;Resize=(412,232))
ಚೆನ್ನೈ : ಶಾಸನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಗೆ ದಾರಿ ಮಾಡಿಕೊಡುವ ಕೇಂದ್ರದ ಪರಿಷ್ಕೃತ ಲೋಕಸಭಾ ಕ್ಷೇತ್ರ ಮರುವಿಂಗಡಣಾ ವಿಧೇಯಕಕ್ಕೆ ಬೆಂಬಲ ನೀಡಲು ವಿರೋಧ ಪಕ್ಷಗಳಾದ ತಮಿಳುನಾಡಿನ ಡಿಎಂಕೆ ಹಾಗೂ ತೆಲಂಗಾಣದ ಬಿಆರ್ಎಸ್ ಅಧಿಕೃತವಾಗಿ ಘೋಷಿಸಿವೆ. ಹೀಗಾಗಿ ಸರ್ಕಾರ 3ನೇ 2ರಷ್ಟು ಬಹುಮತ ಪಡೆಯುವತ್ತ ಮತ್ತಷ್ಟು ಹೆಜ್ಜೆಗಳನ್ನು ಇಟ್ಟಿದೆ.
ಪ್ರಸ್ತುತ 540 ಸದಸ್ಯರ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ 360 ಮತಗಳ ಅಗತ್ಯವಿದೆ. ಡಿಎಂಕೆಯ 22 ಸಂಸದರ ಬೆಂಬಲದಿಂದ ಸರ್ಕಾರದ ಬಲ 346ಕ್ಕೆ ಏರಲಿದೆ ಎನ್ನಲಾಗಿದೆ. ಹೀಗಾಗಿ ಕೇವಲ 14 ಮತಗಳ ಕೊರತೆ ಇದೆ.
ಇನ್ನು ರಾಜ್ಯಸಭೆ 242 ಸದಸ್ಯರನ್ನು ಹೊಂದಿದ್ದು, 3ನೇ 2ರಷ್ಟು ಬಹುಮತಕ್ಕೆ 162 ಸ್ಥಾನ ಬೇಕು. ಪ್ರಸ್ತುತ ಎನ್ಡಿಎ ಬಲ 140 ಇದೆ. ಇದೀಗ ಡಿಎಂಕೆ 8 ಹಾಗೂ ಬಿಆರ್ಎಸ್ 3 ಸದಸ್ಯರನ್ನು ಹೊಂದಿದ್ದು, ಮಸೂದೆ ಬೆಂಬಲಿಸುವ ಸಂಸದರ ಸಂಖ್ಯೆ 151ಕ್ಕೆ ಏರಲಿದೆ. 11 ಮತಗಳಷ್ಟೇ ಕೊರತೆ ಇದೆ.
ಇನ್ನು ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಇನ್ನೂ ನಿಲುವು ಸ್ಪಷ್ಟಪಡಿಸಿಲ್ಲ. ಅವು ಬೆಂಬಲ ನೀಡಿದರೆ ಅಥವಾ ಮತದಾನದಿಂದ ದೂರ ಉಳಿದರೆ 3ನೇ 2ರಷ್ಟು ಬಹುಮತ ಪಡೆಯಲು ಸರ್ಕಾರಕ್ಕೆ ಸಹಾಯವಾಗಲಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಮಸುದೆಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ವಿಧೇಯಕ ಮಂಡಿಸಲುದ್ದೇಶಿಸಿರುವ ಕೇಂದ್ರ ಸರ್ಕಾರಕ್ಕೆ ಆನೆ ಬಲ ಸಿಕ್ಕಂತಾಗಿದೆ.
