ಸುನಿತಾ ವಿಲಿಯಮ್ಸ್‌ ಮತ್ತು ಬಚ್‌ ವಿಲ್ಮೋರ್‌ ಸುರಕ್ಷಿತವಾಗಿ ಭೂಮಿಗೆ : ಮುಂದಿನ ಗಂಭೀರ ಸವಾಲುಗಳೇನು?

KannadaprabhaNewsNetwork | Updated : Mar 20 2025, 04:53 AM IST

ಸಾರಾಂಶ

8 ದಿನದ ಕೆಲಸಕ್ಕೆಂದು ತೆರಳಿ ಬಳಿಕ ಅನಿವಾರ್ಯವಾಗಿ ಅಲ್ಲೇ ಸಿಕ್ಕ 9 ತಿಂಗಳಿನಿಂದ ಆತಂಕದ ದಿನಗಳನ್ನು ಎದುರಿಸಿದ್ದ ನಾಸಾದ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಬುಧವಾರ ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ.

ಕೇಪ್‌ ಕೆನವೆರಲ್‌: 8 ದಿನದ ಕೆಲಸಕ್ಕೆಂದು ತೆರಳಿ ಬಳಿಕ ಅನಿವಾರ್ಯವಾಗಿ ಅಲ್ಲೇ ಸಿಕ್ಕ 9 ತಿಂಗಳಿನಿಂದ ಆತಂಕದ ದಿನಗಳನ್ನು ಎದುರಿಸಿದ್ದ ನಾಸಾದ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಬುಧವಾರ ಸುರಕ್ಷಿತವಾಗಿ ಭೂಮಿಗೆ ವಾಪಸಾಗಿದ್ದಾರೆ.

ಈ ಮೂಲಕ ಸುನಿತಾ ವಿಲಿಯಮ್ಸ್‌ ಮತ್ತು ವಿಲ್‌ಮೋರ್‌ ಸುರಕ್ಷಿತವಾಗಿ ವಾಪಸಾಗಲಿ ಎಂಬ ಭಾರತೀಯರೂ ಸೇರಿ ಕೋಟ್ಯಂತರ ಬಾಹ್ಯಾಕಾಶ ಪ್ರೇಮಿಗಳ ಪ್ರಾರ್ಥನೆ, ವಿಜ್ಞಾನಿಗಳ ಪರಿಶ್ರಮ ಫಲಿಸಿದೆ. ಸುನಿತಾ ವಿಲಿಯಮ್ಸ್‌, ವಿಲ್‌ಮೋರ್‌ ಅವರ ಜತೆಗೆ ಅಮೆರಿಕದ ನಿಕ್‌ ಹೇಗ್‌ ಮತ್ತು ರಷ್ಯಾದ ಅಲೆಕ್ಸಾಂಡರ್‌ ಗೊರ್ಬುನೋವ್‌ ಅವರಿದ್ದ ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೊರಟ 17 ಗಂಟೆಗಳ ಬಳಿಕ ಭೂ ವಾತಾವರಣ ಪ್ರವೇಶಿಸಿತು. ಬಳಿಕ ಫ್ಲೋರಿಡಾದ ಗಲ್ಫ್‌ ಆಫ್‌ ಮೆಕ್ಸಿಕೋ ಸಮುದ್ರದಲ್ಲಿ ಸುರಕ್ಷಿತವಾಗಿ ಭಾರತೀಯ ಕಾಲಮಾನ ಬುಧವಾರ ಮುಂಜಾನೆ 3.27ಕ್ಕೆ ಬಂದಿಳಿಯಿತು.

ಸುದೀರ್ಘ ಅವಧಿಗೆ ಗುರುತ್ವಾಕರ್ಷಣೆ ರಹಿತ ಬಾಹ್ಯಾಕಾಶದಲ್ಲಿದ್ದ ಕಾರಣ ಸಹಜವಾಗಿ ನಡೆಯಲೂ ಆಗದ ಸ್ಥಿತಿಯಲ್ಲಿದ್ದರೂ ಸುನಿತಾ ವಿಲಿಯಮ್ಸ್‌ ಮತ್ತು ವಿಲ್‌ಮೋರೆ ಅವರು ಗಗನನೌಕೆಯಿಂದ ಹೊರಬರುತ್ತಿದ್ದಂತೆ ಸುತ್ತಮುತ್ತ ನೆರೆದಿದ್ದವರಿಗೆ ನಗೆಸೂಸಿ, ಕೈ ಬೀಸಿದರು. ಗಗನನೌಕೆಯಿಂದ ಹೊರಬಂದ ಗಗನಯಾತ್ರಿಗಳನ್ನು ಸ್ಟ್ರೆಚರ್‌ ಸಹಾಯದಿಂದ ನೇರವಾಗಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು.

