ದೇಶದ ಮೊತ್ತಮೊದಲ ರಿಂಗ್‌ ಮೆಟ್ರೋಗೆ ಮೋದಿ ಚಾಲನೆ

KannadaprabhaNewsNetwork |  
Published : Mar 09, 2026, 01:45 AM IST
ಮೋದಿ | Kannada Prabha

ಸಾರಾಂಶ

ದೇಶದ ಮೊದಲ ರಿಂಗ್‌ ಮೆಟ್ರೋ ಸೇರಿದಂತೆ ದೆಹಲಿ ಮೆಟ್ರೋದ 2 ಹೊಸ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಚಾಲನೆ ನೀಡಿದರು.

ದೆಹಲಿ ಮೆಟ್ರೋದ 2 ಹೊಸ ಕಾರಿಡಾರ್‌ ಉದ್ಘಾಟನೆ

ನವದೆಹಲಿ: ದೇಶದ ಮೊದಲ ರಿಂಗ್‌ ಮೆಟ್ರೋ ಸೇರಿದಂತೆ ದೆಹಲಿ ಮೆಟ್ರೋದ 2 ಹೊಸ ಕಾರಿಡಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಚಾಲನೆ ನೀಡಿದರು.

ಗುಲಾಬಿ ಮಾರ್ಗದ ಮಜ್ಲಿಸ್ ಪಾರ್ಕ್-ಮೌಜಪುರ್-ಬಾಬರ್‌ಪುರ ಕಾರಿಡಾರ್ ಅನ್ನು ಹೊಸತಾಗಿ 12.3 ಕಿ.ಮೀ.ಗಳಷ್ಟು ವಿಸ್ತರಣೆ ಮಾಡಲಾಗಿದೆ. ಇದು ಸುಮಾರು 71.56 ಕಿ.ಮೀ. ಉದ್ದದ ವೃತ್ತವಾಗಿ ಮಾರ್ಪಟ್ಟಿದ್ದು, ಭಾರತದ ಮೊದಲ ರಿಂಗ್ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದಿದೆ. ಅಂದರೆ ಇಡೀ ನಗರವನ್ನು ಮೆಟ್ರೋ ಮಾರ್ಗದ ಮೂಲಕ ಒಂದು ಸುತ್ತು ಹಾಕಬಹುದು.

ಇದಲ್ಲದೆ, ದೀಪಾಲಿ ಚೌಕದಿಂದ ಮಜ್ಲಿಸ್ ಪಾರ್ಕ್ ಅನ್ನು ಸಂಪರ್ಕಿಸುವ ನೇರಳೆ ಮಾರ್ಗವನ್ನು ಸುಮಾರು 9.9 ಕಿ.ಮೀ. ವಿಸ್ತರಿಸಲಾಗಿದೆ. ಇದು ಈಗ 49 ಕಿ.ಮೀ. ಉದ್ದದ ಮಾರ್ಗವಾಗಿ ಬದಲಾಗಿದೆ.

