ಪಟ್ನಾಯಕ್‌ ಆಪ್ತ ಪಾಂಡಿಯನ್‌ ರಾಜಕೀಯದಿಂದಲೇ ನಿವೃತ್ತಿ

KannadaprabhaNewsNetwork | Updated : Jun 10 2024, 04:52 AM IST

ಸಾರಾಂಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜು ಜನತಾದಳದ ಪರಮೋಚ್ಚ ನಾಯಕ ನವೀನ್‌ ಪಟ್ನಾಯಕ್‌ ಅವರ ಅತ್ಯಾಪ್ತ, ತಮಿಳುನಾಡು ಮೂಲದ ಮಾಜಿ ಐಎಎಸ್‌ ಅಧಿಕಾರಿ ವಿ.ಕೆ. ಪಾಂಡಿಯನ್‌ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜು ಜನತಾದಳದ ಪರಮೋಚ್ಚ ನಾಯಕ ನವೀನ್‌ ಪಟ್ನಾಯಕ್‌ ಅವರ ಅತ್ಯಾಪ್ತ, ತಮಿಳುನಾಡು ಮೂಲದ ಮಾಜಿ ಐಎಎಸ್‌ ಅಧಿಕಾರಿ ವಿ.ಕೆ. ಪಾಂಡಿಯನ್‌ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಈ ಸಂಬಂಧ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ನಾನು ಸಣ್ಣ ಗ್ರಾಮದ, ವಿನೀತ ಕುಟುಂಬದಿಂದ ಬಂದಿದ್ದೇನೆ. ಬಾಲ್ಯದಿಂದಲೂ ನನಗೆ ಐಎಎಸ್‌ ಸೇರಿ, ಜನರ ಸೇವೆ ಮಾಡಬೇಕೆಂಬ ಬಯಕೆ ಇತ್ತು. ಒಡಿಶಾ ಮಣ್ಣಿಗೆ ಕಾಲಿಟ್ಟ ದಿನದಿಂದಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ. 

ಈಗ ಪ್ರಜ್ಞಾಪೂರ್ವಕವಾಗಿ ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ. ಈ ಪ್ರಯಾಣದಲ್ಲಿ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನಿಂದಾಗಿ ಬಿಜೆಡಿಗೆ ಸೋಲಾಗಿದ್ದರೆ ಅದಕ್ಕೂ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಾರಿಯ ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಇತಿಹಾಸದಲ್ಲೇ ಬಿಜೆಡಿ ಅತ್ಯಂತ ಕಳಪೆ ಸಾಧನೆ ಮಾಡಿತ್ತು. 24 ವರ್ಷಗಳ ಬಳಿಕ ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದಲ್ಲದೆ, ಲೋಕಸಭೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ಇದಕ್ಕೆ ಪಾಂಡಿಯನ್‌ ಅವರೇ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿದ್ದವು. 

ಜೂ.4ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಪಾಂಡಿಯನ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.ನವೀನ್‌ ಅವರ ನೆಚ್ಚಿನ ಅಧಿಕಾರಿಯಾಗಿದ್ದ ಪಾಂಡಿಯನ್‌ ಕಳೆದ ನವೆಂಬರ್‌ನಲ್ಲಿ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಡಿ ಸೇರಿದ್ದರು. 

ಅವರನ್ನು ನವೀನ್‌ ಪಟ್ನಾಯಕ್‌ ಉತ್ತರಾಧಿಕಾರಿ ಮಾಡಬಹುದು ಎಂಬ ವದಂತಿಗಳು ಹಬ್ಬಿದ್ದವು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪಟ್ನಾಯಕ್‌ ಜತೆಗೇ ಯಾವಾಗಲೂ ಪಾಂಡಿಯನ್‌ ಇರುತ್ತಿದ್ದರು. ಪಾಂಡಿಯನ್‌ ಬಗ್ಗೆ ಚುನಾವಣೆ ಪ್ರಚಾರದಲ್ಲೂ ಬಿಜೆಪಿ ಟೀಕೆ ಮಾಡಿ, ತಮಿಳುನಾಡು ಅಧಿಕಾರಿಗೆ ಪಟ್ನಾಯಕ್‌ ರಾಜ್ಯ ಬಿಡಲು ಹೊರಟಿದ್ದಾರೆ ಎಂದು ಕಿಡಿಕಾರಿತ್ತು.

Share this article