ನನ್ನ 3ನೇ ಅವಧಿಯಲ್ಲಿ ನಾರಿಶಕ್ತಿ ಹೊಸ ಅಧ್ಯಾಯ ಶುರು: ಮೋದಿ

KannadaprabhaNewsNetwork | Published : Mar 12, 2024 2:06 AM

ಸಾರಾಂಶ

ನನ್ನ ಅಧಿಕಾರದ ಮೂರನೇ ಅವಧಿ, ದೇಶದ ಮಹಿಳೆಯರ ಅಭ್ಯುದಯದಲ್ಲಿ ಹೊಸ ಶಕೆ ಆರಂಭಕ್ಕೆ ಮುನ್ನುಡಿ ಬರೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ನವದೆಹಲಿ: ‘ನನ್ನ ಅಧಿಕಾರದ ಮೂರನೇ ಅವಧಿ, ದೇಶದ ಮಹಿಳೆಯರ ಅಭ್ಯುದಯದಲ್ಲಿ ಹೊಸ ಶಕೆ ಆರಂಭಕ್ಕೆ ಮುನ್ನುಡಿ ಬರೆಯಲಿದೆ’ ಎಂದು ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರಿಗೆ ಅವಕಾಶ ಸೃಷ್ಟಿಸುವ ಸಮಾಜ ಮಾತ್ರವೇ ಅಭಿವೃದ್ಧಿ ಹೊಂದಬಹುದು ಎಂಬುದು ನಮ್ಮ ನಂಬಿಕೆ ಎಂದು ಹೇಳಿದ್ದಾರೆ.

‘ಸಶಕ್ತ ನಾರಿ- ವಿಕಸಿತ ಭಾರತ’ ಕಾರ್ಯಕ್ರಮದ ಅಂಗವಾಗಿ ಸೋಮವಾರ ಮೋದಿ ದೇಶಾದ್ಯಂತ ಇರುವ ಮಹಿಳಾ ಸ್ವಸಹಾಯ ಸಂಘಗಳಿಗೆ 8000 ಕೋಟಿ ರು. ಹಣವನ್ನು ಸಾಲದ ರೂಪದಲ್ಲಿ ವರ್ಗಾಯಿಸಿದರು. ಜೊತೆಗೆ ಸ್ವಸಹಾಯ ಸಂಘಗಳಿಗೆ 2000 ಕೋಟಿ ರು.ಗಳನ್ನು ಬಂಡವಾಳದ ರೂಪದಲ್ಲಿ ವರ್ಗಾಯಿಸಿದರು. ಅಲ್ಲದೆ ‘ಡ್ರೋನ್‌ ದೀದಿ’ ಯೋಜನೆ ಅಂಗವಾಗಿ 1000 ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಕೃಷಿ ಕೆಲಸಕ್ಕೆ ಬಳಸಬಲ್ಲ ಡ್ರೋನ್‌ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿ ಈ ಮೇಲಿನಂತೆ ಹೇಳಿದರು.

‘ಹಿಂದೆ ದೇಶವನ್ನು ಆಳಿದ್ದ ಪಕ್ಷಗಳಿಗೆ ಮಹಿಳೆಯರ ಜೀವನ ಮತ್ತು ಅವರ ಕಷ್ಟಗಳು ಎಂದಿಗೂ ಆದ್ಯತೆಯಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಜೀವನದ ಪ್ರತಿ ಹಂತದಲ್ಲೂ ಅವರಿಗೆ ನೆರವಾಗುವ ಹಲವು ಮಹಿಳಾ ಕೇಂದ್ರಿತ ಯೋಜನೆ ಜಾರಿಗೊಳಿಸಿತು’ ಎಂದು ಹೇಳಿದರು.

ಇದೇ ವೇಳೆ, ‘ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಾದ ಶೌಚಾಲಯ, ಸ್ಯಾನಿಟರಿ ನ್ಯಾಪಕಿನ್‌ ಬಳಕೆ, ಅಡುಗೆ ಮನೆ ಇಂಧನಗಳಿಂದ ಆರೋಗ್ಯದ ಮೇಲಾಗುವ ಹಾನಿಗಳು ಮತ್ತು ಬ್ಯಾಂಕ್‌ ಖಾತೆ ಆರಂಭದ ಅಗತ್ಯವನ್ನು ಪ್ರತಿಪಾದಿಸಿದ ಮೊದಲ ಪ್ರಧಾನಿ ನಾನೇ. ಆದರೆ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ನನ್ನ ಮೇಲೆ ವಾಗ್ದಾಳಿ ನಡೆಸಿದವು. ನಾನು ನನ್ನ ಮನೆಯಲ್ಲಿ ಏನು ಕಂಡಿದ್ದೆನೋ? ನನ್ನ ನೆರೆಹೊರೆಯಲ್ಲಿ ಏನು ನೋಡಿದ್ದೆನೋ? ಪ್ರವಾಸದ ವೇಳೆ ಗ್ರಾಮಗಳಲ್ಲಿ ಏನೇನು ಅರಿತುಕೊಂಡಿದ್ದೆನೋ? ಅವೇ ನನಗೆ ಮಹಿಳಾ ಕೇಂದ್ರಿತ ಯೋಜನೆ ಜಾರಿಗೆ ಪ್ರೇರಣೆ’ ಎಂದು ಮೋದಿ ಹೇಳಿದರು.

ಇದುವರೆಗೂ ನಮ್ಮ ಸರ್ಕಾರ ಮಹಿಳಾ ಕೇಂದ್ರದ ಯೋಜನೆಗಳ ಮೂಲಕ 8 ಲಕ್ಷ ಕೋಟಿ ರು. ಹಣ ವಿತರಿಸಿದೆ. 1 ಲಕ್ಷ ಮಹಿಳೆಯರು ಲಖಪತಿ ದೀದಿಯರಾಗಿದ್ದಾರೆ ಎಂದು ಮೋದಿ ಹೇಳಿದರು.

Share this article