==

1000 ಡ್ರಗ್ಸ್‌ ಪ್ಯಾಕ್‌ ಮಾರಿದ್ದ ಕಲ್ಕಿ ತಂಡ ದೆಹಲಿಯಲ್ಲಿ ಅರೆಸ್ಟ್‌

ನವದೆಹಲಿ: ಕರ್ನಾಟಕ ಸೇರಿದಂತೆ ದೇಶವ್ಯಾಪಿ ಹಲವು ರಾಜ್ಯಗಳಿಗೆ ಡಾರ್ಕ್‌ನೆಟ್ ಮೂಲಕ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಬೃಹತ್‌ ಜಾಲವನ್ನು ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಭೇದಿಸಿದ್ದಾರೆ. ಈ ಜಾಲ 2025ರಿಂದ ಇದುವರೆಗೆ ಭಾರತದಾದ್ಯಂತ 1,000ಕ್ಕಿಂತ ಹೆಚ್ಚು ಮಾದಕ ದ್ರವ್ಯಗಳ ಪೊಟ್ಟಣಗಳನ್ನು ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.ಖದೀಮರು ತಮ್ಮ ತಂಡಕ್ಕೆ ‘ಕಲ್ಕಿ’ ಎಂದು ಹೆಸರಿಟ್ಟುಕೊಂಡಿದ್ದರು. ಇದರ ನೇತೃತ್ವ ವಹಿಸಿದ್ದ ಅನುರಾಗ್ ಠಾಕೂರ್ ಮತ್ತು ವಿಕಾಸ್ ರಾಠಿ ತಿಹಾರ್ ಜೈಲಿನಲ್ಲಿ ಭೇಟಿಯಾಗಿ ಅಲ್ಲಿಯೇ ದಂಧೆ ಆರಂಭಿಸಿದ್ದರು. ಡ್ರಗ್ಸ್‌ ಅನ್ನು ನೆದರ್ಲೆಂಡ್ಸ್‌, ಪೋಲೆಂಡ್ ಮತ್ತು ಜರ್ಮನಿಯ ವಿತರಕರಿಂದ ಪಡೆದು, ಭಾರತದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬಂಧಿತರಿಂದ 2,338 ಎಲ್‌ಎಸ್‌ಡಿ ಬ್ಲಾಟರ್‌ಗಳು, 160 ಎಂಡಿಎಂಎ ಮಾತ್ರೆಗಳು, 3.6 ಕೆ.ಜಿ ದ್ರವ ಎಂಡಿಎಂಎ, 73.6 ಗ್ರಾಂ ಚರಸ್ ಮತ್ತು 3.6 ಗ್ರಾಂ ಆಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ.

==

ಇಂದಿನಿಂದ ಸಂಸತ್‌ ಅಧಿವೇಶನ 2ನೇ ಭಾಗ

ಸ್ಪೀಕರ್‌ ವಿರುದ್ಧ ಅವಿಶ್ವಾಸ ಮಂಡನೆಗೆ ವಿಪಕ್ಷ ಸಜ್ಜು

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಹಂತ ಸೋಮವಾರದಿಂದ ಆರಂಭವಾಗಲಿದ್ದು, ಏ.2ರಂದು ಮುಕ್ತಾಯವಾಗಲಿದೆ.

ಸದನದಲ್ಲಿ ಪಕ್ಷಪಾತಿ ಧೋರಣೆ ತಳೆದಿದ್ದಾರೆಂದು ಆರೋಪಿಸಿ ವಿಪಕ್ಷಗಳು ಸ್ಪೀಕರ್‌ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಜ್ಜಾಗಿವೆ. ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾರತದ ನಿಲುವು, ರಷ್ಯಾ ತೈಲ ಖರೀದಿಯಲ್ಲಿ ಅಮೆರಿಕ ಹಸ್ತಕ್ಷೇಪ, ಮತಪಟ್ಟಿ ವಿಶೇಷ ಪರಿಷ್ಕರಣೆ ಸೇರಿ ಹಲವು ವಿಚಾರಗಳನ್ನು ಕೈಗೆತ್ತಿಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ನಿರೀಕ್ಷೆಯಿದೆ. ಇತ್ತ ಸರ್ಕಾರ, ಟಿಎಂಸಿ ಆಡಳಿತದಿಂದ ರಾಷ್ಟ್ರಪತಿ ಮುರ್ಮು ಅವರಿಗೆ ಆದ ಅವಮಾನವನ್ನು ಪ್ರತ್ಯಸ್ತ್ರವಾಗಿ ಬಳಸುವ ಸಾಧ್ಯತೆಯಿದೆ. ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಈ ಅಧಿವೇಶನದಲ್ಲಿ ಜಾರಿಗೆ ತರುವ ನಿರೀಕ್ಷೆಯಿದೆ.ಅಧಿವೇಶನದ ಮೊದಲ ಹಂತ ಜ.28ರಿಂದ ಫೆ.13ರವರೆಗೆ ನಡೆದಿತ್ತು.

