ನವದೆಹಲಿ: ದೇಶದಲ್ಲಿ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯಂತಹ ಘಟನೆ ಮುಂದುವರೆದಿದೆ. ಶುಕ್ರವಾರವೂ 27 ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.ಮೂಲಗಳ ಪ್ರಕಾರ, ಇಂಡಿಗೋ, ವಿಸ್ತಾರ, ಸ್ಪೈಸ್‌ಜೆಟ್ ಸಂಸ್ಥೆಯ 7 ವಿಮಾನ ಹಾಗೂ ಏರಿಂಡಿಯಾದ 6 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದೆ. ಕಳೆದ 12 ದಿನಗಳಲ್ಲಿ 275ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದ್ದು, ಹೆಚ್ಚಿನವು ಸಾಮಾಜಿಕ ಜಾಲತಾಣದ ಮುಖೇನ ಬಂದಿವೆ.
ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ತನಿಖೆ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸುವವರ ಬಗ್ಗೆ ಮೆಟಾ ಮತ್ತು ಎಕ್ಸ್‌ನಿಂದ ಮಾಹಿತಿ ಬೇಡಿದೆ.ತಿರುಪತಿಯ 3
ತಿರುಪತಿಯ 3 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ
ತಿರುಪತಿ: ವಿಮಾನ ಸ್ಫೋಟದ ಸರಣಿ ಬೆದರಿಕೆ ನಡುವೆಯೇ ಇದೀಗ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಸಮೀಪದ 3 ಹೋಟೆಲ್‌ಗಳಿಗೆ ಇ-ಮೇಲ್ ಮೂಲಕ ಗುರುವಾರ ಬಾಂಬ್ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶೋಧ ನಡೆಸಿದ್ದು ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದೆ.ಲೀಲಾ ಮಹಲ್, ಕಪಿಲಾ ತೀರ್ಥಂ ಹಾಗೂ ಅಲೀಪೀರಿ ಪ್ರದೇಶದ 3 ಖಾಸಗಿ ಹೋಟೆಲ್‌ಗಳಿಗೆ, ‘ಈ ಹೋಟೆಲ್‌ಗಳಲ್ಲಿ ಸುಧಾರಿತ ಇಡಿ ಸ್ಫೋಟಕಗಳನ್ನು ಪಾಕ್‌ನ ಐಎಸ್‌ಐ ಸಕ್ರಿಯಗೊಳಿಸಲಿದ್ದು, ರಾತ್ರಿ 11ರೊಳಗೆ ಜಾಗ ಖಾಲಿ ಮಾಡಿ. ತಮಿಳುನಾಡು ಸಿಎಂ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ’ ಎಂಬ ಸಂದೇಶವನ್ನು ಅ.24ರ ಸಂಜೆ ರವಾನಿಸಲಾಗಿತ್ತು.
ಜೊತೆಗೆ, ‘ಡಿಎಂಕೆಯ ಜಾಫರ್ ಸಾದಿಕ್ ಬಂಧನದಿಂದ ಅಂತಾರಾಷ್ಟ್ರೀಯ ಒತ್ತಡವೂ ಹೆಚ್ಚಿದ್ದು, ಈ ಪ್ರಕರಣದಲ್ಲಿ ಸಿಎಂ ಸ್ಟಾಲಿನ್ ಪರಿವಾರದ ಪಾತ್ರದ ಕಡೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಸ್ಫೋಟಗಳು ಅಗತ್ಯ’ ಎಂದೂ ಬರೆಯಲಾಗಿತ್ತು. ಡಿಎಂಕೆ ನಾಯಕ ಸಾದಿಕ್‌ನನ್ನು ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.