5476 ಬಾರಿ ಭೂಮಿಗೆ ಸುತ್ತು

ಸುನಿತಾ ಮತ್ತು ವಿಲ್‌ಮೋರ್‌ ಅವರು 286 ದಿನಗಳನ್ನು ಬಾಹ್ಯಾಕಾಶ ಕೇಂದ್ರದಲ್ಲೇ ಕಳೆದರು. ಅವರು ಭೂಮಿಗೆ 5476 ಬಾರಿ ಸುತ್ತು ಬಂದಿದ್ದಲ್ಲದೆ, 121 ದಶಲಕ್ಷ ಮೈಲಿ(195 ದಶಲಕ್ಷ ಕಿ.ಮೀ.) ಪ್ರಯಾಣ ಮಾಡಿದ್ದಾರೆ. ಸುನಿತಾ ಮತ್ತು ವಿಲ್‌ಮೋರ್‌ ಅವರು 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.

ಸುನಿತಾ ದಾಖಲೆ: ಅತಿ ಹೆಚ್ಚು ಕಾಲ ಬಾಹ್ಯಾಕಾಶ ನಡಿಗೆ ಮಾಡಿದ ಮಹಿಳಾ ಗಗನಯಾತ್ರ ಎಂಬ ದಾಖಲೆಯನ್ನು ಸುನಿತಾ ವಿಲಿಯಮ್ಸ್‌ ಬರೆದಿದ್ದಾರೆ. ಅಲ್ಲದೆ ಮೂರು ತಿಂಗಳ ಕಾಲ ಬಾಹ್ಯಾಕಾಶ ಕೇಂದ್ರದ ಕಮಾಂಡರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಗಗನಯಾತ್ರಿಗಳಿಗೆ ಡಾಲ್ಫಿನ್‌ಗಳ ಸ್ವಾಗತ

ಫ್ಲೋರಿಡಾ: ಸುನಿತಾ ವಿಲಿಯಮ್ಸ್‌ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ನೌಕೆ ಸಮುದ್ರದಲ್ಲಿ ಬಂದು ಇಳಿಯುತ್ತಿದ್ದಂತೆ ಅದರ ಪಕ್ಕದಲ್ಲೇ ಎರಡು ಡಾಲ್ಫಿನ್‌ಗಳು ನೀರಿನಲ್ಲಿ ನೃತ್ಯ ಮಾಡುತ್ತಾ ಇದ್ದಿದ್ದು ಕಂಡುಬಂತು. ಗಗನಯಾತ್ರಿಗಳನ್ನು ನೌಕೆಯಿಂದ ಹೊರತರಲು ತೆರಳಿದ್ದ ರಕ್ಷಣಾ ಸಿಬ್ಬಂದಿ, ಈ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಡಾಲ್ಫಿನ್‌ಗಳ ಈ ಆಗಮನ ಗಗನಯಾತ್ರಿಗಳ ಸ್ವಾಗತಕ್ಕಾಗಿ ಎಂಬಂತೆ ಕಂಡುಬಂತು.

ಭರವಸೆ ನೀಡಿದ್ದೆವು, ಭರವಸೆ ಈಡೇರಿಸಿದ್ದೇವೆ: ಶ್ವೇತಭವನ

ವಾಷಿಂಗ್ಟನ್: ಭರವಸೆ ನೀಡಿದ್ದೆವು, ಭರವಸೆ ಈಡೇರಿಸಿದ್ದೇವೆ. ಇದು ಸುನಿತಾ ಮತ್ತು ಬುಚ್‌ ವಿಲ್ಮೋರ್‌ ಬುಧವಾರ ಸುರಕ್ಷಿತವಾಗಿ ಭೂಮಿಗೆ ಬಂದಿಳಿಯುತ್ತಲೇ, ಅಮೆರಿಕದ ಅಧ್ಯಕ್ಷೀಯ ಕಚೇರಿಯಾದ ಶ್ವೇತಭವನ ನೀಡಿದ ಪ್ರತಿಕ್ರಿಯೆ.