==

ಬಾಂಗ್ಲಾದಲ್ಲಿ ಮತ್ತೆ ಹಿಂದೂ ಮೇಲೆ ದಾಳಿ: ಪೂಜೆ ವೇಳೆ ಬಾಂಬ್‌, ಅರ್ಚಕ ಗಂಭೀರ

ಢಾಕಾ: ಕೆಲ ಕಾಲ ಶಾಂತವಾಗಿದ್ದ ಬಾಂಗ್ಲಾದೇಶದಲ್ಲಿ ಶನಿವಾರ ಮತ್ತೆ ಹಿಂದೂಗಳ ಮೇಲೆ ದಾಳಿ ನಡೆದಿದೆ. ಇಲ್ಲಿನ ಕೂಮಿಲ್ಲಾ ಎಂಬಲ್ಲಿ ಹಿಂದೂಗಳು ಪೂಜೆಗೆಂದು ಸೇರಿದ್ದ ವೇಳೆ ದುಷ್ಕರ್ಮಿಗಳು ಬಾಂಬ್‌ ಎಸೆದಿದ್ದು, ಅರ್ಚಕರು ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಅರ್ಚಕ ಕೇಶವ್‌ ಚಕ್ರವರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಭೆಯ ಮೇಲೆ ಕಿರಾತರು ಬಾಂಬ್‌ ಎಸೆಯುತ್ತಿರುವುದು ಹಾಗೂ ಅದರ ಪರಿಣಾಮ ಭಯದ ವಾತಾವರಣ ಸೃಷ್ಟಿಯಾಗಿರುವುದು ನೋಡಬಹುದು. ಪ್ರಧಾನಿಯಾಗಿದ್ದ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲಿನ ದಾಳಿಗಳು ಪ್ರಾರಂಭವಾಗಿತ್ತು. ಕಳೆದ ಡಿಸೆಂಬರ್‌ ಹಾಗೂ ಈ ವರ್ಷದ ಜನವರಿಯಲ್ಲಿ 15 ಹಿಂದೂಗಳ ಹತ್ಯೆ ಘಟನೆ ವರದಿಯಾಗಿತ್ತು.

==

ನಾಗ್ಪುರದಲ್ಲಿ ತಯಾರಾದ ರೋಬೊ ಯೋಧರು ಶೀಘ್ರ ಗಡಿಗೆ ನಿಯೋಜನೆ: ಸಿಎಂ

ತಯಾರಿಕಾ ಘಟಕಕ್ಕೆ ಫಡ್ನವೀಸ್‌ ಭೂಮಿಪೂಜೆ

ಚೀನಾ ರೀತಿ ಭಾರತದಲ್ಲೂ ರೋಬೊ ತಯಾರಿ

ನಾಗ್ಪುರ: ‘ಚೀನಾದಂತೆಯೇ ಭಾರತವೂ ಮುಂಬರುವ ದಿನಗಳಲ್ಲಿ ಸಿಯಾಚಿನ್‌ನಂತಹ ಶೀತಪ್ರದೇಶಗಳಲ್ಲಿನ ಗಡಿಯಲ್ಲಿ ರೋಬೋಟ್ ಸೈನಿಕರನ್ನು ನಿಯೋಜಿಸಲಿದೆ. ಇವುಗಳನ್ನು ನಾಗ್ಪುರದಲ್ಲಿ ತಯಾರಿಸಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.ನಾಗ್ಪುರ ಮೂಲದ ಖಾಸಗಿ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಸೋಲಾರ್ ಡಿಫೆನ್ಸ್ ಆ್ಯಂಡ್‌ ಏರೋಸ್ಪೇಸ್ ಲಿ. ಪ್ರಸ್ತಾಪಿಸಿರುವ ಯುಎವಿ ಮತ್ತು ರೋಬೋಟ್ ಉತ್ಪಾದನಾ ಘಟಕದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ರಾಜ್ಯದ ರಕ್ಷಣಾ ಮತ್ತು ವಾಯುಯಾನ ನೀತಿಯಡಿ ಪ್ರಸ್ತಾಪಿಸಲಾದ ಮೊದಲ ಪ್ರಮುಖ ಹೂಡಿಕೆ. ಈ ಕಂಪನಿ ರೋಬೋಟ್‌ಗಳನ್ನು ತಯಾರಿಸಲಿದ್ದು, ಇವು ಮಾನವ ಸೈನಿಕರ ರೀತಿಯಲ್ಲೇ ಕೆಲಸ ಮಾಡಲಿವೆ. ಈ ಘಟಕದ ನಿರ್ಮಾಣಕ್ಕೆ 12,000 ಕೋಟಿ ರು. ಹೂಡಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರದಿಂದ ಜಿ ರಾಮ್‌ ಜಿ ಲೋಗೋ ವಿನ್ಯಾಸ ಸ್ಪರ್ಧೆ
ಅಮೆರಿಕ- ಇಸ್ರೇಲ್‌ನಿಂದ ತೈಲ ಡಿಪೋಗೇ ಬಾಂಬ್‌ಇರಾನ್‌ನಲ್ಲಿ ಬೆಂಕಿಯ ನದಿ!