ಆಯುರ್ವೇದದಿಂದ ಕ್ಯಾನ್ಸರ್‌ ಗುಣವಾಗಿದೆ ಎಂದಿದ್ಧ ಮಾಜಿ ಕ್ರಿಕೆಟಿಗ ಸಿಧುಗೆ ₹850 ಕೋಟಿ ನೋಟಿಸ್‌

KannadaprabhaNewsNetwork | Updated : Nov 30 2024, 04:49 AM IST

ಸಾರಾಂಶ

‘ನಿಂಬೆ ರಸ ಮತ್ತು ಅರಿಶಿಣದಿಂದ ನನ್ನ ಪತ್ನಿಯ ಕ್ಯಾನ್ಸರ್‌ ಗುಣವಾಗಿದೆ’ ಎಂದು ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರಿಗೆ ಛತ್ತೀಸ್‌ಗಢ ಸಂಸ್ಥೆಯೊಂದು 850 ಕೋಟಿ ರು. ನೋಟಿಸ್‌ ನೀಡಿದೆ.

ನವದೆಹಲಿ: ‘ನಿಂಬೆ ರಸ ಮತ್ತು ಅರಿಶಿಣದಿಂದ ನನ್ನ ಪತ್ನಿಯ ಕ್ಯಾನ್ಸರ್‌ ಗುಣವಾಗಿದೆ’ ಎಂದು ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರಿಗೆ ಛತ್ತೀಸ್‌ಗಢ ಸಂಸ್ಥೆಯೊಂದು 850 ಕೋಟಿ ರು. ನೋಟಿಸ್‌ ನೀಡಿದೆ. 

ಇತ್ತೀಚೆಗೆ ತಮ್ಮ ಪತ್ನಿ ನವಜೋತ್‌ ಕೌರ್‌ ಅವರಿಗೆ ಕ್ಯಾನ್ಸರ್‌ ಬಂದಾಗ ಅರಿಶಿಣ ಮತ್ತು ನಿಂಬೆ ರಸದಿಂದ ಗುಣವಾಯಿತು ಎಂದು ಸಿಧು ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಛತ್ತೀಸ್‌ಗಢ ಸಿವಿಕ್‌ ಸೊಸೈಟಿ, ಸಿಧು ಅವರ ಹೇಳಿಕೆಯು ಜನರಿಗೆ ಅಲೋಪತಿ ಚಿಕಿತ್ಸೆ ಮೇಲಿನ ನಂಬಿಕೆ ಕಡಿಮೆ ಮಾಡುತ್ತದೆ. ಜೊತೆಗೆ ಬಲವಂತವಾಗಿ ಅಲ್ಲೋಪತಿ ಬಿಡುವಂತೆ ಮಾಡುತ್ತದೆ. ಇದಲ್ಲದೇ ರೋಗಿಗಳು ಇನ್ನಷ್ಟು ಸಂಕಷ್ಟಕ್ಕೆ ತುತ್ತಾಗುತ್ತಾರೆ. ಹೀಗಾಗಿ ತಮ್ಮ ಹೇಳಿಕೆಗೆ ಸಾಕ್ಷಿ ನೀಡಿ ಸ್ಪಷ್ಟನೆ ನೀಡಬೇಕು ಇಲ್ಲದೇ ಹೋದಲ್ಲಿ  850 ಕೋಟಿ ರು. ನೀಡಬೇಕು ಎಂದು ನೋಟಿಸ್‌ ಜಾರಿ ಮಾಡಿದೆ.