‘ವಿಧೇಯಕದ ವಿಚಾರದಲ್ಲಿ ನಾವು ಮುಂದಿಟ್ಟಿದ್ದ ಬೇಡಿಕೆಗಳೆಲ್ಲ ಈಡೇರಿವೆ. ಹೀಗಾಗಿ ನಾವು ಈ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದೇವೆ’ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
‘ಲೋಕಸಭೆಯಲ್ಲಿ ತಮಿಳುನಾಡಿನ ಶೇ.7.18ರಷ್ಟು ಸ್ಥಾನವನ್ನು ಉಳಿಸಿಕೊಳ್ಳಲು ಡಿಎಂಕೆ ಉದ್ದೇಶಿಸಿತ್ತು. ಇದೀಗ ಪರಿಷ್ಕೃತ ವಿಧೇಯಕದಲ್ಲಿ ಈ ಸ್ಥಾನ ಶೇ.7.21ಕ್ಕೇರಲಿದೆ’ ಎಂದು ಡಿಎಂಕೆ ಮುಖಂಡ, ಕೇಂದ್ರದ ಮಾಜಿ ಸಚಿವ ಎ.ರಾಜಾ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಸ್ಟಾಲಿನ್, ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ ಕಾಂಗ್ರೆಸ್ ಪಕ್ಷ ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ಅವಾಸ್ತವಿಕವಾದ ಯೂಟರ್ನ್ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಬಿಆರ್ಎಸ್ ಬೆಂಬಲ:
ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷವು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ಘೋಷಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ತಮ್ಮ ಮೂವರು ರಾಜ್ಯಸಭಾ ಸದಸ್ಯರು ಈ ಪ್ರಸ್ತಾವನೆಯ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸತ್ತಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಹಾಲಿ ಶೇ. 24ರಷ್ಟು ಪ್ರಾತಿನಿಧ್ಯದ ಪಾಲನ್ನು ರಕ್ಷಿಸುವ ಪ್ರಸ್ತಾವನೆಯಿಂದ ತಮ್ಮ ಪ್ರಮುಖ ಆತಂಕ ದೂರವಾಗಿದೆ ಎಂದು ಬಿಆರ್ಎಸ್ ಹೇಳಿದೆ. ಕ್ಷೇತ್ರಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಹೆಚ್ಚಳ ಮತ್ತು 2051ರವರೆಗೆ ರಾಜ್ಯಗಳ ನಡುವಿನ ಪ್ರಾತಿನಿಧ್ಯ ಅನುಪಾತವನ್ನು ಬದಲಾಯಿಸದಂತೆ ರಕ್ಷಣೆ ನೀಡುವ ಅಂಶಗಳನ್ನು ಪಕ್ಷ ಸ್ವಾಗತಿಸಿದೆ.
ಈ ಪ್ರಸ್ತಾವನೆಯಿಂದ ತೆಲಂಗಾಣದ ಲೋಕಸಭಾ ಸ್ಥಾನಗಳು 17ರಿಂದ 26ಕ್ಕೆ ಏರಿಕೆಯಾಗಲಿವೆ.
ಇದೇ ವೇಳೆ, ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ತಮ್ಮ ಪಕ್ಷ ಸದಾ ಬದ್ಧವಾಗಿದೆ ಎಂದೂ ಕೆಟಿಆರ್ ಪುನರುಚ್ಚರಿಸಿದ್ದಾರೆ.
ಮಹಿಳೆಯರೇ, ಎಲ್ಲ ಅಡ್ಡಿ ನಿವಾರಿಸುವೆ
ನಾರಿಶಕ್ತಿ ಸಬಲೀಕರಣ ನಮ್ಮ ಸಂಕಲ್ಪ ಅಚಲವಾಗಿದೆ. ಮಹಿಳಾ ಮೀಸಲಾತಿಯ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಅಡಚಣೆಯನ್ನೂ ನಾವು ಖಂಡಿತವಾಗಿಯೂ ನಿವಾರಿಸುತ್ತೇವೆ ಎಂದು ದೇಶದ ಪ್ರತಿಯೊಬ್ಬ ಮಹಿಳೆಗೆ ನಾನು ಭರವಸೆ ನೀಡುತ್ತೇನೆ.
- ನರೇಂದ್ರ ಮೋದಿ, ಪ್ರಧಾನಿ