ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ

Published : Sep 11, 2025, 10:57 AM IST
PM Modi Marks RSS Chief Mohan Bhagwat’s 75th Birthday with Heartfelt Note

ಸಾರಾಂಶ

ಭಾಗವತ್ ಜೀ ಅವರ ಅವಧಿ ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಪರಿವರ್ತನಶೀಲ ಅವಧಿ. ಅವರು ‘ಏಕ ಭಾರತ - ಶ್ರೇಷ್ಠ ಭಾರತ’ದ ಪ್ರಬಲ ಪ್ರತಿಪಾದಕರು. ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಲ್ಲಿ ದೃಢ ನಂಬಿಕೆಯುಳ್ಳವರು. ಭಾರತಮಾತೆಯ ಸೇವೆಗಾಗಿ ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನ ಪ್ರಾಪ್ತಿಯಾಗಲಿ.

*ಡಾ. ಮೋಹನ್‌ ಭಾಗವತ್ 75ನೇ ಜನ್ಮದಿನ  

ನರೇಂದ್ರ ಮೋದಿ

ಪ್ರಧಾನಮಂತ್ರಿ

 ಇಂದು ಸೆಪ್ಟೆಂಬರ್ 11. ‘ವಸುಧೈವ ಕುಟುಂಬಕಂ’ ತತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆ, ಸಾಮರಸ್ಯ ಮತ್ತು ಸಹೋದರತ್ವಕ್ಕಾಗಿ ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ (ಆರ್‌ಎಸ್‌ಎಸ್‌) ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ‘ಪೂಜನೀಯ ಸರಸಂಘಚಾಲಕ್’ ಎಂದು ಕರೆಯುತ್ತಾರೆ. ಹೌದು, ನಾನು ಶ್ರೀ ಮೋಹನ್ ಭಾಗವತ್ ಜೀ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರ 75ನೇ ಹುಟ್ಟುಹಬ್ಬವು ಕಾಕತಾಳೀಯವಾಗಿ, ಆರ್‌ಎಸ್‌ಎಸ್‌ ಶತಮಾನೋತ್ಸವ ವರ್ಷದಲ್ಲೇ ಬಂದಿದೆ. ನಾನು ಅವರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಅವರ ಸುದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ.

ತಂದೆಯಿಂದಲೇ ಪ್ರೇರಣೆ

 ಮೋಹನ್ ಜೀಯವರ ಕುಟುಂಬದೊಂದಿಗೆ ನನಗೆ ಗಾಢವಾದ ಬಾಂಧವ್ಯವಿದೆ. ಅವರ ತಂದೆ ದಿ. ಮಧುಕರ್ ರಾವ್ ಭಾಗವತ್ ಜೀ ಅವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿತು. ನನ್ನ ‘ಜ್ಯೋತಿಪುಂಜ್’ ಪುಸ್ತಕದಲ್ಲಿ ಅವರ ಬಗ್ಗೆ ವಿವರವಾಗಿ ಬರೆದಿದ್ದೇನೆ. ಅವರು ಗುಜರಾತಿನಾದ್ಯಂತ ಆರ್‌ಎಸ್‌ಎಸ್‌ ಅನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರನಿರ್ಮಾಣದ ಬಗ್ಗೆ ಮಧುಕರ್ ರಾವ್ ಜೀಯವರ ಉತ್ಸಾಹ ಎಷ್ಟು ಆಳವಾಗಿತ್ತೆಂದರೆ ಅವರ ಮಗ ಮೋಹನ್ ಜೀಯವರನ್ನು ಭಾರತದ ಪುನರುತ್ಥಾನಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದರು. ಮೋಹನ್ ಜೀ 1970ರ ದಶಕದ ಮಧ್ಯಭಾಗದಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರಾದರು.  ‘ಪ್ರಚಾರಕ’ ಎಂಬ ಪದವನ್ನು ಕೇಳಿದ ತಕ್ಷಣ, ಅದು ಕೇವಲ ಪ್ರಚಾರ ಮಾಡುವ ಅಥವಾ ವಿಚಾರಗಳನ್ನು ಪ್ರಚುರಪಡಿಸುವ ವ್ಯಕ್ತಿ ಎಂಬ ತಪ್ಪುಕಲ್ಪನೆ ಬರಬಹುದು. ಆದರೆ ಆರ್‌ಎಸ್‌ಎಸ್‌ ಕಾರ್ಯವೈಖರಿಯ ಬಗ್ಗೆ ತಿಳಿದಿರುವವರಿಗೆ ಪ್ರಚಾರಕ ಪರಂಪರೆಯು ಸಂಘಟನಾ ಕಾರ್ಯದ ಮೂಲ ಎಂಬುದು ತಿಳಿದಿದೆ.  

