ಮುಂಬೈಯಿಂದ ಅಯೋಧ್ಯೆಗೆ ಮುಸ್ಲಿಂ ಮಹಿಳೆ ಕಾಲ್ನಡಿಗೆ ಯಾತ್ರೆ

KannadaprabhaNewsNetwork | Published : Dec 29, 2023 1:30 AM

ಸಾರಾಂಶ

ಇಬ್ಬರು ಸಹಚರರ ಜತೆ ಶಬ್ನಂ ಎಂಬ ಮುಸ್ಲಿಂ ಮಹಿಳೆ ಅಯೋಧ್ಯೆಗೆ 1425 ಕಿ.ಮೀ ನಡಿಗೆ ಪ್ರಾರಂಭ ಮಾಡಿದ್ದು ಪ್ರಸ್ತುತ ಮಧ್ಯಪ್ರದೇಶದಲ್ಲಿ ಹಾದುಹೋಗುತ್ತಿರುವುದಾಗಿ ತಿಳಿದುಬಂದಿದೆ.

ನವದೆಹಲಿ: 2024ರ ಜ.22ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ರಾಮನ ದರ್ಶನಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರು ಪಾದಯಾತ್ರೆ ಕೈಗೊಂಡಿದ್ದಾರೆ. ಇನ್ನೂ ವಿಶೇಷವೆಂದರೆ ಶಬ್ನಂ ಎಂಬ ಈ ಯುವತಿ ಮುಂಬೈನಿಂದ ಅಯೋಧ್ಯೆವರೆಗಿನ 1425 ಕಿ.ಮೀ ದೂರವನ್ನು ಪಾದಯಾತ್ರೆಯ ಮೂಲಕವೇ ಕ್ರಮಿಸಿ ರಾಮನ ದರ್ಶನ ಪಡೆಯಲು ನಿರ್ಧರಿಸಿದ್ದಾಳೆ.

ತನ್ನ ಇಬ್ಬರು ಸಹಚರರರಾದ ರಮಣ್‌ ಶರ್ಮಾ ಮತ್ತು ವಿನೀತ್‌ ಪಾಂಡೆ ಜೊತೆಗೆ ಈಗಾಗಲೇ ಕಾಲ್ನಡಿಗೆ ಯಾತ್ರೆ ಆರಂಭಿಸಿರುವ ಶಬ್ನಂ ಇದೀಗ ಮಧ್ಯಪ್ರದೇಶದ ಸಿಂಧವಾ ಪ್ರದೇಶ ತಲುಪಿದ್ದಾರೆ. ಪ್ರತಿದಿನ 25ರಿಂದ 30 ಕಿ.ಮೀ ದೂರ ಕ್ರಮಿಸುತ್ತಿರುವ ಶಬ್ನಂ, ಮಂದಿರ ಉದ್ಘಾಟನೆ ವೇಳೆಗೆ ಅಯೋಧ್ಯೆ ತಲುಪಬೇಕೆಂಬ ಗುರಿ ಏನೂ ಇಲ್ಲ. ಇದು ನನ್ನಲ್ಲಿನ ಅಧ್ಯಾತ್ಮದ ಪರಿಪೂರ್ಣತೆಯ ಅನ್ವೇಷಣೆಯ ಯತ್ನವಷ್ಟೇ ಎಂದು ಹೇಳಿದ್ದಾರೆ.

ರಾಮನ ಪೂಜಿಸಲು ಹಿಂದೂ ಆಗಬೇಕಿಲ್ಲ:‘ಭಗವಾನ್‌ ಶ್ರೀರಾಮನನ್ನು ಪೂಜಿಸಲು ಕೇವಲ ಹಿಂದೂವೇ ಆಗಿರಬೇಕು ಎಂಬ ಅಗತ್ಯವಿಲ್ಲ. ಒಬ್ಬ ಉತ್ತಮ ಮನುಷ್ಯನಾಗಿದ್ದರೆ ಸಾಕು. ಶ್ರೀರಾಮ ಯಾವುದೇ ನಿರ್ದಿಷ್ಟ ಧರ್ಮ ಮತ್ತು ಪ್ರದೇಶಕ್ಕೆ ಸೀಮಿತವಲ್ಲ. ಆತ ಎಲ್ಲರಿಗೂ ಸೇರಿದವನು. ನನ್ನ ಯಾತ್ರೆ ವೇಳೆ ಮುಸ್ಲಿಮರು ಕೂಡ ಜೈಶ್ರೀರಾಮ್ ಎಂದು ನನಗೆ ಬೆಂಬಲ ನೀಡಿದ್ದಾರೆ. ಈ ಯಾತ್ರೆ ಕೇವಲ ಪುರುಷರು ಮಾತ್ರವೇ ಇಂಥ ಸುದೀರ್ಘ ಯಾತ್ರೆಯನ್ನು ಕೈಗೊಳ್ಳಬಹುದು ಎಂಬ ಅಪನಂಬಿಕೆ ದೂರ ಮಾಡುವ ಉದ್ದೇಶವನ್ನೂ ಹೊಂದಿದೆ’ ಎಂದು ಶಬ್ನಮ್‌ ಹೇಳಿದ್ದಾರೆ.

ಶ್ರೀರಾಮನ ಮೇಲೆ ಅಪಾರ ಭಕ್ತಿ ಹೊಂದಿರುವ ಶಬ್ನಮ್‌ ಧರ್ಮವನ್ನೂ ಮೀರಿ ಸೌಹಾರ್ದತೆ ಮೆರೆದು ಮಾದರಿಯಾಗಿದ್ದಾರೆ. ಅದಾಗ್ಯೂ ಶಬ್ನಮ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಪೊಲೀಸರ ನೆರವು: ಶಬ್ನಂರ ಈ ಯಾತ್ರೆಗೆ ಮಹಾರಾಷ್ಟ್ರದಲ್ಲಿ ಪೊಲೀಸರೇ ಸಾಕಷ್ಟು ಭದ್ರತೆ, ಊಟ, ವಸತಿ ವ್ಯವಸ್ಥೆ ಮಾಡುವ ಮೂಲಕ ಆಕೆ ಮತ್ತು ಆಕೆಯ ಇಬ್ಬರು ಸ್ನೇಹಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.

Share this article