;Resize=(412,232))
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಸೇರಿ ಹಲವು ಆತಂಕಗಳು ಸೃಷ್ಟಿಯಾಗಿರುವ ನಡುವೆಯೇ, ಈ ಕುರಿತು ರಾಜ್ಯಗಳ ಸಿದ್ಧತೆಯನ್ನು ಪರಾಮರ್ಶಿಸಲು, ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ 6.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಕೋವಿಡ್ ಸಮಯದಲ್ಲೂ ಮೋದಿ ಎಲ್ಲ ಸಿಎಂಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜತೆ ಇದೇ ರೀತಿ ಮಾತುಕತೆ ನಡೆಸಿ ಕಾರ್ಯತಂತ್ರ ರೂಪಿಸುತ್ತಿದ್ದರು. ಈಗಲೂ ಅದೇ ರೀತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಿಶ್ಚಯವಾಗಿದೆ. ‘ಕೋವಿಡ್ ಕಾಲದಂತೆ ಈಗಲೂ ದೇಶ ಸನ್ನದ್ಧವಾಗಿರುವುದು ಅಗತ್ಯ’ ಎಂದು ಮೋದಿ ಇತ್ತೀಚೆಗೆ ಹೇಳಿದ್ದು ಇಲ್ಲಿ ಗಮನಾರ್ಹ.
ಆದರೆ ಚುನಾವಣೆ ನಡೆಯಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಂಪುಟ ಸಚಿವಾಲಯದ ಮೂಲಕ ಪ್ರತ್ಯೇಕ ಸಭೆ ನಡೆಯಲಿದೆ.
ಎಲ್‌ಪಿಜಿ ಅಭಾವವನ್ನು ಸಮರ್ಥವಾಗಿ ಎದುರಿಸಲು ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಮೋದಿ ಚರ್ಚಿಸಲಿದ್ದಾರೆ. ಇನ್ನುಳಿದಂತೆ ಪೂರೈಕೆ ಸರಪಳಿ, ಇಂಧನ ಭದ್ರತೆ, ಸಂಘರ್ಷಪೀಡಿತ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆ, ದೇಶದ ಆಂತರಿಕ ಸ್ಥಿರತೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಲಿವೆ. ಸಂಘರ್ಷಮಯ ಪರಿಸ್ಥಿತಿಯಲ್ಲಿ, ‘ಟೀಂ ಇಂಡಿಯಾ’ ಎಂಬ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಾ, ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಸಾಗಬೇಕು ಎಂದು ಪ್ರಧಾನಿ ಒತ್ತಿ ಹೇಳುವ ನಿರೀಕ್ಷೆಯಿದೆ.