ಜು.21ರಿಂದ ಆ.12ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

KannadaprabhaNewsNetwork |  
Published : Jun 05, 2025, 02:35 AM ISTUpdated : Jun 05, 2025, 04:51 AM IST
ಸಂಸತ್  | Kannada Prabha

ಸಾರಾಂಶ

ಆಪರೇಷನ್ ಸಿಂದೂರದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂಬ ವಿಪಕ್ಷಗಳ ತೀವ್ರ ಒತ್ತಾಯದ ನಡುವೆಯೇ, ಕೇಂದ್ರ ಸರ್ಕಾರ ಅವರ ಬೇಡಿಕೆಯನ್ನು ತಿರಸ್ಕರಿಸಿದೆ ಹಾಗೂ ಜುಲೈ 21ರಿಂದ ಆಗಸ್ಟ್‌ 12ರವರೆಗೆ ಮಳೆಗಾಲದ ಅಧಿವೇಶನ ನಡೆಸುವುದಾಗಿ ತಿಳಿಸಿದೆ.

  ನವದೆಹಲಿ : ಆಪರೇಷನ್ ಸಿಂದೂರದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂಬ ವಿಪಕ್ಷಗಳ ತೀವ್ರ ಒತ್ತಾಯದ ನಡುವೆಯೇ, ಕೇಂದ್ರ ಸರ್ಕಾರ ಅವರ ಬೇಡಿಕೆಯನ್ನು ತಿರಸ್ಕರಿಸಿದೆ ಹಾಗೂ ಜುಲೈ 21ರಿಂದ ಆಗಸ್ಟ್‌ 12ರವರೆಗೆ ಮಳೆಗಾಲದ ಅಧಿವೇಶನ ನಡೆಸುವುದಾಗಿ ತಿಳಿಸಿದೆ.

‘ಸಂಸತ್ತಿನ ಮಳೆಗಾಲದ ಅಧಿವೇಶನ ಜು.21ರಿಂದ ಆ.12ರವರೆಗೆ ನಡೆಯಲಿದೆ. ಆಗಲೇ ಎಲ್ಲ ಪ್ರಮುಖ ವಿಚಾರಗಳನ್ನು ಚರ್ಚಿಸಬಹುದು’ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಮಳೆಗಾಲದ ಅಧಿವೇಶನದ ದಿನಾಂಕವನ್ನು ಶಿಫಾರಸು ಮಾಡಿದೆ. ಅಧಿವೇಶನ ಕರೆಯುವ ಶಿಫಾರಸನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು. ಎಲ್ಲಾ ಪ್ರಮುಖ ವಿಚಾರಗಳನ್ನೂ ಮಳೆಗಾಲದ ಅಧಿವೇಶನದಲ್ಲೇ ಚರ್ಚಿಸಲಾಗುವುದು. ಚರ್ಚಿಸಬೇಕಾದ ವಿಷಯಗಳ ಕುರಿತು ಉಭಯ ಸದನಗಳ ವ್ಯವಹಾರ ಸಲಹಾ ಸಮಿತಿಯು ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಅವರು ತಿಳಿಸಿದರು.

ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಬೆನ್ನಲ್ಲೆ ಅಲಹಾಬಾದ್ ಹೈಕೋರ್ಟ್‌ಗೆ ವರ್ಗವಾಗಿದ್ದ ನ್ಯಾ. ಯಶವಂತ್ ವರ್ಮಾ ಅವರ ವಿರುದ್ಧ ಅಧಿವೇಶನದಲ್ಲಿ ವಾಗ್ದಂಡನೆ ಪ್ರಕ್ರಿಯೆ ಗೊತ್ತುವಳಿ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಮೊನ್ನೆಯಷ್ಟೇ ಆಪರೇಷನ್ ಸಿಂದೂರ ಕುರಿತು ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಕೂಟದ ಪಕ್ಷಗಳು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದವು.

ಕಾಂಗ್ರೆಸ್‌ ಕಿಡಿ:

ಇನ್ನು, 47 ದಿನವೇ ಕೇಂದ್ರ ಸರ್ಕಾರ ಮುಂಗಾರು ಅಧಿವೇಶನ ನಿಗದಿಪಡಿಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಪಹಲ್ಗಾಂ ಚರ್ಚೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಪಲಾಯನ ಮಾಡುತ್ತಿದೆ ಎಂದಿದೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಕ್ರೂರ ಪಹಲ್ಗಾ ದಾಳಿಯ ಬಗ್ಗೆ ಚರ್ಚಿಸಲು ತಕ್ಷಣದ ವಿಶೇಷ ಅಧಿವೇಶನ ಕರೆಯಬೇಕೆಂಬ ಕಾಂಗ್ರೆಸ್ ಮತ್ತು ಇಂಡಿಯಾ ಕೂಟದ ಪಕ್ಷಗಳು ಪದೇ ಪದೇ ಮಾಡುತ್ತಿರುವ ಬೇಡಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂಗಾರು ಅಧಿವೇಶನ ಕರೆದಿದೆ. ಸಾಮಾನ್ಯವಾಗಿ ಸಂಸತ್ತಿನ ಅಧಿವೇಶನದ ದಿನಾಂಕಗಳನ್ನು ಕೆಲವು ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ, ಆದರೆ 47 ದಿನ ಮೊದಲು ಎಂದಿಗೂ ಘೋಷಿಸಿದ್ದಿಲ್ಲ’ ಎಂದಿದ್ದಾರೆ.

PREV
Read more Articles on

Recommended Stories

ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!
ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು: ಮೋದಿ