‘ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿದ್ದ ಗಗನಯಾತ್ರಿಗಳಾದ ಸುನಿತಾ ಮತ್ತು ಬುಚ್‌ರನ್ನು ರಕ್ಷಿಸುವ ಭರವಸೆ ನೀಡಿದ್ದರು. ಇದೀಗ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿದ್ದ ಯಾನಿಗಳು ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಇದಕ್ಕಾಗಿ ಎಲಾನ್‌ ಮಸ್ಕ್‌, ಸ್ಪೇಸ್‌ ಎಕ್ಸ್‌ ಮತ್ತು ನಾಸಾಕ್ಕೆ ಅಭಿನಂದನೆಗಳು’ ಎಂದು ಶ್ವೇತಭವನ ಪ್ರತಿಕ್ರಿಯೆ ನೀಡಿದೆ.

ಸುನಿತಾ ಮರಳುವಲ್ಲಿ ಅಧ್ಯಕ್ಷ ಟ್ರಂಪ್‌, ಮಸ್ಕ್‌ ಮಹತ್ವದ ಪಾತ್ರ

ವಾಷಿಂಗ್ಟನ್‌: ಸುನಿತಾ ಮತ್ತು ಬುಚ್‌ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಮರಳುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್‌ ಮಸ್ಕ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿಂದಿನ ಅಧ್ಯಕ್ಷ ಬೈಡೆನ್‌ ಮತ್ತು ಮಸ್ಕ್‌ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ ಕಾರಣ ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಯಾತ್ರಿಗಳನ್ನು ಕರೆತರಲು ಬೈಡೆನ್‌ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಾರಣ, ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲು ಹಾಲಿ ನಾಸಾದ ಬಳಿ ಯಾವುದೇ ನೌಕೆ ಇಲ್ಲದ ಕಾರಣ ಅದು ಪೂರ್ಣವಾಗಿ ಸ್ಪೇಸ್‌ಎಕ್ಸ್‌ ಅನ್ನು ಅವಲಂಬಿಸಿತ್ತು.ಈ ಹಿನ್ನೆಲೆಯಲ್ಲಿ ಟ್ರಂಪ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಂದರೆ 2025ರ ಜ.28ರಂದು ಸುನಿತಾ ಮತ್ತು ಬುಚ್‌ರನ್ನು ತ್ವರಿತವಾಗಿ ಭೂಮಿಗೆ ಕರೆತರಲು ಮಸ್ಕ್‌ಗೆ ಟ್ರಂಪ್‌ ಮನವಿ ಮಾಡಿದ್ದರು. ಅದರಂತೆ ನಡೆದುಕೊಂಡ ಮಸ್ಕ್‌, ಏಪ್ರಿಲ್‌ ವೇಳೆಗೆ ನಡೆಸಲು ಉದ್ದೇಶಿಸಿದ್ದ ಡ್ರ್ಯಾಗನ್‌ ನೌಕೆಯ ಉಡ್ಡಯನವನ್ನು ಒಂದು ತಿಂಗಳು ಹಿಂದೂಡಿದ್ದೂ ಅಲ್ಲದೆ ನಾಲ್ವರು ಗಗನಯಾತ್ರಿಗಳನ್ನು ಮಾ.19ರಂದೇ ಭೂಮಿಗೆ ಸುರಕ್ಷಿತವಾಗಿ ಕರೆತಂದಿದ್ದಾರೆ.

ಭೂಮಿಗೆ ಹೊಂದಿಕೊಳ್ಳಲು 45 ದಿನಗಳ ಪುನಶ್ಚೇತನ

ವಾಷಿಂಗ್ಟನ್‌: ಸುದೀರ್ಘ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಶೂನ್ಯ ಗುರುತ್ವಾಕರ್ಷಣ ವಲಯದಲ್ಲಿ ಜೀವನ ನಡೆಸಿದ್ದ ಸುನಿತಾ ಮತ್ತು ಬುಚ್‌ ಅವರಿಗೆ ಮುಂದಿನ 45 ದಿನಗಳ ಕಾಲ ನಾಸಾದ ಕೇಂದ್ರದಲ್ಲಿ ವಿಶೇಷವಾದ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುವುದು. ಈ ಮೂಲಕ ಅವರ ದೇಹವನ್ನು ಪುನಃ ಭೂಮಿಯ ಗುರುತ್ವಾಕರ್ಷಣೆ ಬಲಕ್ಕೆ ಹೊಂದಿಕೊಳ್ಳುವಂತೆ ಪರಿವರ್ತಿಸಲಾಗುವುದು.