ಕಳೆದ ನೂರು ವರ್ಷಗಳಲ್ಲಿ, ಸಾವಿರಾರು ಯುವಜನರು ದೇಶಭಕ್ತಿಯಿಂದ ಪ್ರೇರಿತರಾಗಿ ತಮ್ಮ ಮನೆ ಮತ್ತು ಕುಟುಂಬಗಳನ್ನು ತೊರೆದು ಪ್ರಚಾರಕರಾಗಿದ್ದಾರೆ. ‘ಭಾರತ ಮೊದಲುʼ ಎಂಬ ಧ್ಯೇಯವನ್ನು ನನಸಾಗಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಅವರ ಆರಂಭಿಕ ವರ್ಷಗಳು ಭಾರತೀಯ ಇತಿಹಾಸದಲ್ಲಿನ ಅತ್ಯಂತ ಕರಾಳ ಅವಧಿಯಾಗಿದ್ದವು. ಆಗಿನ ಕಾಂಗ್ರೆಸ್ ಸರ್ಕಾರ ಕಠಿಣ ತುರ್ತುಪರಿಸ್ಥಿತಿಯನ್ನು ಹೇರಿತ್ತು. ಪ್ರಜಾಪ್ರಭುತ್ವ ತತ್ವಗಳನ್ನು ಗೌರವಿಸುವ ಮತ್ತು ಭಾರತ ಅಭಿವೃದ್ಧಿ ಹೊಂದಬೇಕೆಂದು ಬಯಸುವ ಯಾರಾದರೂ ತುರ್ತುಪರಿಸ್ಥಿತಿ ವಿರೋಧಿ ಚಳವಳಿಗೆ ಸೇರುವುದು ಸಹಜ.

 ಮೋಹನ್ ಜೀ ಅದನ್ನೇ ಮಾಡಿದರು. ಮಹಾರಾಷ್ಟ್ರದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ, ವಿಶೇಷವಾಗಿ ವಿದರ್ಭದಲ್ಲಿ ವ್ಯಾಪಕವಾಗಿ ಕೆಲಸ ಮಾಡಿದರು. ಮುಂದೆ ಆರ್‌ಎಸ್‌ಎಸ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಪ್ರತಿಯೊಂದು ಜವಾಬ್ದಾರಿಯನ್ನೂ ಬಹಳ ದಕ್ಷತೆಯಿಂದ ನಿರ್ವಹಿಸಿದರು. 1990ರ ದಶಕದಲ್ಲಿ ಅಖಿಲ ಭಾರತೀಯ ಶಾರೀರಿಕ್ ಪ್ರಮುಖ್ ಆಗಿ ಮೋಹನ್ ಜೀಯವರ ಅಧಿಕಾರಾವಧಿಯನ್ನು ಇನ್ನೂ ಅನೇಕ ಸ್ವಯಂಸೇವಕರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ, ಅವರು ಬಿಹಾರದ ಹಳ್ಳಿಗಳಲ್ಲೇ ಸಾಕಷ್ಟು ಸಮಯ ಕೆಲಸ ಮಾಡಿದರು. ಆ ಅನುಭವಗಳು ತಳಮಟ್ಟದ ಸಮಸ್ಯೆಗಳಿಗೆ ಅವರನ್ನು ಮತ್ತಷ್ಟು ಹತ್ತಿರವಾಗಿಸಿದವು. 2000ರಲ್ಲಿ ‘ಸರಕಾರ್ಯವಾಹ’ರಾದರು. ಅಲ್ಲಿಯೂ ತಮ್ಮ ವಿಶಿಷ್ಟ ಕಾರ್ಯಶೈಲಿಯನ್ನು ತೋರಿಸಿದರು. 2009ರಿಂದ ‘ಸರಸಂಘಚಾಲಕ್’ ಆಗಿ ಇನ್ನೂ ಹೆಚ್ಚಿನ ಚೈತನ್ಯದಿಂದ ಕೆಲಸ ಮಾಡುತ್ತಿದ್ದಾರೆ. 