ಇವಿಎಂ ಪ್ರಶ್ನಿಸಿ ಸಲ್ಲಿಸಿದ್ದ 42 ಅರ್ಜಿಗಳು ಈವರೆಗೆ ಕೋರ್ಟಲ್ಲಿ ವಜಾ: ಕೇಂದ್ರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪ್ರಶ್ನಿಸಿ ಸುಪ್ರೀಂ ಹಾಗೂ ವಿವಿಧ ಹೈಕೋರ್ಟ್‌ಗಳಿಗೆ ಸಲ್ಲಿಸಿದ್ದ 42 ಅರ್ಜಿಗಳನ್ನು ನ್ಯಾಯಾಲಯಗಳು ವಜಾಗೊಳಿಸಿವೆ ಎಂದು ಶುಕ್ರವಾರ ಲೋಕಸಭೆಗೆ ಸರ್ಕಾರ ತಿಳಿಸಿದೆ. ಇವಿಎಂ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಮತಯಂತ್ರಗಳು ನಂಬಲರ್ಹ, ವಿಶ್ವಾಸಾರ್ಹ ಮತ್ತು ಟ್ಯಾಂಪರ್ ಪ್ರೂಫ್ ಎಂದು ಉನ್ನತ ನ್ಯಾಯಾಧೀಕರಣ ಪದೇ ಪದೇ ಹೇಳುತ್ತಿದೆ. ಇವಿಎಂ ಯಾವುದೇ ರೇಡಿಯೋ ತರಂಗಾಂತರ ಸಂವಹನ ಸಾಮರ್ಥ್ಯವನ್ನು ಹೊಂದಿಲ್ಲ. ಆದ್ದರಿಂದ ಇದನ್ನು ವೈರ್‌ಲೆಸ್, ಬ್ಲೂಟೂತ್ ಮತ್ತು ವೈ-ಫೈ ಮೂಲಕ ಸಂವಹನ ನಡೆಸಲು ಸಾಧ್ಯವಿಲ್ಲ. ಇದು ಸಂಪೂರ್ಣವಾಗಿ ವಿದ್ಯುನ್ಮಾನ ಯಂತ್ರವಾಗಿದೆ. ಇದು ಹಲವಾರು ತಾಂತ್ರಿಕ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಸಚಿವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು: ಎಸೈಟಿ ತನಿಖೆ ಶುರು

ತಿರುಪತಿ: ಇಲ್ಲಿನ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ದನ, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆ ಅಂಶ ಪತ್ತೆಯಾಗಿದೆಯೇ ಎಂಬುದನ್ನು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಎಸ್‌ಐಟಿ ತಂಡ ಶುಕ್ರವಾರ ಕೆಲಸ ಶುರುಮಾಡಿದೆ. ಐವರು ಸದಸ್ಯರ ತಂಡ ತನಿಖೆ ಆರಂಭಿಸಿದೆ. ಲಡ್ಡು ತಯಾರಿಕೆಗೆ ಪಡೆಯಲಾದ ತುಪ್ಪದ ವಿವರ, ಇತ್ಯಾದಿ ದಾಖಲೆಗಳನ್ನು ಎಸ್‌ಐಟಿ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ತಿರುಪತಿಯಲ್ಲಿ ತನಿಖೆಗೆಂದೇ ಕಚೇರಿ ಸಹ ತೆರೆದಿದೆ. ಸೆಪ್ಟೆಂಬರ್‌ನಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು,‘ಹಿಂದಿನ ಸಿಎಂ ಜಗನ್‌ ಅವಧಿಯಲ್ಲಿ ತಯಾರಿಸಲಾದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಇತ್ತು’ ಎಂದು ಗಂಭೀರ ಆರೋಪ ಮಾಡಿದ್ದರು. ಇದರ ಬಳಿಕ ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ವಾದ ಆಲಿಸಿದ ಸುಪ್ರೀಂ, ಸಿಬಿಐ ಮೇಲುಸ್ತುವಾರಿಯಲ್ಲಿ 5 ಜನರ ಸ್ವತಂತ್ರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು.

ಚಲಿಸುವ ಆ್ಯಂಬುಲೆನ್ಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಗ್ಯಾಂಗ್‌ರೇಪ್‌, ಆರೋಪಿ ಸೆರೆ

ಮೌಗಂಜ್‌ (ಮಧ್ಯಪ್ರದೇಶ): ಚಲಿಸುವ ಆ್ಯಂಬುಲೆನ್ಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಹೇಯ ಘಟನೆ ಮಧ್ಯಪ್ರದೇಶದ ಮೌಗಂಜ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಸಂಬಂಧ ಆ್ಯಂಬುಲೆನ್ಸ್‌ ಚಾಲಕ ಹಾಗೂ ಆತನ ಜೊತೆಗಾರನನ್ನು ಬಂಧಿಸಲಾಗಿದೆ. ನ.22 ರಂದು ಬಾಲಕಿ, ತನ್ನ ಸೋದರಿ ಮತ್ತು ಮಾವನ ಜತೆ ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಾರ್ಗ ಮಧ್ಯೆ ನೀರು ತರಲೆಂದು ಸೋದರಿ ಹಾಗೂ ಮಾವ ಇಳಿದಿದ್ದಾರೆ. ಅವರಿಗಾಗಿ ಕಾಯದೇ ಚಾಲಕ ಆ್ಯಂಬುಲೆನ್ಸ್‌ ಓಡಿಸಿಕೊಂಡು ಹೋಗಿದ್ದಾನೆ. ರಾತ್ರಿ ಇಡೀ ಚಾಲಕ ಹಾಗೂ ಚಾಲಕನ ಜೊತೆಗಾರ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬೆಳಗ್ಗೆ ಆಕೆಯನ್ನು ರಸ್ತೆ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ.

Share this article