ದಿನಕ್ಕೆ ಕನಿಷ್ಠ 2 ಗಂಟೆಯಂತೆ ವಾರಕ್ಕೆ ಏಳು ದಿನ ಸೇರಿ ಒಟ್ಟು 45 ದಿನಗಳ ಇಬ್ಬರೂ ಗಗನಯಾನಿಗಳಿಗೆ ದ ಆಸ್ಟ್ರೋನಾಟ್‌ ಸ್ಟ್ರೆಂಥ್‌, ಕಂಡೀಷನಿಂಗ್‌ ಆ್ಯಂಡ್‌ ರೀಹ್ಯಾಬಿಲಿಟೇಷನ್‌ ಕೇಂದ್ರದ ತಜ್ಞರು ದೈಹಿಕವಾಗಿ ಮತ್ತು ಮಾನಸಿಕವಾಗಿ ಪುನಶ್ಚೇತನದ ಚಿಕಿತ್ಸೆ ನೀಡಲಿದ್ದಾರೆ. ಭೂಮಿಗೆ ಇಳಿದ ಮೊದಲ ದಿನದಿಂದಲೇ ಅಂದರೆ ಬುಧವಾರದಿಂದಲೇ ಇಬ್ಬರೂ ಗಗನಯಾತ್ರಿಗಳು ಇಂಥ ಚಿಕಿತ್ಸೆ, ಆರೈಕೆಗೆ ಒಳಪಡಲಿದ್ದಾರೆ. ಒಟ್ಟು ಮೂರು ಹಂತದಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತದೆ

ಹಂತ 1ಸ್ವತಂತ್ರ್ಯವಾಗಿ ನಡೆಯುವ ಇಲ್ಲವೇ ಇತರರ ನೆರವಿನಿಂದ ನಡೆಯಲು ನೆರವು ಕಲಿಸಲಾಗುವುದು. ಸ್ನಾಯುಗಳಿಗೆ ಬಲತುಂಬುವ ಕೆಲಸ ಮಾಡಲಾಗುವುದು.

ಹಂತ 2ದೇಹದ ಮೇಲೆ ಸಮತೋಲನ, ಅಂಗಾಂಗಳ ಸ್ಥಾನಗಳ ಅರಿವು, ಒಂದೇ ಕಾಲಿನಲ್ಲಿ ನಿಲ್ಲುವ ಅಭ್ಯಾಸ, ಹೃದಯ ಸಂಬಂಧಿ ದೈಹಿಕ ಕಸರತ್ತು, ರಿವರ್ಸ್‌ ಲಂಗ್‌ ಕಸರತ್ತು, ಕಣ್ಣು ಮುಚ್ಚಿಕೊಂಡು ದೈಹಿಕ ಕಸರತ್ತು ಮೊದಲಾದವುಗಳನ್ನು ನಡೆಸಲಾಗುವುದು.

ಹಂತ 3ಇದು ಅತ್ಯಂತ ಸುದೀರ್ಘ ಪ್ರಕ್ರಿಯೆ. ಮೊದಲ 2 ಹಂತದ ಪರೀಕ್ಷೆಗಳ ಫಲಿತಾಂಶ, ವೈದ್ಯಕೀಯ ಸ್ಥಿತಿಗತಿ ಆಧರಿಸಿ ಪ್ರತಿ ಗಗನಯಾತ್ರಿಗೂ ಪ್ರತ್ಯೇಕವಾದ ಚಿಕಿತ್ಸೆ/ ಆರೈಕೆ ಮಾಡಲಾಗುವುದು.

ಬೆಂಕಿಯುಂಡೆಯ ಮೂಲಕ ಸುನಿತಾ ಭೂಮಿಗೆ ಆಗಮನ

ಫ್ಲೋರಿಡಾ: ಸುನಿತಾ, ಬುಚ್‌ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್‌ ನೌಕೆ ಬುಧವಾರ ಸಮುದ್ರದಲ್ಲಿ ಯಾವುದೇ ತೊಂದರೆ ಇಲ್ಲದಂತೆ ಬಂದು ಅಪ್ಪಳಿಸುತ್ತಿದ್ದಂತೆ ನಾಸಾದ ಸಾವಿರಾರು ವಿಜ್ಞಾನಿಗಳು ಸೇರಿದಂತೆ ವಿಶ್ವಾದ್ಯಂತ ಕೋಟ್ಯಂತರ ಜನರು ನಿಟ್ಟುಸಿರು ಬಿಟ್ಟರು.

ಏಕೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯ ವಾತಾವರಣದ ಪ್ರವೇಶಿಸುವ ಪ್ರಕ್ರಿಯೆ ಅತ್ಯಂತ ಸೂಕ್ಷ್ಮ ಮತ್ತು ಅತ್ಯಂತ ಕಠಿಣವಾದುದು. ಹೀಗಾಗಿ ಈ ಹಂತವನ್ನು ಯಶಸ್ವಿಯಾಗಿ ದಾಟಿದ ಬಳಿಕವಷ್ಟೇ ಬಾಹ್ಯಾಕಾಶ ಯಾನಿಗಳ ಸುರಕ್ಷಿತವಾಗಿ ಮರಳಿದ್ದು ಖಚಿತವಾಗುವುದು.ಏಕೆಂದರೆ, ಐಎಸ್‌ಎಸ್‌ನಿಂದ ಹೊರಟು ವಿವಿಧ ಹಂತದ ಕಕ್ಷೆಗಳನ್ನು ದಾಟಿ ಡ್ರ್ಯಾಗನ್‌ ನೌಕೆ ಭೂಮಿಯತ್ತ ಆಗಮಿಸುವಾಗ ಅದರ ವೇಗ ಗಂಟೆಗೆ 28000 ಕಿ.ಮೀದಷ್ಟು ವೇಗ ಹೊಂದಿರುತ್ತದೆ. ಅಂದರೆ ಬೆಂಗಳೂರಿನಿಂದ ದೆಹಲಿಗೆ ಕೇವಲ 4 ನಿಮಿಷದಲ್ಲಿ ಚಲಿಸುವ ವೇಗದಲ್ಲಿ ನೌಕೆ ಚಲಿಸುತ್ತಿರುತ್ತದೆ. ಈ ವೇಗದಲ್ಲಿ ನೌಕೆಯ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಭಾರೀ ಘರ್ಷಣೆ ಉಂಟಾಗಿ ನೌಕೆಯ ಹೊರಮೈನ ಉಷ್ಣಾಂಶ 1600-2000 ಡಿ.ಸೆಗೆ ತಲುಪಿರುತ್ತದೆ. ಆದರೆ ನೌಕೆಗೆ 6 ಹಂತದ ಉಷ್ಣನಿರೋಧಕ ವ್ಯವಸ್ಥೆ ಅಳವಿಡಿಸಿರುವ ಕಾರಣ ಒಳಗಿದ್ದವರಿಗೆ ಏನೂ ಆಗದು. ಇದಕ್ಕೆ ಉದಾಹರಣೆ ಎಂಬಂತೆ ಬುಧವಾರ ಭೂಮಿಗೆ ಇಳಿದ ನೌಕೆಯ ಹೊರವಲಯ ಉಷ್ಣದ ಹೊಡೆತಕ್ಕೆ ಕಪ್ಪುಗಟ್ಟಿದ್ದನ್ನು ಕಾಣಬಹುದಾಗಿತ್ತು. ಒಂದು ವೇಳೆ ಈ ಹಂತದಲ್ಲಿ ಆಗುವ ಯಾವುದೇ ಸಣ್ಣ ದೋಷ ಕೂಡಾ ಇಡೀ ನೌಕೆಯನ್ನೇ ಸುಟ್ಟು ಭಸ್ಮ ಮಾಡಬಹುದು. ಈ ಹಿಂದೆ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರನ್ನು ಕರೆ ತರುತ್ತಿದ್ದ ನೌಕೆ ಕೂಡಾ ಇದೇ ರೀತಿ ದೋಷಕ್ಕೆ ತುತ್ತಾಗಿ ಆಗಸದಲ್ಲೇ   ಉರಿದು ಬೂದಿಯಾಗಿತ್ತು.

