20 ವರ್ಷದಿಂದ ಕಣ್ಮರೆ ಆಗಿದ್ದ ನಕ್ಸಲ್‌; ಆನೆ ದಾಳಿಯಿಂದ ಪತ್ತೆ!

KannadaprabhaNewsNetwork | Updated : Feb 18 2024, 09:03 AM IST

ಸಾರಾಂಶ

20 ವರ್ಷಗಳಿಂದ ಪೊಲೀಸರು ಮತ್ತು ಅರಣ್ಯ ಇಲಾಖೆಯಿಂದ ತಲೆಮರೆಸಿಕೊಂಡು ಕೇರಳದ ಅರಣ್ಯದಲ್ಲೇ ನೆಲೆಯೂರಿದ್ದ ಕರ್ನಾಟಕ ಮೂಲದ ‘ಮೋಸ್ಟ್‌ ವಾಂಟೆಡ್‌’ ನಕ್ಸಲನೊಬ್ಬ ಕಾಡಾನೆ ದಾಳಿಯಿಂದಾಗಿ ಪತ್ತೆಯಾದ ಅಚ್ಚರಿಯ ಘಟನೆ ಕೇರಳದ ಕಣ್ಣೂರು ಬಳಿ ನಡೆದಿದೆ.

ಕಣ್ಣೂರು: 20 ವರ್ಷಗಳಿಂದ ಪೊಲೀಸರು ಮತ್ತು ಅರಣ್ಯ ಇಲಾಖೆಯಿಂದ ತಲೆಮರೆಸಿಕೊಂಡು ಕೇರಳದ ಅರಣ್ಯದಲ್ಲೇ ನೆಲೆಯೂರಿದ್ದ ಕರ್ನಾಟಕ ಮೂಲದ ‘ಮೋಸ್ಟ್‌ ವಾಂಟೆಡ್‌’ ನಕ್ಸಲನೊಬ್ಬ ಕಾಡಾನೆ ದಾಳಿಯಿಂದಾಗಿ ಪತ್ತೆಯಾದ ಅಚ್ಚರಿಯ ಘಟನೆ ಕೇರಳದ ಕಣ್ಣೂರು ಬಳಿ ನಡೆದಿದೆ.

ಆನೆ ದಾಳಿಗೆ ತುತ್ತಾಗಿ ಪತ್ತೆಯಾದ ವ್ಯಕ್ತಿಯನ್ನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಸುರೇಶ್‌ ಎಂದು ಗುರುತಿಸಲಾಗಿದೆ. ಆನೆ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಯಾರೀತ?
ಸುರೇಶ್‌ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಗ್ರಾಮದವ. ಮಲೆನಾಡಿನ ನಕ್ಸಲ್‌ ಚಳವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ಆದರೆ ಮಲೆನಾಡು ಭಾಗದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಚುರುಕಾದ ಬಳಿಕ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಸಂಧಿಸುವ ಗಡಿ ಭಾಗಕ್ಕೆ ತೆರಳಿ ಅಲ್ಲೇ ಭೂಗತನಾಗಿದ್ದ. ಈತನ ಪತ್ತೆಗೆ ಪೊಲೀಸರು 20 ವರ್ಷಗಳಿಂದ ಶ್ರಮಿಸಿದ್ದರೂ ಆತ ಸಿಕ್ಕಿರಲಿಲ್ಲ.

ಆನೆ ದಾಳಿ: ಈ ನಡುವೆ ಕೇರಳದ ಅರಣ್ಯದಲ್ಲಿ ನಕ್ಸಲರು ವಾಸವಿದ್ದ ಕ್ಯಾಂಪ್‌ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುರೇಶ್‌ ಗಾಯಗೊಂಡಿದ್ದಾನೆ. ಹೀಗಾಗಿ 6 ನಕ್ಸಲರ ಗುಂಪು ಸುರೇಶ್‌ನನ್ನು ವಾಹನದಲ್ಲಿ ಕರೆತಂದು ಕೇರಳ- ಕರ್ನಾಟಕ ಗಡಿಭಾಗದ ಕಂಜಿಕೋರ ಎಂಬಲ್ಲಿ ಇಳಿಸಿಹೋಗಿದೆ.

ಗಾಯಗೊಂಡಿದ್ದ ಈತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆತನ ಬಳಿ ಆಯುಧ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ಕುಖ್ಯಾತ ನಕ್ಸಲ್‌ ಸುರೇಶ್‌ ಎಂದು ಪತ್ತೆಯಾಗಿದೆ.

ಹತ್ತಾರು ಕೇಸು?
ಈತನ ವಿರುದ್ಧ ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 20 ವರ್ಷಗಳ ಕಾಲ ಈತ ಕೇರಳ ಗಡಿಯಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

5 ಲಕ್ಷ ರು. ಬಹುಮಾನ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸುರೇಶ್‌ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನವನ್ನು ಸಹ ಘೋಷಿಸಲಾಗಿತ್ತು.

Share this article