಚರಿಸಿ ಅವರು ಮಾತನಾಡಿದರು.
‘ನೌಕಾಪಡೆಯಿಂದಾಗಿ ಆಪರೇಷನ್ ಸಿಂದೂರದ ವೇಳೆ ಪಾಕ್‌ಗೆ ನಿದ್ರೆಯಿಲ್ಲದ ರಾತ್ರಿ ಕಳೆಯುವಂತಾಯಿತು. ಮೂರೂ ಸೇನಾಪಡೆಗಳ ಹೋರಾಟದ ಕಾರಣ ಪಾಕ್ ಶರಣಾಗುವಂತಾಯಿತು’ ಎಂದು ಮೋದಿ ಶಹಬ್ಬಾಸ್‌ಗಿರಿ ನೀಡಿದರು.
‘ಜಾಗತಿಕ ಸ್ಥಿರತೆಯಲ್ಲಿ ಭಾರತೀಯ ನೌಕಾಪಡೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವಿಶ್ವದ ಶೇ.50ರಷ್ಟು ಕಂಟೇನರ್ ಹಡಗುಗಳು ಹಿಂದೂ ಮಹಾಸಾಗರದ ಮೂಲಕ ಹಾದು ಹೋಗುತ್ತವೆ. ಈ ಮಾರ್ಗವನ್ನು ಸುರಕ್ಷಿತವಾಗಿಡುವ ರಕ್ಷಕ ನಮ್ಮ ನೌಕಾಪಡೆ’ ಎಂದು ಅಭಿಮಾನ ವ್ಯಕ್ತಪಡಿಸಿದರು.
ಯೋಧರೇ ನನ್ನ ಕುಟುಂಬ:
‘ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಬಯಸುತ್ತಾರೆ. ನನಗೂ ನನ್ನ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಆಚರಿಸುವುದು ಅಭ್ಯಾಸವಾಗಿದೆ. ಅದಕ್ಕಾಗಿಯೇ ನಾನು ನಿಮ್ಮೆಲ್ಲರ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ. ನಾನು ಇಲ್ಲಿ ನನ್ನ ಕುಟುಂಬದೊಂದಿಗೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದೇನೆ. ಸಮುದ್ರದ ದೀರ್ಘ ರಾತ್ರಿ ಮತ್ತು ಸೂರ್ಯೋದಯ ನನ್ನ ದೀಪಾವಳಿಯನ್ನು ಹಲವು ಬಗೆಗಳಲ್ಲಿ ವಿಶೇಷವಾಗಿಸಿವೆ’ ಎಂದು ಮೋದಿ ನುಡಿದರು.
ವಿಕ್ರಾಂತ್ ಪರಿಶ್ರಮ, ಸಾಮರ್ಥ್ಯದ ಪ್ರತೀಕ:
‘ಐಎನ್ಎಸ್ ವಿಕ್ರಾಂತ್ ಅನ್ನು ರಾಷ್ಟ್ರಕ್ಕೆ ಹಸ್ತಾಂತರಿಸುವಾಗ, ನಾನು ವಿಕ್ರಾಂತ್ ವಿಶಾಲ, ಅಗಾಧ ಮತ್ತು ಭವ್ಯ ಎಂದು ವರ್ಣಿಸಿದ್ದೆ. ಇದು ಕೇವಲ ಯುದ್ಧನೌಕೆಯಲ್ಲ, 21ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಸಾಮರ್ಥ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಭಾರತವು ಸ್ವದೇಶಿ ಐಎನ್ಎಸ್ ವಿಕ್ರಾಂತ್ ಅನ್ನು ಸ್ವೀಕರಿಸಿದ ದಿನ ನಮ್ಮ ನೌಕಾಪಡೆಯು ವಸಾಹತುಶಾಹಿ ಅಧೀನತೆಯ ಗುರುತನ್ನು ತ್ಯಜಿಸಿತು. ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಣೆ ಪಡೆದು ನಮ್ಮ ನೌಕಾಪಡೆಗೆ ಹೊಸ ಧ್ವಜವನ್ನು ಅಳವಡಿಸಿಕೊಳ್ಳಲಾಗಿದೆ’ ಎಂದರು.
ನಕ್ಸಲ್ ಪ್ರದೇಶದಲ್ಲೂ ಇಂದು ದೀಪಾವಳಿ:
‘ಭಾರತವು ನಕ್ಸಲ್-ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿದೆ ಮತ್ತು ಈ ಪಿಡುಗಿನಿಂದ ಮುಕ್ತವಾದ 100 ಕ್ಕೂ ಹೆಚ್ಚು ಜಿಲ್ಲೆಗಳು ಈ ವರ್ಷ ದೀಪಾವಳಿಯನ್ನು ಗೌರವದಿಂದ ಆಚರಿಸಲಿವೆ. 1 ದಶಕದ ಹಿಂದೆ 125 ಜಿಲ್ಲೆಗಳಲ್ಲಿ ನಕ್ಸಲ್ ಪ್ರಭಾವ ಇತ್ತು. ಅದನ್ನು ಈಗ 11ಕ್ಕೆ ತಗ್ಗಿಸಲಾಗಿದೆ’ ಎಂದರು.
ಕಾರವಾರ ಕಡಲ ತೀರದಲ್ಲಿ ಮೋದಿ ದೀಪಾವಳಿ---ಯೋಧರ ಶೌರ್ಯ, ಬದ್ಧತೆಯಿಂದ ಯುದ್ಧದಲ್ಲಿ ಪಾಕ್ ಶರಣು: ಮೋದಿಐಎನ್‌ಎಸ್ ವಿಕ್ರಾಂತ್‌ನಲ್ಲಿ ಯೋಧರ ಜತೆ ಪ್ರಧಾನಿ ಹಬ್ಬದ ಸಂಭ್ರಮ
ಯೋಧರೇ ನನ್ನ ಕುಟುಂಬ
ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಬಯಸುತ್ತಾರೆ. ನನಗೂ ನನ್ನ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಆಚರಿಸುವುದು ಅಭ್ಯಾಸವಾಗಿದೆ. ಅದಕ್ಕಾಗಿಯೇ ನಾನು ನಿಮ್ಮೆಲ್ಲರ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ. ನಾನು ಇಲ್ಲಿ ನನ್ನ ಕುಟುಂಬದೊಂದಿಗೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದೇನೆ.
ನರೇಂದ್ರ ಮೋದಿ, ಪ್ರಧಾನಿ