ಭೂಮಿಗೆ ಬಂದಾಯ್ತು, ಮುಂದಿದೆ ಹಲವು ಸವಾಲು

ಅಲ್ಪಾವಧಿಯ ಮಿಷನ್‌ ಒಂದರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿ, ಬಳಿಕ ತಾಂತ್ರಿಕ ಸಮಸ್ಯೆಯಿಂದಾಗಿ ಅನಿರೀಕ್ಷಿತವಾಗಿ 286 ದಿನಗಳ ಅಂತರಿಕ್ಷವಾಸ ಪೂರೈಸಿದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಭೂಮಿಗೆ ಮರಳಿದ್ದಾರೆ. 9 ತಿಂಗಳುಗಳ ಬಳಿಕ ನಿರ್ವಾತ ಪ್ರದೇಶದಿಂದ ಗುರುತ್ವಾಕರ್ಷಣಾ ಬಲವಿರುವ ಮಾತೃಗ್ರಹಕ್ಕೆ ಬಂದಿರುವ ಅವರು ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಅನೇಕ ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ಎದುರಿಸಲಿದ್ದಾರೆ. ಇದನ್ನು ಸುಲಭಗೊಳಿಸುವ ಸಲುವಾಗಿ ಗಗನಯಾತ್ರಿಗಳಿಗಾಗಿ ಹಲವು ವಾರಗಳ ಪುನಶ್ಚೇತನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಸುನಿತಾ ಮುಂದಿರುವ ಸವಾಲುಗಳೇನು?:ಶೂನ್ಯ ಗುರುತ್ವಾಕರ್ಷಣ ಪ್ರದೇಶದಲ್ಲಿ ಸುದೀರ್ಘ ಕಾಲ ಯಾವುದೇ ವ್ಯಕ್ತಿ ವಾಸವಿದ್ದರೆ ಅವರಲ್ಲಿ ದೈಹಿಕವಾಗಿ ಸಾಕಷ್ಟು ಬದಲಾವಣೆ, ತೊಂದರೆಗಳು ಕಾಣಿಸಿಕೊಳ್ಳುತ್ತದೆ. ನಿರ್ವಾತ ಪ್ರದೇಶದಲ್ಲಿ ಗಗನಯಾತ್ರಿಗಳು ಸದಾ ತೇಲುತ್ತಿರುವ ಕಾರಣ ಭೂಮಿಯ ವಾತಾವರಣಕ್ಕೆ ಒಡ್ಡಿಕೊಳ್ಳುತ್ತಿದ್ದಂತೆ ತಲೆ ಸುತ್ತುವಿಕೆ, ವಾಕರಿಕೆ, ನಡಿಗೆಯಲ್ಲಿ ಅಸ್ಥಿರತೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ.

ಮೂಳೆಗಳ ಸಾಂದ್ರತೆ ಇಳಿಕೆ:ಅಂತರಿಕ್ಷದಲ್ಲಿ ಗಗನಯಾತ್ರಿಗಳ ಮೂಳೆ ಹಾಗೂ ಸ್ನಾಯುಗಳಲ್ಲಿ ಹಲವು ಬದಲಾವಣೆಗಳಾಗುತ್ತವೆ. ಗುರುತ್ವಾಕರ್ಷಣೆ ಇಲ್ಲದ ಕಾರಣ ಅವರ ಸ್ನಾಯುಗಳಲ್ಲಿ ಜೀವಕೋಶಗಳ ನಷ್ಟವಾಗುತ್ತವೆ. ಜೊತೆಗೆ ಶ್ರಮದ ಕೆಲಸಗಳಿಲ್ಲದ ಕಾರಣ ಮೂಳೆಗಳ ಸಾಂದ್ರತೆಯಲ್ಲಿ ಇಳಿಕೆಯಾಗಿರುತ್ತದೆ. ಅವರು ಪ್ರತಿ ತಿಂಗಳು ಬೆನ್ನುಮೂಳೆ, ಸೊಂಟ ಮತ್ತು ತೊಡೆಯ ಎಲುಬುಗಳ ಶೇ.1ರಷ್ಟು ಸಾಂದ್ರತೆಯನ್ನು ಕಳೆದುಕೊಳ್ಳುವ ಕಾರಣ ಭೂಮಿಯಲ್ಲಿ ಅವುಗಳಿಗೆ ಹಾನಿಯುಂಟಾಗುವ ಸಾಧ್ಯತೆಯಿರುತ್ತದೆ. ಇದು ಶಾಶ್ವತವಾಗಿ ಅಂತೆಯೇ ಉಳಿಯುವ ಸಾಧ್ಯತೆಗಳೂ ಇವೆ.

ಊದಿದ ತಲೆ, ಕೃಶ ಕಾಲುಗಳು:ಬಾಹ್ಯಾಕಾಶದಲ್ಲಿ ದೇಹದಲ್ಲಿರುವ ರಕ್ತ ಮತ್ತು ನೀರಿನಂತಹ ದ್ರವಗಳನ್ನು ಕೆಳಮುಖವಾಗಿ ಎಳೆಯುವ ಗುರುತ್ವಾಕರ್ಷಣೆಯ ಕೊರತೆಯಿಂದ ಅವುಗಳು ಗಗನಯಾತ್ರಿಗಳ ತೆಲಯ ಭಾಗದಲ್ಲಿ ಶೇಖರಣೆಯಾಗಿ ಅವರ ತಲೆ ಊದಿಕೊಂಡಿರುತ್ತದೆ. ಇದರಿಂದ ಬುರುಡೆಯ ಮೇಲೆ ಅಧಿಕ ಒತ್ತಡವಿರುತ್ತದೆ. ಅತ್ತ ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆಯಿಂದಾಗಿ ಅವರ ಕಾಲುಗಳು ಕೃಶ ಹಾಗೂ ಬಲಹೀನವಾಗಿರುತ್ತವೆ. ಪರಿಣಾಮವಾಗಿ ಭೂಮಿಗೆ ಮರಳುತ್ತಿದ್ದಂತೆ ಗಗನಯಾತ್ರಿಗಳು ನಡೆಯಲು ಕಷ್ಟಪಡುವಂತಾಗುತ್ತದೆ.

