ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಎನ್‌ಡಿಎ ಕೂಟದ ನಾಯಕರ ಸಭೆ ನಡೆದಿದ್ದು, ಈ ವೇಳೆ ಉತ್ತಮ ಆಡಳಿತದ ಹಾಗೂ ರಾಜಕೀಯ ಸಮಸ್ಯೆಗಳ ಕುರಿತು ಚರ್ಚೆಗಳಾಗಿವೆ.
ಸಭೆಯಲ್ಲಿ ಅಂಬೇಡ್ಕರ್ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಎಬ್ಬಿಸಿರುವ ವಿವಾದ ಹಾಗೂ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ನಡುವಿನ ಸಮನ್ವಯ ಮತ್ತಷ್ಟು ಸುಧಾರಿಸುವ ವಿಚಾರ, ಒಂದು ದೇಶ ಒಂದು ಚುನಾವಣೆ, ವಕ್ಫ್ ಮಸೂದೆ, ದೆಹಲಿ ವಿಧಾನಸಭಾ ಚುನಾವಣೆ, ಎನ್‌ಡಿಎ ಮೈತ್ರಿಕೂಟದ ಮುಂದಿನ ತಂತ್ರಗಾರಿಕೆ ಕುರಿತೂ ಗಂಭೀರ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಡ್ಡಾ, ‘ದೂರದೃಷ್ಟಿಯ ನಾಯಕ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಅಭೂತಪೂರ್ವ ಮೈಲುಗಲ್ಲುಗಳನ್ನು ಸಾಧಿಸುತ್ತಿದ್ದು, ಜಾಗತಿಕ ಶಕ್ತಿಯಾಗಿ ರೂಪಗೊಂಡಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸಲು ಬದ್ಧವಾಗಿದೆ’ ಎಂದರು.