ಮುಂಬೈ: ಮಹಾರಾಷ್ಟ್ರದ ಆಡಳಿತ ಮತ್ತು ವಿಪಕ್ಷ ಕೂಟದ ಭಾಗವಾಗಿರುವ ಶರದ್ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಪಕ್ಷಗಳು ಮತ್ತೆ ಒಂದಾಗುವ ಬಗ್ಗೆ ಊಹಾಪೋಹಗಳಿದ್ದು, ಅದಕ್ಕೆ ಪುಷ್ಟಿ ಕೊಡುವಂತಹ ಘಟನೆಗಳು ಒಂದರಮೇಲೊಂದರಂತೆ ನಡೆಯುತ್ತಿವೆ.
ಇದೀಗ ಆ ಕುರಿತು ಮಾತನಾಡಿರುವ ಎನ್‌ಸಿಪಿ(ಅಜಿತ್ ಬಣ) ವಕ್ತಾರ ಆನಂದ್ ಪರಾಂಜಪೆ, ‘ಪಕ್ಷಗಳ ವಿಲೀನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಊಹೆಗಳಷ್ಟೇ. ಶರದ್ ಅವರ ಕಡೆಯಿಂದ ಈ ಬಗ್ಗೆ ಪ್ರಸ್ತಾವನೆ ಬಂದರೆ ಆ ಬಗ್ಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ’ ಎಂದಿದ್ದಾರೆ.
ಜತೆಗೆ, ‘ಅಜಿತ್ ಅವರ ನಾಯಕತ್ವವನ್ನು ಒಪ್ಪುವ ಪಕ್ಷದೊಂದಿಗೆ ಮಾತ್ರ ನಾವು ಕೈ ಜೋಡಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. 2023ರಲ್ಲಿ ಅಜಿತ್ ಪವಾರ್ ಬಿಜೆಪಿ ಜತೆ ಸೇರಿಕೊಂಡ ಬೆನ್ನಲ್ಲೇ ಎನ್‌ಸಿಪಿ ಇಬ್ಭಾಗವಾಗಿತ್ತು. ಆದರೆ ಇತ್ತೀಚೆಗೆ ಶರದ್ ಮತ್ತು ಅಜಿತ್ ಕೆಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ, ಅಖಂಡ ಎನ್‌ಸಿಪಿ ಚರ್ಚೆ ಮುನ್ನೆಲೆಗೆ ಬಂದಿದೆ.