ಎತ್ತರದಲ್ಲಿ ಹೆಚ್ಚಳ:ಬಅಹ್ಯಾಕಾಶದಲ್ಲಿ ಗಗನಯಾತ್ರಿಗಳ ಬೆನ್ನುಮೂಳೆ ಕೆಲ ಇಂಚುಗಳಷ್ಟು ಬೆಳವಣಿಗೆ ಕಾಣುವ ಕಾರಣ ಅವರ ದೇಹದ ಎತ್ತರದಲ್ಲೂ ಹೆಚ್ಚಳವಾಗಿರುತ್ತದೆ. ಆದರೆ ಈ ಬದಲಾವಣೆಯು ಶಾಶ್ವತವಲ್ಲ. ಭೂಮಿಗೆ ಮರಳುತ್ತಿದ್ದಂತೆ ಬಾಹ್ಯಾಕಾಶಯಾನಿಗಳ ಎತ್ತರ ಮರಳಿ ಮೊದಲಿನಂತೆ ಆಗುವುದು. ಈ ಪ್ರಕ್ರಿಯೆಯಲ್ಲಿ ಅವರ ಬೆನ್ನುಮೂಳೆಯಲ್ಲಿ ಬದಲಾವಣೆಯಾಗುವ ಕಾರಣ ತೀವ್ರ ಬೆನ್ನುನೋವಿನಂತಹ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುವುದು.

ಮಕ್ಕಳಿರುವಂತಹ ಪಾದಗಳು:ಅಂತರಿಕ್ಷದಲ್ಲಿ ನಡಿಗೆಯ ಅಗತ್ಯ ಇಲ್ಲದ ಕಾರಣ ಗಗನಯಾತ್ರಿಗಳ ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದುವಾಗುತ್ತದೆ. ಇದರಿಂದ ಭೂಮಿಯ ಮೇಲೆ ಸಹಜ ನಡಿಗೆಯೂ ಅವರಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ. ಈ ಸವಾಲನ್ನು ಜಯಿಸಲೋಸುವ ಅವರು ಬರಿಗಾಲಲ್ಲಿ ನಡೆಯುವುದು, ಮಸಾಜ್‌ನಂತಹ ಮಾರ್ಗಗಳನ್ನು ಅನುಸರಿಸುತ್ತಾರೆ.

ಹೃದಯದ ಮೇಲೆಯೂ ಪರಿಣಾಮ:ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧವಾಗಿ ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಪಂಪ್‌ ಮಾಡುವ ಅವಶ್ಯಕತೆ ಇಲ್ಲದ ಕಾರಣ ಬಾಹ್ಯಾಕಾಶದಲ್ಲಿ ಹೃದಯದ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಿರುತ್ತದೆ. ಜೊತೆಗೆ ಅದು ಶೇ.9.4ರಷ್ಟು ಗೋಳಾಕಾರಕ್ಕೆ ತಿರುಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುವುದಿಲ್ಲವಾದರೂ ಹೃದಯದ ಸಾಮರ್ಥ್ಯ ಕ್ಷೀಣಿಸುತ್ತದೆ. ಜೊತೆಗೆ ಭೂಮಿಗೆ ಮರಳುತ್ತಿದ್ದಂತೆ ಹೃದಯರಕ್ತನಾಳದ ಸಮಸ್ಯೆಗಳು ಕಂಡುಬರುತ್ತವೆ. ಆದರೆ ಭೂಮಿಯ ವಾತಾವರಣಕ್ಕೆ ಒಡ್ಡಿಕೊಳ್ಳುತ್ತಿದ್ದಂತೆ ಇವುಗಳು ಕ್ರಮೇಣವಾಗಿ ಸರಿಯಾಗುತ್ತವೆ. ಆದರೆ ರಕ್ತದೊತ್ತಡ ಮತ್ತು ಹೃದಯದ ಒತ್ತಡ ಉಂಟಾಗುವ ಸಂಭವವಿರುತ್ತದೆ.

