ಉಕ್ರೇನ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭೇಟಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬೋಧಿಸಿದ ಶಾಂತಿ ಮಂತ್ರ ಪಠಣ

KannadaprabhaNewsNetwork | Updated : Aug 24 2024, 05:44 AM IST

ಸಾರಾಂಶ

ರಷ್ಯಾ ಜತೆಗಿನ ಯುದ್ಧದ ನೆರಳಿನಲ್ಲಿರುವ ಉಕ್ರೇನ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಐತಿಹಾಸಿಕ ಭೇಟಿ ನೀಡಿದರು ಹಾಗೂ ಉಕ್ರೇನಿ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಜತೆ ಮಾತುಕತೆ ಮಾತುಕತೆ ನಡೆಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬೋಧಿಸಿದ ಶಾಂತಿ ಮಂತ್ರವನ್ನು ಪಠಿಸಿದರು.

ಕೀವ್‌ (ಉಕ್ರೇನ್‌): ರಷ್ಯಾ ಜತೆಗಿನ ಯುದ್ಧದ ನೆರಳಿನಲ್ಲಿರುವ ಉಕ್ರೇನ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಐತಿಹಾಸಿಕ ಭೇಟಿ ನೀಡಿದರು ಹಾಗೂ ಉಕ್ರೇನಿ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಜತೆ ಮಾತುಕತೆ ಮಾತುಕತೆ ನಡೆಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬೋಧಿಸಿದ ಶಾಂತಿ ಮಂತ್ರವನ್ನು ಪಠಿಸಿದರು.

1991ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಇತ್ತೀಚೆಗೆ ಉಕ್ರೇನ್‌ ಮೇಲೆ ಯುದ್ಧ ಸಾರಿದ್ದ ರಷ್ಯಾಗೆ ಮೋದಿ ಭೇಟಿ ನೀಡಿ, ‘ಎಲ್ಲ ಸಮಸ್ಯೆಗೂ ಯುದ್ಧ ಪರಿಹಾರವಲ್ಲ’ ಎಂದು ಅಲ್ಲಿನ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ನೇರವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಉಕ್ರೇನ್‌ಗೆ ಮೊದಲ ಬಾರಿ ಭೇಟಿ ನೀಡಿದ್ದಾರೆ.ಆತ್ಮೀಯ ಸ್ವಾಗತ, ಜೆಲೆನ್‌ಸ್ಕಿ ಅಪ್ಪುಗೆ:

ಪೋಲೆಂಡ್‌ನಿಂದ ಶುಕ್ರವಾರ ಬೆಳಗ್ಗೆ ಕೀವ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ಹಯಾತ್ ಹೋಟೆಲ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಆತ್ಮೀಯ ಸ್ವಾಗತವನ್ನು ನೀಡಿದರು.

ಬಳಿಕ ಕೀವ್‌ನ ನ್ಯಾಷನಲ್ ಮ್ಯೂಸಿಯಂ ಆಫ್ ಹಿಸ್ಟರಿಯಲ್ಲಿ ಏರ್ಪಡಿಸಿರುವ, ಯುದ್ಧದಲ್ಲಿ ಮಡಿದ ಮಕ್ಕಳ ಕುರಿತ ಪ್ರದರ್ಶನಕ್ಕೆ ಮೋದಿ ಭೇಟಿ ನೀಡಿದರು. ಅಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರು ಮೋದಿಯವರನ್ನು ದುಃಖ ಭಾವದಲ್ಲೇ ಆತ್ಮೀಯವಾಗಿ ಅಪ್ಪಿಕೊಂಡು ಹಸ್ತಲಾಘವ ಮಾಡಿದರು.ಈ ವೇಳೆ ಜೆಲೆನ್‌ಸ್ಕಿ ಮಕ್ಕಳ ವಸ್ತುಪ್ರದರ್ಶನ ನೋಡಿದ ಮೋದಿ, ಯುದ್ಧದಲ್ಲಿ ಮಕ್ಕಳು ಪಟ್ಟ ಬವಣೆಯ ನಿರೂಪಣೆ ನೋಡಿ ಮಮ್ಮಲಮರುಗಿದರು. ಮೋದಿ ಹಾಗೂ ಜೆಲೆನ್‌ಸ್ಕಿಯ ಮುಖದಲ್ಲಿ ಶೋಕಭಾವ ಕಂಡುಬಂತು. ಕಿರಿ ಜೀವಗಳ ದುರಂತದ ಅಂತ್ಯಕ್ಕೆ ದುಃಖ ವ್ಯಕ್ತಪಡಿಸಿದ ಮೋದಿ, ಅವರ ಗೌರವಾರ್ಥವಾಗಿ ಆಟಿಕೆ ಇರಿಸಿ ನಮನ ಸಲ್ಲಿಸಿದರು.

==

ಗಾಂಧಿ ಪ್ರತಿಮೆಗೂ ನಮನ

ಈ ನಡುವೆ ಕೀವ್‌ನ ‘ಓಯಸಿಸ್ ಆಫ್ ಪೀಸ್‌’ ಪಾರ್ಕ್‌ಗೆ ಭೇಟಿ ನೀಡಿ ಅಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ನಮನ ಸಲ್ಲಿಸಿದರು. ಈ ವೇಳೆ ಸಾಮರಸ್ಯದ ಸಮಾಜವನ್ನು ನಿರ್ಮಿಸುವಲ್ಲಿ ಗಾಂಧಿಯವರ ಶಾಂತಿಯ ಸಂದೇಶದ ಕಾಲಾತೀತ ಪ್ರಸ್ತುತತೆಯನ್ನು ಮೋದಿ ಒತ್ತಿ ಹೇಳಿದರು ಮತ್ತು ‘ಗಾಂಧೀಜಿ ತೋರಿಸಿದ ಮಾರ್ಗವು ಇಂದಿನ ಜಾಗತಿಕ ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ’ ಎಂದು ಒತ್ತಿ ಹೇಳಿದರು. ಈ ಮೂಲಕ ಗಾಂಧಿ ತೋರಿಸಿದ ಶಾಂತಿ ಮಾರ್ಗದ ಮೂಲಕ ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಬೇಕು ಎಂದು ಪರೋಕ್ಷವಾಗಿ ಮನವಿ ಮಾಡಿದರು.

Share this article