ಮೋಹನ್ ಜೀ ಕಾರ್ಯಶೈಲಿಯ 2 ವಿಶಿಷ್ಟತೆಗಳ ಬಗ್ಗೆ ಹೇಳುವುದಾದರೆ, ಅವು ಸ್ಥಿರತೆ ಮತ್ತು ಹೊಂದಾಣಿಕೆ. ಅವರು ಅತ್ಯಂತ ಸಂಕೀರ್ಣ ಸಂದರ್ಭಗಳಲ್ಲೂ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಮೂಲಸಿದ್ಧಾಂತದ ಮೇಲೆ ರಾಜಿ ಮಾಡಿಕೊಳ್ಳದೆ, ಸಮಾಜದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಿದ್ದಾರೆ. ಹೆಚ್ಚು ಹೆಚ್ಚು ಯುವಜನರನ್ನು ಸಂಘಪರಿವಾರಕ್ಕೆ ತರುವತ್ತ ಗಮನಹರಿಸಿದ್ದಾರೆ. ಭಾಗವತ್ ಜೀ ಅವರ ಅವಧಿಯನ್ನು ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಪರಿವರ್ತನಶೀಲ ಅವಧಿ ಎನ್ನಬಹುದು. ಸಮವಸ್ತ್ರದಲ್ಲಿನ ಬದಲಾವಣೆಗಳಿಂದ ಹಿಡಿದು ಶಿಕ್ಷಾ ವರ್ಗಗಳಲ್ಲಿನ (ತರಬೇತಿ ಶಿಬಿರ) ಬದಲಾವಣೆಗಳವರೆಗೆ, ಅವರ ನಾಯಕತ್ವದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾದವು. ಕೋವಿಡ್ ಅವಧಿಯಲ್ಲಿ ಮೋಹನ್ ಜೀ ಅವರ ಪ್ರಯತ್ನಗಳನ್ನು ನಾನು ವಿಶೇಷವಾಗಿ ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ, ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ಮುಂದುವರಿಸುವುದು ಸವಾಲಿನ ಸಂಗತಿಯಾಗಿತ್ತು. ಆದರೆ ಸ್ವಯಂಸೇವಕರು ಸಂಕಷ್ಟದಲ್ಲಿರುವವರನ್ನು ತಲುಪಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದರು. ಅನೇಕ ಸ್ಥಳಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದರು. ಅನೇಕ ಶ್ರಮಶೀಲ ಸ್ವಯಂಸೇವಕರನ್ನು ಕಳೆದುಕೊಂಡರೂ ಮೋಹನ್ ಜೀಯವರ ದೃಢಸಂಕಲ್ಪ ಬದಲಾಗಲಿಲ್ಲ.

 ಈ ವರ್ಷದ ಆರಂಭದಲ್ಲಿ, ನಾಗಪುರದಲ್ಲಿ ಮಾಧವ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಸಮಾರಂಭದಲ್ಲಿ, ‘ಆರ್‌ಎಸ್‌ಎಸ್‌ ನಮ್ಮ ರಾಷ್ಟ್ರೀಯ ಸಂಸ್ಕೃತಿ ಮತ್ತು ಸಾಮೂಹಿಕ ಪ್ರಜ್ಞೆಯನ್ನು ಚೈತನ್ಯಗೊಳಿಸುವ ಶಾಶ್ವತ ಆಲದ ಮರವಿದ್ದಂತೆ’ ಎಂದು ನಾನು ಹೇಳಿದ್ದೆ. ಈ ಆಲದ ಮರದ ಬೇರುಗಳು ಆಳ ಮತ್ತು ಬಲವಾಗಿವೆ. ಏಕೆಂದರೆ ಅವು ಮೌಲ್ಯಗಳಲ್ಲಿ ಬೇರೂರಿವೆ. ಮೋಹನ್ ಭಾಗವತ್ ಜೀ ಈ ಮೌಲ್ಯಗಳನ್ನು ಪೋಷಿಸಲು ಮತ್ತು ಮುನ್ನಡೆಸಲು ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಮೋಹನ್ ಜೀ ಅವರ ವ್ಯಕ್ತಿತ್ವದ ಪ್ರಶಂಸನೀಯ ಗುಣಗಳೆಂದರೆ, ಅವರ ಮೃದುಮಾತಿನ ಸ್ವಭಾವ ಮತ್ತು ಅಸಾಧಾರಣವಾದ ಆಲಿಸುವ ಸಾಮರ್ಥ್ಯ. ಈ ಗುಣಗಳು ಅವರ ವ್ಯಕ್ತಿತ್ವ ಮತ್ತು ನಾಯಕತ್ವಕ್ಕೆ ಸೂಕ್ಷ್ಮತೆ ಮತ್ತು ಘನತೆಯನ್ನು ತಂದಿವೆ. ವಿವಿಧ ಜನಾಂದೋಲನಗಳಲ್ಲಿ ಅವರ ತೀವ್ರ ಆಸಕ್ತಿಯ ಬಗ್ಗೆಯೂ ಬರೆಯಲು ಇಚ್ಛಿಸುತ್ತೇನೆ. ಸ್ವಚ್ಛ ಭಾರತ ಮಿಷನ್‌ನಿಂದ ಹಿಡಿದು ಬೇಟಿ ಬಚಾವೋ-ಬೇಟಿ ಪಡಾವೋವರೆಗೆ, ಅವರು ಇಡೀ ಸಂಘ ಪರಿವಾರಕ್ಕೆ ಈ ಆಂದೋಲನಗಳಿಗೆ ಶಕ್ತಿ ನೀಡುವಂತೆ ಕರೆ ನೀಡಿದ್ದಾರೆ. 

ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸಲು, ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯಗಳು, ಪರಿಸರ ಜಾಗೃತಿ, ರಾಷ್ಟ್ರೀಯ ಅಸ್ಮಿತೆ ಮತ್ತು ನಾಗರಿಕ ಕರ್ತವ್ಯಗಳೆಂಬ ‘ಪಂಚ ಪರಿವರ್ತನೆ’ಗೆ ಕರೆ ನೀಡಿದ್ದಾರೆ. ಪ್ರತಿಯೊಬ್ಬ ಸ್ವಯಂಸೇವಕ ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರದ ಕನಸು ಕಾಣುತ್ತಾನೆ. ಈ ಕನಸನ್ನು ನನಸಾಗಿಸಲು, ಸ್ಪಷ್ಟ ದೃಷ್ಟಿಕೋನ ಮತ್ತು ನಿರ್ಣಾಯಕ ಕ್ರಮ ಎರಡೂ ಅಗತ್ಯ. ಮೋಹನ್ ಜೀಯವರಲ್ಲಿ ಈ ಎರಡೂ ಗುಣಗಳು ಅಪಾರವಾಗಿವೆ. ಅವರು ಯಾವಾಗಲೂ ‘ಏಕ ಭಾರತ - ಶ್ರೇಷ್ಠ ಭಾರತ’ದ ಪ್ರಬಲ ಪ್ರತಿಪಾದಕರಾಗಿದ್ದಾರೆ. ಭಾರತದ ವೈವಿಧ್ಯ, ವಿವಿಧ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ, ಓದುವಿಕೆ ಮತ್ತು ಸಂಗೀತದಂತಹ ಹವ್ಯಾಸಗಳಿಗೆ ಸಮಯವನ್ನು ಮೀಸಲಿಟ್ಟಿದ್ದಾರೆ. ಅವರು ವಿವಿಧ ಭಾರತೀಯ ಸಂಗೀತ ವಾದ್ಯಗಳಲ್ಲಿ ಪರಿಣತರು ಎಂದು ಹಲವರಿಗೆ ತಿಳಿದಿಲ್ಲ.

ಈ ವರ್ಷ ಆರ್‌ಎಸ್‌ಎಸ್‌ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಲಿದೆ. ಈ ವರ್ಷ ವಿಜಯದಶಮಿ, ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಆರ್‌ಎಸ್‌ಎಸ್‌ ಶತಾಬ್ದಿ ಆಚರಣೆಗಳು ಒಂದೇ ದಿನ ಬರುತ್ತಿರುವುದು ಸಂತೋಷದ ವಿಷಯ. ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಲಿದೆ. ಈ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಮೋಹನ್ ಜೀ ಅವರಲ್ಲಿ ಅತ್ಯಂತ ಪ್ರಬುದ್ಧ ಮತ್ತು ಕಠಿಣ ಪರಿಶ್ರಮಿ ‘ಸರಸಂಘಚಾಲಕ್’ ಇದ್ದಾರೆ. ಎಲ್ಲ ಎಲ್ಲೆಗಳನ್ನು ಮೀರಿ ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿದಾಗ, ಸಮಾಜದಲ್ಲಿ ನಂಬಿಕೆ, ಸಹೋದರತ್ವ ಮತ್ತು ಸಮಾನತೆ ನೆಲೆಯಾಗುತ್ತದೆ. ಇಂತಹ ‘ವಸುಧೈವ ಕುಟುಂಬಕಂ’ ಆಶಯದ ಜ್ವಲಂತ ಉದಾಹರಣೆ ಮೋಹನ್ ಜೀ. ಭಾರತಮಾತೆಯ ಸೇವೆಗಾಗಿ ಮೋಹನ್ ಜೀಯವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನ ಪ್ರಾಪ್ತಿಯಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.

PREV
Read more Articles on

Recommended Stories

ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1
ಮುಂದಿನ ತಿಂಗಳಿಂದ ದೇಶವ್ಯಾಪಿ ಮತಪಟ್ಟಿ ಪರಿಷ್ಕರಣೆ ಆರಂಭ?