ನವದೆಹಲಿ: ಬಾಗಲಕೋಟೆಯ ಜನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಕೊಂಡಾಡಿದ್ದಾರೆ.
‘ನಮ್ಮ ದೇಶದಲ್ಲಿ ಸಂಗೀತ ಹಾಗೂ ನೃತ್ಯದ ಮೂಲಕ ತಮ್ಮ ಸಂಸ್ಕೃತಿ ಹಾಗೂ ಭಾಷೆಯನ್ನು ಸಂರಕ್ಷಿಸುವಲ್ಲಿ ತೊಡಗಿಕೊಂಡಿರುವ ಅನೇಕ ಸಾಧಕರಿದ್ದಾರೆ. ಕರ್ನಾಟಕದ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಈ ವಿಷಯದಲ್ಲಿ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ.
ಅವರು 1000ಕ್ಕೂ ಹೆಚ್ಚು ಗೋಂಧಳಿ ಗೀತೆಗಳನ್ನು ಹಾಡಿರುವುದಲ್ಲದೆ ಈ ಭಾಷೆಯಲ್ಲಿ ಸಾಕಷ್ಟು ಕತೆಗಳನ್ನು ಹೇಳಿದ್ದಾರೆ. ಜೊತೆಗೆ, ಯಾವುದೇ ಶುಲ್ಕ ತೆಗೆದುಕೊಳ್ಳದೆ ನೂರಾರು ವಿದ್ಯಾರ್ಥಿಗಳಿಗೆ ಇದರ ತರಬೇತಿ ನೀಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
ಭಾರತದಲ್ಲಿ ಇಂತಹ ಉತ್ಸಾಹಿ ಜನರಿಗೆ ಯಾವುದೇ ಕೊರತೆಯಿಲ್ಲ. ಇಂಥವರಿಂದ ಎಲ್ಲರೂ ಸ್ಫೂರ್ತಿ ಪಡೆಯಬೇಕು. ನೀವೂ ಕೂಡ ಹೊಸತೇನನ್ನಾದರೂ ಮಾಡಲು ಪ್ರಯತ್ನಿಸಿ. ಅದರಿಂದ ತೃಪ್ತಿ ಸಿಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಹೊಗಳಿದ್ದು ಪ್ರಶಸ್ತಿಗಿಂತ ಖುಷಿ: 50-60 ಪ್ರಶಸ್ತಿ ಬಂದಿದ್ದಕ್ಕಿಂತಲೂ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದು ಹೆಚ್ಚು ಖುಷಿ ನೀಡಿದೆ.- ವೆಂಕಪ್ಪ ಸುಗತೇಕರ್, ಗೊಂದಳಿ ಕಲಾವಿದ