ನವದೆಹಲಿ/ಬೆಂಗಳೂರು: ಪ್ರತಿಷ್ಠಿತ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ ‘ಮಿಥ್ಯ’ ಸಿನಿಮಾದಲ್ಲಿನ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ.
2024ರಲ್ಲಿ ತೆರೆಕಂಡ, ಅನಾಥ ಬಾಲಕನೊಬ್ಬನ ನೋವಿನ ಕತೆಯನ್ನು ತೆರೆದಿಟ್ಟ ಕನ್ನಡದ ‘ಮಿಥ್ಯ’ ಎಂಬ ಸಿನಿಮಾಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ. ಇನ್ನು ಕರಾವಳಿಯ ಭಾಷೆಯಾದ ತುಳುವಿನ ‘ಇಂಬು’ ಉತ್ತಮ ತುಳು ಚಿತ್ರ ಎನಿಸಿಕೊಂಡಿದೆ.
ಮಿಥ್ಯವನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಸುಮಂತ್ ಭಟ್ ಅವರ ನಿರ್ದೇಶನವಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಆತಿಶ್ ಎಸ್. ಶೆಟ್ಟಿ ಅವರಿಗೆ ಉತ್ತಮ ಬಾಲಕ ನಟ ಪ್ರಶಸ್ತಿ ಹಾಗೂ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡ ರೂಪಶ್ರೀ ವರ್ಕಾಡಿ ಅವರಿಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.
‘ಮಿಥ್ಯ’ ಸಿನಿಮಾದ ಪ್ರಧಾನ ಪಾತ್ರದ ಚಿಕ್ಕಮ್ಮನ ಪಾತ್ರದಲ್ಲಿ ರೂಪಶ್ರೀ ವರ್ಕಾಡಿ ನಟಿಸಿದ್ದಾರೆ. ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಂದಿರುವುದು, ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ.
ಈ ಹಿಂದೆ ಅರುಂಧತಿ ನಾಗ್ ಅವರಿಗೆ ಬಾಲಿವುಡ್‌ನ ‘ಪಾ’ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಆದರೆ ಕನ್ನಡ ಚಿತ್ರಕ್ಕೆ ದೊರೆತಿದ್ದು ಇದೇ ಮೊದಲು. ರೂಪಶ್ರೀ ವರ್ಕಾಡಿಯವರು ಮಂಜೇಶ್ವರ ವರ್ಕಾಡಿಯವರಾಗಿದ್ದು, ಹಲವಾರು ಕನ್ನಡ ಮತ್ತು ತುಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೂಲತಃ ರಂಗಭೂಮಿ ನಟಿ.
ಅನಿರೀಕ್ಷಿತವಾಗಿ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಮಿಥುನ್, ಮುಂಬೈನಿಂದ ಕರಾವಳಿ ಉಡುಪಿಗೆ ಸ್ಥಳಾಂತರಗೊಂಡು, ಚಿಕ್ಕಮ್ಮನ ಮನೆಯಲ್ಲಿ ಹೊಸ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುವ ಭಾವನಾತ್ಮಕ ಹೋರಾಟವನ್ನು ಈ ಚಿತ್ರದ ಕತೆಯಾಗಿದೆ.
ಇಂಬು ಚಿತ್ರದಲ್ಲೇನಿದೆ?:
ತುಳು ಚಿತ್ರ ''''''''ಇಂಬು'''''''', ಕರಾವಳಿಯ ದೈವಾರಾಧನೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಹೆಣೆದ ಭಾವನಾತ್ಮಕ ಕತೆ.
ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ- ‘ಆರ್ಟಿಕಲ್ 370’ ಅತ್ಯುತ್ತಮ ಚಿತ್ರ । ರಾಜ್‌ಕುಮಾರ್ ಶ್ರೇಷ್ಠ ನಿರ್ದೇಶಕ
ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ (ಬ್ರಹ್ಮಯುಗಂ) ಹಾಗೂ ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್) ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್ (ಆರ್ಟಿಕಲ್ 370) ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಆರ್ಟಿಕಲ್ 370’ಗೆ ಅತ್ಯುತ್ತಮ ಚಲನಚಿತ್ರ ಹಾಗೂ ತಮಿಳು ಚಿತ್ರ ‘ಅಮರನ್’ಗಾಗಿ ರಾಜ್‌ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.