ಕೆಲಸದ ಅವಧಿ ಅವರ ವಿವೇಚನೆಗೆ ಬಿಟ್ಟಿದ್ದು: ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ

KannadaprabhaNewsNetwork |  
Published : Jan 21, 2025, 01:32 AM ISTUpdated : Jan 21, 2025, 04:44 AM IST
ನಾರಾಯಣ ಮೂರ್ತಿ | Kannada Prabha

ಸಾರಾಂಶ

ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ವಿವಾದ ಸೃಷ್ಟಿಸಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಇದೀಗ ‘ಯಾರು ಕೂಡ ದೀರ್ಘಾವದಧಿ ಕೆಲಸ ಮಾಡಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಮುಂಬೈ: ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ವಿವಾದ ಸೃಷ್ಟಿಸಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಇದೀಗ ‘ಯಾರು ಕೂಡ ದೀರ್ಘಾವದಧಿ ಕೆಲಸ ಮಾಡಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘40 ವರ್ಷ ನಾನು ವಾರಕ್ಕೆ 70 ಗಂಟೆ ಕೆಲಸ ಮಾಡಿದ್ದೆ. ಬೆಳಿಗ್ಗೆ 6.30ಗೆ ಆಫೀಸ್‌ ಹೋಗುತ್ತಿದೆ. ರಾತ್ರಿ 8.30ಗೆ ಹೊರಡುತ್ತಿದೆ. ಇದು ಚರ್ಚೆಯ ಮತ್ತು ಚರ್ಚಿಸಬೇಕಾದ ವಿಷಯವಲ್ಲ. ಇದು ಒಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ಕೆಲವರು ತೀರ್ಮಾನಕ್ಕೆ ಬರಬಹುದು. ಅವರು ಏನು ಬೇಕಾದರೂ ಮಾಡಬಹುದು. ನೀವು ಅದನ್ನು ಮಾಡಬೇಕು. ಇದನ್ನು ಮಾಡಬೇಕು ಎಂದು ಹೇಳುವವರು ಯಾರೂ ಇಲ್ಲ’ ಎಂದರು.

ತಿರುಮಲ ದೇಗುಲಕ್ಕೆ ಚೆನ್ನೈ ಭಕ್ತನಿಂದ ಭರ್ಜರಿ 6 ಕೋಟಿ ರು. ದೇಣಿಗೆ

ತಿರುಪತಿ: ತಿರುಪತಿ ದೇಗುಲ ನಿರ್ವಹಿಸುವ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿಗೆ ಚೆನ್ನೈ ಮೂಲದ ಭಕ್ತರೊಬ್ಬರು ಭರ್ಜರಿ 6 ಕೋಟಿ ರು. ದೇಣಿಗೆ ನೀಡಿದ್ದಾರೆ.ವರ್ಧಮಾನ್‌ ಜೈನ್‌ ಎಂಬುವವರು ಇಲ್ಲಿಯ ರಂಗನಾಯಕುಲ ಮಂಟಪದಲ್ಲಿ ಟಿಟಿಡಿಯ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿಗೆ (ಎಸ್‌ವಿಬಿಸಿ) 5 ಕೋಟಿ ರು. ಮತ್ತು ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ಗೆ 1 ಕೋಟಿ ರು. ಡಿಮ್ಯಾಂಡ್‌ ಡ್ರಾಫ್ಟ್‌ ಅನ್ನು ಟಿಟಿಡಿ ಅಧಿಕಾರಿ ವೆಂಕಯ್ಯ ಚೌದರಿ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಟಿಟಿಡಿ ಭಾನುವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ತಿರುಮಲದಲ್ಲಿ ಎಗ್‌ ಬಿರಿಯಾನಿ ಸೇವನೆ: ವಿವಾದ

ತಿರುಪತಿ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಭಕ್ತರು ಮೊಟ್ಟೆ ಬಿರಿಯಾನಿ ತಿನ್ನುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡಿನ ಭಕ್ತರು ತಿರುಮಲದ ರಂಬಗಿಚಾ ಬಸ್‌ ನಿಲ್ದಾಣದಲ್ಲಿ ಎಗ್‌ ಬಿರಿಯಾನಿ ತಿನ್ನುವಾಗ ಸಿಕ್ಕಿಬಿದ್ದಿದ್ದಾರೆ.

ಈ ಪ್ರಕರಣವನ್ನು ವಿಪಕ್ಷ ವೈಎಸ್ಆರ್‌ಸಿಪಿ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಖಂಡಿಸಿದ್ದು, ತಿರುಮಲ ತಿರುಪತಿದೇವಸ್ಥಾನವು (ಟಿಟಿಡಿ) ಬೆಟ್ಟದಲ್ಲಿ ಪಾವಿತ್ರ್ಯ ಕಾಯುವಲ್ಲಿ ವಿಫಲವಾಗಿದೆ. ಅಲಿಪ್ಪಿರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವ್ಯವಸ್ಥೆ ಇದ್ದರೂ ಎಗ್‌ ಬಿರಿಯಾನಿ ಬೆಟ್ಟಕ್ಕೆ ಹೇಗೆ ಬಂತು ಎಂದು ಟೀಕಿಸಿವೆ.