ದೀರ್ಘಾವಧಿ ಸವಾಲುಗಳೇನು?:ಬಾಹ್ಯಾಕಾಶದ ವಿಕಿರಣಗಳಿಂದ ಗಗನಯಾತ್ರಿಗಳಿಗೆ ಯಾವುದೇ ರಕ್ಷಣೆ ಇರದ ಕಾರಣ ಸುದೀರ್ಘ ಅವಧಿಗೆ ಅದಕ್ಕೆ ಒಡ್ಡಿಕೊಳ್ಳುವುದರಿಂದ ಅವರ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಅಂಗಾಂಶಗಳಿಗೂ ಹಾನಿಯಾಗಿ, ದೈಹಿಕ ಸಾಮರ್ಥ್ಯ ಹಾಗೂ ನಿಯಂತ್ರಣ ಕುಂದುವುದು. ಪರಿಣಾಮವಾಗಿ ಅಂಗಾಗಗಳ ನಡುವೆ ಸಮನ್ವಯ ಕೊರತೆ ಉಂಟಾಗುತ್ತದೆ.

ಮೆದುಳಿಗೆ ಸಂದೇಶ ರವಾನೆಗೆ ತೊಡಕು:ಗುರುತ್ವಾಕರ್ಷಣೆಯ ಕುರಿತ ಮಾಹಿತಿಯನ್ನು ಮೆದುಳಿಗೆ ತಲುಪಿಸುವ ವೆಸ್ಟಿಬುಲರ್ ಅಂಗವು ದೇಹದ ಕಿವಿಯ ಭಾಗದಲ್ಲಿರುತ್ತದೆ. ನಿರ್ವಾತ ಪ್ರದೇಶದಲ್ಲಿ ಇದು ಮೆದುಳಿಗೆ ಕಳಿಸುವ ಸಂದೇಶಗಳಲ್ಲಿ ಬದಲಾವಣೆಗಳಾಗಿ, ಎಲ್ಲಾ ಗೊಂದಲಮಯವಾಗುತ್ತದೆ. ಬಳಿಕ ಭೂಮಿಗೆ ಮರಳಿದಾಗ ವೆಸ್ಟಿಬುಲರ್ ಅಂಗ ಮತ್ತೆ ಮೊದಲಿನಂತೆ ಮೆದುಳಿಗೆ ಸಂದೇಶ ಕಳಿಸತೊಡಗುತ್ತದೆ. ಆದರೆ ಕೆಲ ತಿಂಗಳುಗಳ ಕಾಲ ಅಭ್ಯಾಸ ತಪ್ಪಿದ ಕಾರಣ, ಈ ಪದ್ಧತಿಗೆ ಮತ್ತೆ ಒಗ್ಗಿಕೊಳ್ಳಲು ಮೆದುಳಿಗೆ ಕಷ್ಟವಾಗುತ್ತದೆ.

ಮಾನಸಿಕ ಸವಾಲುಗಳೇನು?:ಹಲವು ತಿಂಗಳುಗಳ ಕಾಲ ಒಬ್ಬಂಟಿಯಾಗಿ, ಸಣ್ಣ ಜಾಗದಲ್ಲೇ ಇರುವ ಕಾರಣ ಗಗನಯಾತ್ರಿಗಳಿಗೆ ಸಮಾಜದೊಂದಿಗಿನ ಸಂಪರ್ಕ ಕಡಿದುಕೊಂಡಂತೆ ಭಾಸವಾಗುತ್ತಿರುತ್ತದೆ. ಇದರಿಂದ ಅವರನ್ನು ಖಿನ್ನತೆ, ಆತಂಕ, ಅರಿವಿನ ಕೊರತೆಯಂತಹ ಸಮಸ್ಯೆಗಳು ಕಾಡತೊಡಗುತ್ತವೆ. ಪರಿಣಾಮವಾಗಿ ಅವರ ಸಹನಾಶಕ್ತಿ, ಚುರುಕುತನ ಇಳಿಕೆಯಾಗಿ, ನಿರ್ಯಣಯಿಸುವ ಶಕ್ತಿ, ಪ್ರತಿಕ್ರಿಯಿಸುವ ಸಮಯ ಕುಂದುತ್ತದೆ. ಜೊತೆಗೆ ಭಾವನಾತ್ಮಕ ಸ್ಥಿರತೆಯೂ ಕಡಿಮೆಯಾಗಿರುತ್ತದೆ.

Share this article