ತಿರುಮಲದಲ್ಲಿ ಮಾಂಸಾಹಾರ, ಮದ್ಯಪಾನ, ಸಿಗರೇಟ್ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಭಕ್ತರ ಸ್ಪಷ್ಟನೆ: ಎಗ್‌ ಬಿರಿಯಾನಿ ತಿಂದ ಭಕ್ತರನ್ನು ಪೊಲೀಸರು ಪ್ರಶ್ನಿಸಿದಾಗ ಅವರು, ‘ನಮಗೆ ಇಲ್ಲಿನ ನಿಯಮ ಅರಿವಿಲ್ಲ’ ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದಾರೆ

₹31 ಕೋಟಿಗೆ ಖರೀದಿಸಿದ್ದ ಅಪಾರ್ಟ್‌ಮೆಂಟ್‌ ₹83 ಕೋಟಿಗೆ ಮಾರಿದ ಬಿಗ್‌ಬಿ

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು 2021ರಲ್ಲಿ 31 ಕೋಟಿ ರು.ಗೆ ಖರೀದಿಸಿದ್ದ ಡುಪ್ಲೆಕ್ಸ್‌ ಅಪಾರ್ಟ್ಮೆಂಟ್‌ ಅನ್ನು ಬರೋಬ್ಬರಿ 83 ಕೋಟಿ ರು. (ಶೇ.168ರಷ್ಟು ಹೆಚ್ಚು ಬೆಲೆ)ಗೆ ಮಾರಾಟ ಮಾಡಿದ್ದಾರೆ.1.55 ಎಕರೆಯಲ್ಲಿ ವಿಸ್ತೀರ್ಣದ ಅಪಾರ್ಟ್‌ಮೆಂಟ್‌ 4,5 ಮತ್ತು 5 ಬಿಎಚ್‌ಕೆ ಫ್ಲಾಟ್‌ಗಳನ್ನು ಹೊಂದಿದೆ. ಇದನ್ನು 2021ರ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್‌ ಅವರಿಗೆ ತಿಂಗಳಿಗೆ 10 ಲಕ್ಷ ರು.ಗೆ ಬಾಡಿಗೆ ನೀಡಿದ್ದರು ಎಂದು ಸ್ಕೇರ್‌ ಯಾರ್ಡ್ಸ್‌ ವರದಿ ಮಾಡಿದೆ.

ವಿಶೇಷವೆಂದರೆ ಮುಂಬೈನಲ್ಲಿ ಸೆಲೆಬ್ರಿಟಿಗಳ ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ಬಚ್ಚನ್‌ ಕುಟುಂಬದ ಪಾಲು ಶೇ.25 ರಷ್ಟಿದೆ ಎಂದು ಹೇಳಿದೆ. ಅಲ್ಲದೇ, ಅಮಿತಾಭ್‌ ಮತ್ತು ಅಭಿಷೇಕ್‌ ಬಚ್ಚನ್‌ 2024ರಲ್ಲಿ 100 ಕೋಟಿ ರು.ಗೂ ಅಧಿಕ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದರು ಎಂದು ಅದು ಹೇಳಿದೆ. 

1.55 ಎಕರೆಯಲ್ಲಿ 5,704 ಚದರಡಿಯಲ್ಲಿ ಅಪಾರ್ಟ್‌ಮೆಂಟ್‌ ಇದ್ದು, 5,185 ಚದರಡಿ ಕಾರ್ಪೆಟ್‌ ಏರಿಯಾ ಇದೆ. 4,800 ಚದರಡಿ ಟೆರೇಸ್‌ ಹೊಂದಿದೆ.

10 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಕೇಂದ್ರ ಅಸ್ತು: ರೈತರಿಗೆ ವರ

ನವದೆಹಲಿ: ಕಳೆದ ವರ್ಷ ಬೆಲೆ ನಿಯಂತ್ರಣ ನಿಮಿತ್ತ ಸಕ್ಕರೆ ಮೇಲಿನ ರಫ್ತಿಗೆ ಕೇಂದ್ರ ಸರ್ಕಾರ ವಿಧಿಸಿದ್ದ ನಿಷೇಧವನ್ನು 2024-25ನೇ ಸಾಲಿಗೆ ತೆರವುಗೊಳಿಸಿದೆ. ಸೆಪ್ಟೆಂಬರ್‌ನಲ್ಲಿ ಅಂತ್ಯಗೊಳ್ಳುವ ಅವಧಿವರೆಗೆ 10 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕ ಸೇರಿ ಅನೇಕ ರಾಜ್ಯಗಳ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಲಭಿಸಿದಂತಾಗಿದೆ.ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋ ಈ ಬಗ್ಗೆ ಹೇಳಿಕೆ ನೀಡಿ, ‘ಸಕ್ಕರೆ ರಫ್ತಿಗೆ ಅನುಮತಿ ಸಿಕ್ಕ ಬಳಿಕ 5 ಕೋಟಿ ರೈತರಿಗೆ ಮತ್ತು 5 ಲಕ್ಷ ಜನರಿಗೆ ಅನುಕೂಲವಾಗಲಿದೆ. ಜೊತೆಗೆ ಸಕ್ಕರೆ ಉದ್ಯಮಕ್ಕೆ ಶಕ್ತಿ ದೊರೆಯಲಿದೆ‘ ಎಂದು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ
ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